AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಸಿಕ್ಕರೂ ಬೆಳಕಿಲ್ಲ! ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಕತ್ತಲ ಭಾಗ್ಯ

Kodagu CESCOM Power Connection: ಕೊಡಗಿನ ಜಂಬೂರಿನಲ್ಲಿ ಇನ್ಫೋಸಿಸ್ ನಿರ್ಮಿಸಿದ ನೂತನ ಮನೆಗಳನ್ನು 9 ವರ್ಷಗಳ ಬಳಿಕ ಪ್ರವಾಹ ಸಂತ್ರಸ್ತರಿಗೆ ನೀಡಲಾಗಿದೆ. ಆದರೆ ವಿದ್ಯುತ್ ಸಂಪರ್ಕವಿಲ್ಲದೆ ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಚೆಸ್ಕಾಂ, ಗುತ್ತಿಗೆದಾರರ ನಡುವಿನ ಗೊಂದಲದಿಂದ ಸಂತ್ರಸ್ತರು ಕತ್ತಲಲ್ಲೇ ಜೀವನ ನಡೆಸುವಂತಾಗಿದೆ.

ಮನೆ ಸಿಕ್ಕರೂ ಬೆಳಕಿಲ್ಲ! ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಕತ್ತಲ ಭಾಗ್ಯ
ಪ್ರವಾಹ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳುImage Credit source: tv9 kannada
Gopal AS
| Edited By: |

Updated on: Jul 24, 2026 | 3:59 PM

Share

ಮುಖ್ಯಾಂಶಗಳು

  • ಪ್ರವಾಹ ಸಂತ್ರಸ್ತರ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ
  • ಕತ್ತಲಲ್ಲೇ ಜೀವನ ನಡೆಸುತ್ತಿರುವ 129 ಕುಟುಂಬಗಳು
  • ಗುತ್ತಿಗೆದಾರರತ್ತ ಬೊಟ್ಟು ಮಾಡುತ್ತಿರುವ ಚೆಸ್ಕಾಂ

ಕೊಡಗು, ಜುಲೈ 24: ಅವರೆಲ್ಲಾ 2018ರ ಭೀಕರ ಭೂ ಕುಸಿತ ಪ್ರವಾಹದಲ್ಲಿ ಮನೆ, ಮಠ ಕಳೆದುಕೊಂಡವರು (Flood Victims). ಸೂರಿಗಾಗಿ 9 ವರ್ಷಗಳಿಂದ ಕಾದವರು. ಇದೀಗ ಮನೆ ಸಿಕ್ಕಿದೆ. ಖುಷಿ ಖುಷಿಯಾಗಿ ತಮ್ಮ ಹೊಸ ಮನೆಗೆ ಕಾಲಿಟ್ಟ ಜನರಿಗೆ ಶಾಕ್​​ ಎದುರಾಗಿದೆ. ಪ್ರವಾಹ ಸಂತ್ರಸ್ತರಿಗೆ ಚೆಸ್ಕಾಂ ಕತ್ತಲ (Electricity) ಭಾಗ್ಯ ಕರುಣಿಸಿದೆ.

9 ವರ್ಷಗಳ ಬಳಿಕ 200 ಮನೆಗಳ ನಿರ್ಮಾಣ

2018 ಮತ್ತು 19ರಲ್ಲಿ ಸಂಭವಿಸಿದ್ದ ಭೂ ಕುಸಿತ ಮತ್ತು ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇದೀಗ 200 ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 200 ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಕುಂಟುತ್ತಾ ಸಾಗಿದ್ದ ಕಾಮಗಾರಿ ಕೊನೆಗೂ ಪೂರ್ಣವಾಗಿ 9 ವರ್ಷಗಳ ಬಳಿಕ ಮನೆಗಳು ಪೂರ್ಣವಾಗಿವೆ.

ಇದನ್ನೂ ಓದಿ: ಬೆಂಗಳೂರು ಇತಿಹಾಸದಲ್ಲೇ ಅತ್ಯಂತ ಎತ್ತರ ಅಪಾರ್ಟ್ಮೆಂಟ್ ಕಟ್ಟಡ ತೆರವಿಗೆ ಜಿಬಿಎ ತೀರ್ಮಾನ: ಏಕೆ, ಏನಿದು?

ತಿಂಗಳ ಹಿಂದೆ ಈ ಮನೆಗಳನ್ನ ಜಿಲ್ಲಾಡಳಿತ ಪ್ರವಾಹ ಸಂತ್ರಸ್ಥರಿಗೆ ಹಸ್ತಾಂತರಿಸಿದೆ. ಸುಮಾರು 129 ಮನೆಗಳನ್ನ ಹಂಚಲಾಗಿದೆ. ಆದರೆ ವಿಪರ್ಯಾಸ ಅಂದರೆ ಈ ಮನೆಗಳಲ್ಲಿ ವಿದ್ಯುತ್​​ ಸಂಪರ್ಕವೇ ಇಲ್ಲ. ಹಾಗಾಗಿ ಪ್ರವಾಹ ಸಂತ್ರಸ್ತರು ಕತ್ತಲಲ್ಲೇ ಜೀವನ ನಡೆಸುವಂತಾಗಿದೆ.

ವಿದ್ಯುತ್ ಸಂಪರ್ಕ ನೀಡದರಲು ಕಾರಣವೇನು?

ಈ ಮನೆಗಳಲ್ಲಿ ವಾಸಿಸುವರಲ್ಲಿ ವಯಸ್ಸಾದವರು ಸೇರಿದಂತೆ ವಿದ್ಯಾರ್ಥಿಗಳಿದ್ದಾರೆ. ಅವರಿಗೆಲ್ಲಾ ವಿದ್ಯುತ್​​ ಬೇಕೇ ಬೇಕು. ಅಷ್ಟಕ್ಕೂ ಏಕೆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಅಂತ ವಿಚಾರಿಸಿದರೆ ಮನೆಯವರು ಚೆಸ್ಕಾಂನತ್ತ ಬೊಟ್ಟು ತೋರಿಸ್ತಾರೆ. ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ. ಇದರ ಬಗ್ಗೆ ಚೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ ಅವರು ಗುತ್ತಿಗೆದಾರರತ್ತ ಬೊಟ್ಟು  ಮಾಡುತ್ತಿದ್ದಾರೆ.

ಗುತ್ತಿಗೆದಾರರಿಗೆ ಪಾವತಿಯಾಗದ ಮೊತ್ತ?

ಇನ್ನು ಗುತ್ತಿಗೆದಾರರು ಮನೆಗಳನ್ನ ಇನ್ನೂ ಅಧಿಕೃತವಾಗಿ ಹಸ್ತಾಂತರಿಸಿಲ್ಲ, ಹಾಗಾಗಿ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಆದರೆ ಗುತ್ತಿಗೆದಾರರಿಗೆ ಇನ್ನೂ ಉಳಿದ ಮೊತ್ತ ಪಾವತಿಯೇ ಆಗಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ: ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರ

ಶಾಸಕ ಡಾ ಮಂಥರ್ ಗೌಡ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನ ಕ್ಷಣಮಾತ್ರದಲ್ಲಿ ಬಗೆಹರಿಸಬಹುದು. ಆದರೆ ಅವರು ಕೂಡ ಯಾಕೋ ಮನಸ್ಸು ಮಾಡುತ್ತಿಲ್ಲ, ಅಧಿಕಾರಿಗಳು, ಚೆಸ್ಕಾಂ, ಗುತ್ತಿಗೆದಾರರ ನಡುವಿನ ಸಮಸ್ಯೆಯಿಂದಾಗಿ ಬಡ ಸಂತ್ರಸ್ತರು ಮಾತ್ರ ಕತ್ತಲಿನಲ್ಲಿಯೇ ಬದುಕುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us