ಬೆಂಗಳೂರು, ಜೂನ್ 02: ನಾಡಪ್ರಭು ಕೆಂಪೇಗೌಡರ (Kempegowda) 516ನೇ ಜಯಂತಿಯ ಪ್ರಯುಕ್ತ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದೆ. ಕೆಂಪೇಗೌಡರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಕೆಂಪೇಗೌಡರ ಕುರಿತು ಒಂದು ಪಾಠ ಸೇರಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ (ಜೂನ್.02) ವಿಧಾನಸೌಧದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿದ ಅವರು, ಜೂನ್ 27 ಕೆಂಪೇಗೌಡ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಬಾಬು ಜಗಜೀವನ್ ರಾಮ್ ಭವನದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಕೆಂಪೇಗೌಡ ಪ್ರಾಧಿಕಾರ ನಿರ್ಮಾಣಕ್ಕೆ ಸುಮ್ಮನಹಳ್ಳಿಯಲ್ಲಿ ಐದು ಎಕರೆ ಜಮೀನು ಖರೀದಿಸಲಾಗಿದೆ. ಕೆಂಪೇಗೌಡರ ಜಯಂತಿಯಂದೇ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡ ಅವರ ಹೆಸರಿನಲ್ಲಿ ಸಂಸ್ಥೆಗಳು ಮತ್ತು ಎಲ್ಲ ವರ್ಗದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಸಂಬಂಧ ಸಮಿತಿ ರಚಿಸಲಾಗುತ್ತದೆ. ಕೆಂಪೇಗೌಡ ಪ್ರಾಧಿಕಾರದ ವತಿಯಿಂದ ಮೈಸೂರು ದಸರಾಕ್ಕೆ ಸ್ತಬ್ಧಚಿತ್ರ ಕಳುಹಿಸಲಾಗುತ್ತದೆ. ಕೆಂಪೇಗೌಡರ ಜಯಂತಿ ಆಚರಿಸಲು ಒಂದು ಲಕ್ಷ ಹಣ ನೀಡಲು ತೀರ್ಮಾನಿಸಲಾಗಿದೆ ಎಂದರು.
ಇದನ್ನೂ ಓದಿ: ಅಮೇಜಾನ್ ಡೆಲಿವರಿ ಬಾಯ್ ಹೊತ್ತು ತರುವ ಸಾಮಾನಗಳನ್ನೂ ಬಿಡುತ್ತಿಲ್ಲ ಬೆಂಗಳೂರಿನ ಕಳ್ಳರು!
ನಮ್ಮ ಮೆಟ್ರೋಗೆ ಕೆಂಪೇಗೌಡ ಮೆಟ್ರೋ ಅಂತ ಹೆಸರಿಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಆದರೆ, ನಮ್ಮ ನಿಮ್ಮ ಮೆಟ್ರೋ ಅಷ್ಟೇ. ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿ ಹೋದರು. ಆದರೆ, ಹಣ ನೀಡಿಲ್ಲ. ಈಗ ನಾವೆಲ್ಲ ಇದನ್ನು ಕ್ಲಿಯರ್ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವ ವಿಚಾರವಾಗಿ ಮಾತನಾಡಿದ ಅವರು, ನಾವು ಅಲ್ಲಿಗೆ ಹೋಗಿ ಪ್ರತಿಮೆ ನಿರ್ಮಿಸಲು ಆಗಲ್ಲ. ದೆಹಲಿ ಸಿಎಂ ಮತ್ತು ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಬೇಕಾಗುತ್ತದೆ. ಈ ಬಗ್ಗೆ ಎಲ್ಲ ಸಂಸದರಿಗೂ ನಾನು ಮನವಿ ಮಾಡುತ್ತೇನೆ ಎಂದರು.
ವರದಿ: ಈರಣ್ಣ ಬಸವ
Published On - 6:52 pm, Mon, 2 June 25