AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ್-4 ಸಾಫ್ಟ್‌ವೇರ್ ತಾಂತ್ರಿಕ ದೋಷ: ಆರ್​ಟಿಒ ಕಚೇರಿಗಳಲ್ಲಿ ವಾರದಿಂದ ಸ್ಥಗಿತಗೊಂಡ ವಾಹನ ನೋಂದಣಿ, ಸವಾರರ ಪರದಾಟ

‘ವಾಹನ್-4’ ಸಾಫ್ಟ್‌ವೇರ್‌ನಲ್ಲಿ ಕಳೆದ ಒಂದು ವಾರದಿಂದ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಾಜ್ಯದಾದ್ಯಂತ ಸಾರಿಗೆ ಇಲಾಖೆಯ (RTO) ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ಹೊಸ ವಾಹನಗಳ ನೋಂದಣಿ, ಮಾಲೀಕತ್ವ ವರ್ಗಾವಣೆ ಮತ್ತು ಪರ್ಮಿಟ್ ಸೇರಿದಂತೆ ಯಾವುದೇ ಪ್ರಮುಖ ಕೆಲಸಗಳು ಆಗದೆ ವಾಹನ ಸವಾರರು ಕಚೇರಿಗಳಿಗೆ ಅಲೆಯುವಂತಾಗಿದೆ.

ವಾಹನ್-4 ಸಾಫ್ಟ್‌ವೇರ್ ತಾಂತ್ರಿಕ ದೋಷ: ಆರ್​ಟಿಒ ಕಚೇರಿಗಳಲ್ಲಿ ವಾರದಿಂದ ಸ್ಥಗಿತಗೊಂಡ ವಾಹನ ನೋಂದಣಿ, ಸವಾರರ ಪರದಾಟ
ವಾಹನ್ 4 ಸಾಫ್ಟ್​ವೇರ್Image Credit source: tv9
ಕಿರಣ್​ ಸೂರ್ಯ
| Edited By: |

Updated on: Jun 24, 2026 | 7:18 AM

Share

ಬೆಂಗಳೂರು, ಜೂನ್ 24: ರಾಜ್ಯದಲ್ಲಿ ವಾಹನ ಸವಾರರು ಹಾಗೂ ಹೊಸದಾಗಿ ವಾಹನ ಖರೀದಿಸಿದ ಮಾಲೀಕರು ಸಾರಿಗೆ ಇಲಾಖೆಯ (RTO) ಸೇವೆಗಳು ಸಿಗದೆ ಕಂಗಾಲಾಗಿದ್ದಾರೆ. ವಾಹನಗಳ ಪ್ರತಿಯೊಂದು ದಸ್ತಾವೇಜು ಹಾಗೂ ನೋಂದಣಿ ಪ್ರಕ್ರಿಯೆಗೆ ಅತ್ಯಗತ್ಯವಾಗಿರುವ ಕೇಂದ್ರ ಸರ್ಕಾರದ ‘ವಾಹನ್-4 (Vahan-4)’ ಸಾಫ್ಟ್‌ವೇರ್‌ನಲ್ಲಿ ಕಳೆದ ಒಂದು ವಾರದಿಂದ ತೀವ್ರ ತಾಂತ್ರಿಕ ದೋಷ ಎದುರಾಗಿದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ವೆಬ್‌ಸೈಟ್ ಓಪನ್ ಮಾಡಿ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಂತೆಯೇ ಸಿಸ್ಟಮ್ ಸಂಪೂರ್ಣವಾಗಿ ಹ್ಯಾಂಗ್ ಆಗುತ್ತಿದ್ದು, ಬೆಂಗಳೂರಿನ 10 ಸೇರಿದಂತೆ ರಾಜ್ಯದ ಒಟ್ಟು 70 ಆರ್‌ಟಿಓ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಮುಖ್ಯಾಂಶಗಳು

  • ‘ವಾಹನ್-4’ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ದೋಷ.
  • ರಾಜ್ಯದ 70 ಆರ್‌ಟಿಓಗಳಲ್ಲಿ ಕೆಲಸ ಸ್ತಬ್ಧ.
  • ವಾರದಿಂದ ಸಾರ್ವಜನಿಕರ ನಿರಂತರ ಅಲೆದಾಟ.

ಸಂಪೂರ್ಣವಾಗಿ ಸ್ಥಗಿತಗೊಂಡ ಸಾರಿಗೆ ಇಲಾಖೆಯ ಸೇವೆಗಳು

ಈ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಹೊಸ ವಾಹನಗಳ ನೋಂದಣಿ (Registration) ಪ್ರಕ್ರಿಯೆ ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದೆ. ಇದರೊಂದಿಗೆ ವಾಹನಗಳ ಮಾಲೀಕತ್ವ ವರ್ಗಾವಣೆ , ಬ್ಯಾಂಕ್ ಲೋನ್ ರದ್ದತಿ ಹಾಗೂ ಎಂಟ್ರಿ, ಎಫ್‌ಸಿ, ವಿಳಾಸ ಬದಲಾವಣೆ ಹಾಗೂ ನಕಲಿ ಆರ್‌ಸಿ (Duplicate RC) ಪಡೆಯುವಿಕೆ ಸೇರಿದಂತೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಇನ್ನು ಹೊರರಾಜ್ಯಗಳಿಗೆ ತುರ್ತಾಗಿ ಸಂಚರಿಸಬೇಕಾದ ವಾಹನಗಳಿಗೆ ಅಗತ್ಯವಿರುವ ಪರ್ಮಿಟ್ ತೆಗೆದುಕೊಳ್ಳಲು ಸಾಧ್ಯವಾಗದೆ ಲಾರಿ, ಟ್ಯಾಕ್ಸಿ ಮಾಲೀಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಬಗೆಹರಿಯದ ಸಮಸ್ಯೆ, ಬೆಂಗಳೂರಿನ ಜನ ಹೈರಾಣು

ಸಾಫ್ಟ್‌ವೇರ್ ಸರ್ವರ್ ಸಮಸ್ಯೆಯ ಕುರಿತು ಈಗಾಗಲೇ ನೂರಾರು ವಾಹನ ಮಾಲೀಕರು ಆರ್‌ಟಿಓ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾಂತ್ರಿಕ ದೋಷ ಸರಿಪಡಿಸಲು ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ, ಪ್ರತಿದಿನ ಸಿಲಿಕಾನ್ ಸಿಟಿಯ ನೂರಾರು ನಾಗರಿಕರು ಆರ್‌ಟಿಓ ಕಚೇರಿಗಳಿಗೆ ಬಂದು ಬರಿಗೈಲಿ ವಾಪಸ್ ಹೋಗುತ್ತಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ; ಬೆಂಗಳೂರು ಮೂಲದ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ಕಚೇರಿಗಳ ಮೇಲೆ ಇಡಿ ದಾಳಿ

ಕೂಡಲೇ ಉನ್ನತ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯು ಕೇಂದ್ರದ ಎನ್‌ಐಸಿ ತಂಡದೊಂದಿಗೆ ಚರ್ಚಿಸಿ ಈ ಗಂಭೀರ ತಾಂತ್ರಿಕ ಸಮಸ್ಯೆಯನ್ನು ಯುದ್ಧೋಪಾದಿಯಲ್ಲಿ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us