ಮಾರ್ಚ್ 24ರಂದು ರಾಜ್ಯದಲ್ಲಿ ಸಾರಿಗೆ ಸೇವೆ ಬಂದ್ ಆಗಲಿದೆ: KSRTC ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು
ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದರೂ ಶೇ 25ರಷ್ಟು ಹೆಚ್ಚಳಕ್ಕೆ ಪಟ್ಟುಹಿಡಿದಿರುವ ನೌಕರರು ನಿಗದಿ ಪಡಿಸಿದ ದಿನಾಂಕದಂದೇ ಮುಷ್ಕರ ಹೂಡಲು ಮುಂದಾಗಿದ್ದಾರೆ.
ಬೆಂಗಳೂರು: ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ (Wage Revision Of Transport Employees) ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದರೂ ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘದ ನಡುವಿನ ಹಗ್ಗಜಗ್ಗಾಟ ಕೊನೆಗೊಂಡಿಲ್ಲ. ಶೇ 25ರಷ್ಟು ಹೆಚ್ಚಳಕ್ಕೆ ಪಟ್ಟುಹಿಡಿದಿರುವ ನೌಕರರು ಮಾರ್ಚ್ 24ರಂದು ಮುಷ್ಕರ ಹೂಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖ, ಮಾರ್ಚ್ 24ರಂದು ರಾಜ್ಯದಲ್ಲಿ ಸಾರಿಗೆ ಸೇವೆ ಬಂದ್ (Karnataka Transport Bus Band) ಆಗಲಿದೆ ಎಂದರು. ರಾಜ್ಯ ಸರ್ಕಾರ ಶೇ. 15ರಷ್ಟು ವೇತನ ಹೆಚ್ಚಳ ಮಾಡುವ ಆದೇಶ ಹೊರಡಿಸಿದೆ. ಆದರೆ ಇದು ನೌಕರರನ್ನು ಆರ್ಥಿಕವಾಗಿ ಮತ್ತಷ್ಟು ತುಳಿಯುವ ಕೆಲಸವಾಗಿದೆ. ಬೆಲೆ ಏರಿಕೆಯಂತಹ ಸಂದರ್ಭದಲ್ಲಿ ನಮಗೆ ಸಿಗುವ ವೇತನದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರದ ಹೊರತು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಸರ್ಕಾರಿ ನೌಕರರು ಮುಷ್ಕರ ಮಾಡಿದ 4 ಗಂಟೆಯಲ್ಲೇ ರಾಜ್ಯ ಸರ್ಕಾರ ಮಧ್ಯಂತರ ಶೇ 17ರಷ್ಟು ವೇತನ ಹೆಚ್ಚಳ ಮಾಡಿ ಆದೇಶಿಸಿದೆ. KPTCL ಮುಷ್ಕರದ ನೋಟಿಸ್ ನೀಡಿದ್ದಕ್ಕೆ ಶೇ 20 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಆದರೆ ನಾವು ಕೇಳಿದ್ದು ಶೇ. 25 ರಷ್ಟು. ಆದರೆ ಸರ್ಕಾರ ಕೇವಲ ಶೇ. 15ರಷ್ಟು ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಾರಿಗೆ ನೌಕರರಿಗೆ ಮುಷ್ಕರ ವೇಳೆ ಲಿಖಿತ ಬರವಸೆ ನೀಡಿದ್ದೀರಿ. ಇದು ಸುಳ್ಳಾ ಎಂದು ಪ್ರಶ್ನಿಸಿದ ಚಂದ್ರು, ಬೆಲೆ ಏರಿಕೆಯಲ್ಲು ನಾವು ಬದುಕಲು ಆಗುತ್ತಿಲ್ಲ. ಶೇ. 15ರಷ್ಟು ವೇತನ ಪರಿಷ್ಕರಣೆಗೆ ನೌಕರರ ಸಮ್ಮತಿ ಇಲ್ಲ. ನಾವು ಜಂಟಿ ಸಮಿತಿಯವರಿಗೆ ಮಾರ್ಚ್ 21 ರಂದು ಮುಷ್ಕರ ಮಾಡಲು ಬೆಂಬಲ ನೀಡಿದ್ದೆವು. ಆ ಬೆಂಬಲವನ್ನ ನಾವು ವಾಪಸ್ಸು ಪಡೆಯುತ್ತಿದ್ದೇವೆ. ನಾವು ಮೊದಲಿನಂತೆ ಕಾರ್ಮಿಕ ಇಲಾಖೆಗೆ ಏನು ನೋಟೀಸ್ ನೀಡಿದ್ದೆವೂ ಅದೇ ರೀತಿಯಲ್ಲಿ ಮಾರ್ಚ್ 24 ರಂದು ಸಮಾನ ಮನಸ್ಕರ ವೇದಿಕೆಯಿಂದ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: KSRTC: ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಆದೇಶ
ಸಾರಿಗೆ ನೌಕರರ ಬೇಡಿಕೆಗಳೇನು?
- ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತಕ್ಕೆ ಶೇ. 25 ರಷ್ಟು ಹೆಚ್ಚಿಸಬೇಕು
- ವೇತನ ಹೆಚ್ಚಳವೂ ಪರಿಷ್ಕೃತ ಮೂಲ ವೇತನದ ಶೇ.3 ರಷ್ಟಿರಬೇಕು.
- ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಮೇಲಿನಂತೆಯೇ ಸಿದ್ದಪಡಿಸಬೇಕು
- ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು.
- ಎಲ್ಲ ನೌಕರರಿಗೂ ಹಾಲಿ ಇರುವ ಬಾಟಾ ಮಾಸಿಕ, ದೈನಂದಿನ (ಕ್ಯಾಷ್,ರಿಪಾಸ್ಟ್ , ಬಟ್ಟೆ ತೊಳೆಯುವ, ರಾತ್ರಿ ಪಾಳಿ ಪ್ರೋತ್ಸಾಹ ಭತ್ಯೆ) ಭತ್ಯೆಗಳನ್ನು ಐದು ಪಟ್ಟು ಜಾಸ್ತಿ ಮಾಡಬೇಕು.
- ಹೊಲಿಗೆ ಭತ್ಯ, ಶೂ, ಜೆರ್ಸಿ, ರೈನ್ ಕೋಟ್ಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು.
- ಎಲ್ಲ ನಿರ್ವಾಹಕರಿಗೂ ಕ್ಯಾಪಿಯರ್‌ಗಳಿಗೆ ಸಮಾನದ ನಗದು ಪ್ರೋತ್ಸಾಹಧನ ನೀಡಬೇಕು.
- 2021ರ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತಿಲ್ಲದೆ ಮರು ನೇಮಕ ಮಾಡಬೇಕು.
- ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮೂಲ ಘಟಕಕ್ಕೆ ಮರು ನಿಯೋಜಿಸಬೇಕು.
- ಮುಷ್ಕರದ ವೇಳೆ ಎಫ್‌ಐಆರ್ ದಾಖಲಿಸಿರುವ ನೌಕರರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು.
- ಜಂಟಿ ಕ್ರಿಯಾ ಸಮಿತಿಯಿಂದ ಸಲ್ಲಿಸಿರುವ ಬೆಡಿಕೆಗಳನ್ನು ಆಡಳಿತ ವರ್ಗದವರು ಚರ್ಚಿಸಿ, ವಿಳಂಬವಿಲ್ಲದೆ ಈಡೇರಿಸಬೇಕು
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಮುಷ್ಕರ ಹೂಡುವುದಾಗಿ ಹೇಳಿದ್ದ ನೌಕರರ ಸಂಘ ಮುಷ್ಕರಕ್ಕೆ ಕರೆಯೂ ನೀಡಿತ್ತು. ಈ ನಡುವೆ ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ ಸೆಕ್ಷನ್ 34/1ರ ಅನ್ವಯ ಸಾರಿಗೆ ನೌಕರರ ವೇತನ ಪರಿಷ್ಕರಿಸಿ ಮಾರ್ಚ್ 1 2023 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರೊಂದಿಗೆ ಕೆಲವೊಂದು ನಿಬಂಧನೆಗಳನ್ನು ಕೂಡ ಹಾಕಲಾಗಿತ್ತು.
ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳು, ನೌಕರರು, ಪೂರ್ವ ಕಿಂಕೋ ಅಧಿಕಾರಿಗಳು 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.15% ಹೆಚ್ಚಿಸಿ ಅದರಂತೆ ವೇತನ ಶ್ರೇಣಿಯನ್ನು ಪರಿಷ್ಕರಿಸಬೇಕು. ಪೂರ್ವ ಕಿಂಕೋ ನೌಕರರೂ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಅರ್ಹ ನೌಕರರ ಉನ್ನತ ವೇತನ ಶ್ರೇಣಿಗಳನ್ನು ಮತ್ತು ಮಧ್ಯಂತರ (ಸೆಲೆಕ್ಷನ್ ಗ್ರೇಡ್) ವೇತನ ಶ್ರೇಣಿಗಳನ್ನು ಶೇ.15 ಹೆಚ್ಚಳ ಮಾಡಿ ಪರಿಷ್ಕರಿಸಬೇಕು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿರುವ ಏಕಸದಸ್ಯ ಸಮಿತಿಯು 4 ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಜೊತೆಗೆ ಸರ್ಕಾರದಿಂದ ಎಷ್ಟು ಪ್ರಮಾಣದ ಅನುದಾನದ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಕಾರ್ಮಿಕ ಸಂಘಟನೆಗಳು ಸೇರಿದಂತೆ ಸಂಭಂದಪಟ್ಟವರೊಂದಿಗೆ ಚರ್ಚಿಸಿ ಯಾವ ದಿನಾಂಕದಿಂದ ವೇತನ ಮತ್ತಿತರ ಬಾಕಿಗಳನ್ನ ಪಾವತಿಸಬೇಕೆಂದು ಒಂದು ತಿಂಗಳ ಅವಧಿಯಲ್ಲಿ ತಿಳಿಸಿಬೇಕು ಎಂಬ ನಿಬಂಧನೆಯೊಂದಿಗೆ ವೇತನ ಪರಿಷ್ಕರಣೆ ಆದೇಶ ಹೊರಡಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Sat, 18 March 23