KMF Nandini: ರಾಜಸ್ಥಾನ, ಮಧ್ಯ ಪ್ರದೇಶದಲ್ಲೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್ ಸಿದ್ಧತೆ
ಕೆಎಂಎಫ್ ನಂದಿನಿ ಉತ್ಪನ್ನಗಳು: ಇತ್ತೀಚೆಗಷ್ಟೇ ದೆಹಲಿ ಮಾರುಕಟ್ಟೆ ಪ್ರವೇಶಿಸಿ ಜನಮನ್ನಣೆ ಗಳಿಸುತ್ತಿರುವ ಕೆಎಂಎಫ್ ನಂದಿನಿ ಉತ್ಪನ್ನಗಳು ಶೀಘ್ರದಲ್ಲೇ ಉತ್ತರ ಭಾರತದ ಇನ್ನಷ್ಟು ರಾಜ್ಯಗಳಿಗೆ ವಿಸ್ತರಣೆಯಾಗುವ ನಿರೀಕ್ಷೆ ಇದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್ ಚಿಂತನೆ ನಡೆಸಿದ್ದು, ಸಿದ್ಧತೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರು, ಏಪ್ರಿಲ್ 22: ದೇಶದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ (Rajasthan) ಹವಾ ಸೃಷ್ಟಿಸಲು ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ (Nandini) ಮುಂದಾಗಿದೆ. ದೆಹಲಿಯಲ್ಲಿ ಮಾರಾಟ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಇದೀಗ ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಫ್ (KMF) ಚಿಂತನೆ ನಡೆಸಿದೆ. ದಕ್ಷಿಣ ಭಾರತದ ವ್ಯಾಪ್ತಿ ಮೀರಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಯೋಜನೆಯ ಭಾಗವಾಗಿ ಕೆಎಂಎಫ್ ಈ ಯೋಜನೆಗೆ ಮುಂದಾಗಿದೆ ಎನ್ನಲಾಗಿದೆ.
ರಾಜಸ್ಥಾನದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲು ಮತ್ತು ಕೊ-ಪ್ಯಾಕೇಜಿಂಗ್ ಸೆಂಟರ್ಗಳನ್ನು ಸ್ಥಾಪಿಸಲು ಕೆಎಂಎಫ್ ಯೋಜಿಸಿದೆ. ಪೂರೈಕೆ ಸರಪಳಿಯನ್ನು ಬಲಪಡಿಸಲು ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ಹೆಚ್ಚಿಸಲು ರಾಜಸ್ಥಾನ ಮಾತ್ರವಲ್ಲದೆ, ಮಧ್ಯಪ್ರದೇಶವನ್ನು ಪ್ರಮುಖ ಭಾಗವಾಗಿ ಪರಿಗಣಿಸಲಾಗುತ್ತಿದೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಉತ್ತರ ಭಾಗದ ಮಾರುಕಟ್ಟೆಗಳಿಗೆ ಹತ್ತಿರದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಾಟ ದೂರವನ್ನು ಕಡಿಮೆ ಮಾಡುವುದು ಕೆಎಂಎಫ್ ಗುರಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಮಧ್ಯ ಪ್ರದೇಶದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ ಕೋಲ್ಡ್ ಸ್ಟೋರೇಜ್ ಸರಪಳಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಪೌಷ್ಟಿಕಾಂಶ ಸಂರಕ್ಷಿಸಲು ಮತ್ತು ಹಾಳಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಕೊ-ಪ್ಯಾಕೇಜಿಂಗ್ ಸೆಂಟರ್ಗಳು ಕೆಎಂಎಫ್‌ಗೆ ಹತ್ತಿರದ ಸ್ಥಳಗಳಿಂದ ಅಥವಾ ಕರ್ನಾಟಕದಿಂದ ಹಾಲು ಅಥವಾ ಸಂಸ್ಕರಿಸಿದ ಡೈರಿ ಉತ್ಪನ್ನಗಳನ್ನು ಸ್ವೀಕರಿ ಶೇಖರಿಸಿ ಇಡಲು ಸಹಾಯ ಮಾಡುತ್ತವೆ. ಅಲ್ಲದೆ, ಮಾರುಕಟ್ಟೆಗೆ ಸನಿಹದಲ್ಲೇ ಅಂತಿಮ ಪ್ಯಾಕೇಜಿಂಗ್ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ತಾಜಾ ಉತ್ಪನ್ನಗಳು ಚಿಲ್ಲರೆ ಮಾರಾಟ ಮಳಿಗೆಗಳನ್ನು ವೇಗವಾಗಿ ತಲುಪುವಂತೆ ಮಾಡಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ: ರೈತರಿಗೆ ಸಿಗೋದೆಷ್ಟು, ಲಾಭದಲ್ಲಿ ಸರ್ಕಾರದ ಪಾಲೆಷ್ಟು? ಇಲ್ಲಿದೆ ಮಾಹಿತಿ
ಕೆಎಂಎಫ್ ತನ್ನ ಬೇಕರಿ ಮತ್ತು ಮಿಠಾಯಿ ವಿಭಾಗದ ಅಡಿಯಲ್ಲಿ ಬ್ರೆಡ್, ಬನ್ ಮತ್ತು ಕ್ರೀಮ್ ಬನ್ ಎಂಬ ಮೂರು ವಸ್ತುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಸ್ಲೈಸ್ ಕೇಕ್‌ಗಳು, ಹಣ್ಣಿನ ಕೇಕ್‌ಗಳು, ಕಪ್‌ಕೇಕ್‌ಗಳು, ಮಫಿನ್‌ಗಳು ಮತ್ತು ಇನ್ನೂ ಹೆಚ್ಚಿನ ಹೊಸ ಉತ್ಪನ್ನಗಳನ್ನು ಸೇರಿಸಿ ಉತ್ಪನ್ನಗಳನ್ನು ವಿಸ್ತರಿಸಲು ಚಿಂತನೆ ನಡೆಸಿದೆ. ಈ ಉತ್ಪನ್ನಗಳ ಅಡಿಯಲ್ಲಿ ಒಟ್ಟು 22 ರೂಪಾಂತರಗಳನ್ನು ಮಾರುಕಟ್ಟೆಗೆ ಪೂರೈಸಲು ಉದ್ದೇಶಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 am, Tue, 22 April 25