
ಬೆಂಗಳೂರು, ಮೇ 5: ಪರಿಶಿಷ್ಟ ಜಾತಿ (SC) ವರ್ಗದ ಬಹುಕಾಲದ ಬೇಡಿಕೆ ಒಳಮೀಸಲಾತಿ ಸಮೀಕ್ಷೆಗೆ (Internal Reservation Caste Census) ಕೊನೆಗೂ ರಾಜ್ಯ ಸರ್ಕಾರ (Karnataka Govt) ಮುಂದಾಗಿದೆ. ಇಂದಿನಿಂದಲೇ ಒಳಮೀಸಲಾತಿ ಸಮೀಕ್ಷೆ ಆರಂಭವಾಗಿದ್ದು, ದಲಿತ ಸಮುದಾಯದ ಎಡ, ಬಲ ತಿಕ್ಕಾಟಕ್ಕೆ ಬ್ರೇಕ್ ಹಾಕುವ ಕಾಲ ಸನ್ನಿಹಿತವಾಗಿದೆ. ಈ ಸಮೀಕ್ಷೆಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಸಿಬ್ಬಂದಿಗೆ ನಾಗಮೋಹನ್ ದಾಸ್ ಅವರೇ ತರಬೇತಿ ನೀಡಿದ್ದಾರೆ. ಏಕಸದಸ್ಯ ಆಯೋಗದ ಮೂಲಕವೇ ಸರ್ಕಾರ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಸಚಿವರಾದ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಈಗಾಗಲೇ ಸಭೆ ಕೂಡ ನಡೆಸಿದ್ದರು.
ಮೊದಲ ಹಂತದಲ್ಲಿ ಮನೆ ಮನೆಗೆ ತೆರಳಿ ಶಿಕ್ಷಕರು ಸಮೀಕ್ಷೆ ನಡೆಸಲಿದ್ದಾರೆ. ಸುಮಾರು 65 ಸಾವಿರ ಶಿಕ್ಷಕರನ್ನು ಡಿಸಿಗಳು ನೇಮಕ ಮಾಡಿದ್ದಾರೆ. 10 ರಿಂದ 12 ಶಿಕ್ಷಕರಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಎರಡನೇ ಹಂತದಲ್ಲಿ ಮೇ 19 ರಿಂದ 21 ರವರೆಗೆ ವಿಶೇಷ ಶಿಬಿರ ಏರ್ಪಡಿಸಲಾಗುತ್ತದೆ. ಮೂರನೇ ಹಂತದಲ್ಲಿ ಮೇ 19 ರಿಂದ ಮೇ 23 ರವರೆಗೆ ಆನ್‌ಲೈನ್ ಮೂಲಕ ಜಾತಿ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಇಂದಿನಿಂದ ಶುರು: ಸಿಎಂ ಸಿದ್ದರಾಮಯ್ಯ ಮಾಹಿತಿ
ಈ ಮಧ್ಯೆ ಸಮೀಕ್ಷೆಯಲ್ಲಿ ಒಂದೇ ಜಾತಿ ಹೆಸರು ಬರೆಸುವಂತೆ ದಲಿತ ನಾಯಕರು ಸಲಹೆ ನೀಡಿದ್ದಾರೆ. ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂದು ಬರೆಸಿದರೆ ಗೊಂದಲ ಆಗುತ್ತದೆ ಎಂಬ ಕಾರಣಕ್ಕೆ ಮಾದಿಗ ಎಂದು ನಮೂದಿಸುವಂತೆ ಕುಟುಂಬಗಳಿಗೆ ಸಲಹೆ ನೀಡಿದ್ದಾರೆ. ಈ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಲು ದಲಿತ ಎಡಗೈ ನಾಯಕರು ಸಜ್ಜಾಗಿದ್ದಾರೆ.
ವರದಿ: ಈರಣ್ಣ ಬಸವ, ‘ಟಿವಿ9’ ಬೆಂಗಳೂರು