ಮಸೀದಿ ಹಾಗೂ ದರ್ಗಾದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿ ವರ್ಧಕ ಬಳಸುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ
ಈ ರೀತಿಯ ನಿಯಮಾವಳಿಗಳನ್ನು ಹೊರಡಿಸಲು ಬಿಜೆಪಿ ಸರ್ಕಾರದ ಒತ್ತಡವೇ ಕಾರಣ ಎಂದು ಮುಸ್ಲಿಂ ಸಮುದಾಯದ ಕೆಲವರು ವಿರೋಧಿಸುತ್ತಿರುವರಾದರೂ, ಈ ಬಗ್ಗೆ ಸ್ಪಷ್ಟನೆ ನೀಡಿರುವ ವಕ್ಫ್ ಬೋರ್ಡ್ ಮುಖ್ಯಸ್ಥ ಮೊಹಮ್ಮದ್ ಯೂನಸ್ ತಾವು ಮಾಲಿನ್ಯ ನಿಯಂತ್ರಣಾ ಮಂಡಳಿಯ ಆದೇಶ ಪಾಲಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ವಕ್ಫ್ ಮಂಡಳಿ ಹೊಸದಾಗಿ ಹೊರಡಿಸಿರುವ ಆದೇಶದ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ನಡುವಿನ ಅವಧಿಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂಬ ನಿಯಮ ಜಾರಿಗೆ ಬಂದಿದೆ. ಧ್ವನಿವರ್ಧಕಗಳ ಮೂಲಕ ಅಜಾನ್ ಅಥವಾ ಯಾವುದೇ ಇಸ್ಲಾಮಿಕ್ ಕರೆಯನ್ನು ಇಲಾಖೆ ನಿರ್ಬಂಧನೆ ಹೇರಿದ ಅವಧಿಯಲ್ಲಿ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ. ಶಬ್ಧ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿರುವ ಇಲಾಖೆ, ಮಸೀದಿ ಹಾಗೂ ದರ್ಗಾದ ಸುತ್ತಮುತ್ತ ಶಬ್ಧದ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಇದು ಮನುಷ್ಯನ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾತಾವರಣದಲ್ಲಿನ ಶಬ್ಧ ಮಾಲಿನ್ಯ ನಿಯಂತ್ರಿಸಲು ಕಾಯ್ದೆಯೊಂದು ಜಾರಿಯಲ್ಲಿದೆ. ಅದರ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿವರ್ಧಕ ಬಳಸಕೂಡದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ನೂರು ಮೀಟರ್ಗಳ ಅಂತರದಲ್ಲಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ನ್ಯಾಯಾಲಯವಿದ್ದರೆ ಅದನ್ನು ಶಬ್ಧ ರಹಿತ ವಲಯ ಎಂದು ಘೋಷಿಸಲಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕ, ಸಿಡಿಮದ್ದು, ಪಟಾಕಿ ಬಳಕೆ ಅಥವಾ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ, ಜನಸಾಮಾನ್ಯರಿಗಾಗಿ ಆಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ನಿಯಂತ್ರಣವೇ ಪರಿಹಾರ ಎಂದು ಅಭಿಪ್ರಾಯಪಡಲಾಗಿದೆ.
ಮಸೀದಿ ಹಾಗೂ ದರ್ಗಾದ ಸುತ್ತಮುತ್ತಲೂ ಕೆಲ ನಿಯಮಗಳನ್ನು ಪಾಲಿಸಲು ಕರ್ನಾಟಕ ವಕ್ಫ್ ಮಂಡಳಿ ಸೂಚಿಸಿದ್ದು, ಅವು ಇಂತಿವೆ:
- ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿವರ್ಧಕ ಬಳಸಕೂಡದು
- ಬೇರೆ ಸಮಯದಲ್ಲಿ ಬಳಸಲಾಗುವ ಧ್ವನಿವರ್ಧಕದ ಶಬ್ಧವೂ ಗಾಳಿಯ ಗುಣಮಟ್ಟಕ್ಕೆ ಅನುಗುಣವಾಗಿರಬೇಕು ಹಾಗೂ ಮಿತಿಯಲ್ಲಿರಬೇಕು
- ಬೇರೆ ಸಂದರ್ಭದಲ್ಲಿಯೂ ಅಜಾನ್ ಹೊರತುಪಡಿಸಿ ಚಂದ್ರ ದರ್ಶನ, ಯಾವುದೇ ಸಾವು ಸಂಭವಿಸಿದಾಗ ಹಾಗೂ ಇತರೆ ಅತಿ ಪ್ರಮುಖ ಸಂದರ್ಭದಲ್ಲಿ ಮಾತ್ರ ಬಳಸಬೇಕು
- ಮಸೀದಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆ ಅಥವಾ ಯಾವುದೇ ಕಾರ್ಯಕ್ರಮಗಳಿದ್ದರೆ ಕಟ್ಟಡದ ಆವರಣದಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು
- ಧ್ವನಿ ಮಾಪಕಗಳನ್ನು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಅಳವಡಿಸಿಕೊಳ್ಳಬಹುದು ಮಸೀದಿಯಲ್ಲಿ ಪ್ರಾರ್ಥನೆಗೆ ಕರೆ ನೀಡುವವರಿಗೆ ಧ್ವನಿವರ್ಧಕಗಳನ್ನು ಸಮರ್ಪಕವಾಗಿ ನಿರ್ವಹಿಸಲು ತರಬೇತಿ ನೀಡಬೇಕು
- ಯಾವುದೇ ಸಂದರ್ಭದಲ್ಲೂ ಅತಿಯಾದ ಶಬ್ಧ ಹೊರಸೂಸುವ ಪಟಾಕಿ ಅಥವಾ ಸಿಡಿಮದ್ದುಗಳನ್ನು ಮಸೀದಿ ಹಾಗೂ ದರ್ಗಾ ಸುತ್ತಮುತ್ತಲ ಜಾಗದಲ್ಲಿ ಬಳಸುವಂತಿಲ್ಲ
- ಮಸೀದಿಯ ಆವರಣದಲ್ಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸ್ಥಳ, ಚಟುವಟಿಕೆಗಳಲ್ಲಿ ಅತಿಯಾದ ಶಬ್ಧ ಹೊರಡಿಸುವುದನ್ನು ತಪ್ಪಿಸಬೇಕು ಹಾಗೂ ಅದಕ್ಕೆ ಧ್ವನಿ ಮಾಪಕ ಅಳವಡಿಸಿಕೊಳ್ಳಬಹುದು
- ಮಸೀದಿ, ದರ್ಗಾ ಸುತ್ತಮುತ್ತಲಿನ ಖಾಲಿ ಆವರಣದಲ್ಲಿ ಹಣ್ಣಿನ ಮರಗಳು, ನೆರಳು ನೀಡುವ ಮರಗಳು, ಅಲಂಕಾರಿಕ ಸಸ್ಯಗಳನ್ನು ಬೆಳೆಸಲು ಗಮನಹರಿಸಬೇಕು. ಅಂತೆಯೇ, ಪ್ರಾಣೀ – ಪಕ್ಷಿಗಳಿಗೆ ಅನುಕೂಲವಾಗುವಂತೆ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಗಮನ ಹರಿಸಬೇಕು
- ಮಸೀದಿ, ದರ್ಗಾ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಬೇಕು
- ಮಸೀದಿ, ದರ್ಗಾ ಬಳಿ ಭಿಕ್ಷಾಟನೆ ಮಾಡುವುದನ್ನು ಪ್ರೋತ್ಸಾಹಿಸಬಾರದು. ಅದರ ಬದಲಾಗಿ, ಸಮಾಲೋಚನೆ ನಡೆಸಿ ಪರೋಪಕಾರಿ ಕ್ರಮಗಳನ್ನು ಕೈಗೊಳ್ಳಬೇಕು
ಸದ್ಯ ಈ ರೀತಿಯ ನಿಯಮಾವಳಿಗಳನ್ನು ಹೊರಡಿಸಲು ಬಿಜೆಪಿ ಸರ್ಕಾರದ ಒತ್ತಡವೇ ಕಾರಣ ಎಂದು ಮುಸ್ಲಿಂ ಸಮುದಾಯದ ಕೆಲವರು ವಿರೋಧಿಸುತ್ತಿರುವರಾದರೂ, ಈ ಬಗ್ಗೆ ಸ್ಪಷ್ಟನೆ ನೀಡಿರುವ ವಕ್ಫ್ ಬೋರ್ಡ್ ಮುಖ್ಯಸ್ಥ ಮೊಹಮ್ಮದ್ ಯೂನಸ್ ತಾವು ಮಾಲಿನ್ಯ ನಿಯಂತ್ರಣಾ ಮಂಡಳಿಯ ಆದೇಶ ಪಾಲಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್ಸ್ಪೀಕರ್ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ
ಥಣಿಸಂದ್ರದ 16 ಮಸೀದಿಗಳಿಂದ ಶಬ್ದ ಮಾಲಿನ್ಯ ಆರೋಪ: ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್