ಹಂಪಿ ಘಟನೆ ಮಾಸುವ ಮುನ್ನವೇ ಮಡಕೇರಿಯಲ್ಲೂ ಮಹಿಳಾ ಪ್ರವಾಸಿಗರಿಗೆ ಕಿರುಕುಳ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿಯಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ವಿದೇಶಿ ಮಹಿಳೆ, ಹೋಂ ಸ್ಟೇ ಮಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚರಾ ದೇಶಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮಡಿಕೇರಿಯಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡಲಾಗಿದೆ. ರಾಜ್ಯದಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಇಲ್ಲವೇ? ಎಂಬ ಪ್ರಶ್ನೆ ಉದ್ಭವಾಗಿದೆ.

ಮಡಿಕೇರಿ, ಏಪ್ರಿಲ್ 07: ಹೋಮ್ ಸ್ಟೇ (Home Stay) ನಿರ್ವಾಹಕನೊಬ್ಬನ ವಿಕೃತಿಯಿಂದಾಗಿ ಮಡಿಕೇರಿ (Madikeri) ತೆರಳಿದ್ದ ಪ್ರವಾಸಿಗರು (Tourists) ಇನ್ನಿಲ್ಲದ ಹಿಂಸೆ ಅನುಭವಿಸಿದ್ದಾರೆ. ಈ ಸಂಬಂಧ ಮಡಿಕೆರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಮಮತಾ ಎಂಬುವರು ತಮ್ಮ ಮಗಳ ಜೊತೆ ಸಮಯ ಸಿಕ್ಕಾಗಲೆಲ್ಲ ಪ್ರವಾಸ ಹೋಗುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಅದರಂತೆ, ಈ ಬಾರಿ ಊಟಿಗೆ ತೆರಳಿ ಬಳಿಕ ಮಡಿಕೇರಿಯಲ್ಲಿ ಕೆಲವು ದಿನಗಳ ಕಾಲ ತಂಗಲು ಆಗಮಿಸಿದ್ದರು.
ಮಡಿಕೇರಿ ನಗರದ ಈಶ್ವರ ನಿಲಯ ಎಂಬ ಹೋಂಸ್ಟೇಯಲ್ಲಿ ಶನಿವಾರ (ಏ.05) ರ ರಾತ್ರಿ ತಂಗಿದ್ದರು. ಅಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ನಸುಕಿನ ಜಾವ 3 ಗಂಟೆಯ ಸುಮಾರಿಗೆ ಹೋಂಸ್ಟೇ ನಿರ್ವಾಹಕ ಪ್ರವೀಣ್ ಎಂಬಾತ ತನ್ನ ಮತ್ತೊಬ್ಬ ಸಹಚರನೊಂದಿಗೆ ಬಂದು ಮಮತಾ ಅವರು ಇದ್ದ ಕೋಣೆಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆಯುವಂತೆ ಕಿರುಚಿದ್ದಾನೆ. ಇವರು ಇಬ್ಬರು ಮಹಿಳೆಯರೇ ಇದ್ದಿದ್ದರಿಂದ ಬಾಗಿಲು ತಗೆದಿಲ್ಲ.
ಆದರೆ, ಹಠ ಬಿಡದ ಪ್ರವೀಣ್ ನಾಲ್ಕು ಗಂಟೆಯವರೆಗೂ ಬಾಗಿಲು ಬಡಿದು ಬೆದರಿಕೆ ಹಾಕಿದ್ದಾನೆ. ಬಾಗಿಲು ತಗೆಯದೆ ಇದ್ದರೇ ಬಾಗಿಲು ಮುರಿದು ಒಳಗೆ ಬರುವುದಾಗಿ ಬೆದರಿಸಿದ್ದಾನೆ. ಆದರೆಮ ಮಮತಾ ಮಾತ್ರ ತೀವ್ರ ಭಯದಿಂದ ಬಾಗಿಲು ತೆಗೆಯದೆ ಒಳಗಡೆಯೇ ಉಳಿದಿದ್ದಾರೆ. ಬೆಳಕಾದ ಮೇಲೆ ಬಾಗಿಲು ತೆಗೆದು ಹೊರಗೆ ಬಂದು ನೋಡಿದರೇ ಮತ್ತೊಂದು ಆಘಾತ ಕಾದಿತ್ತು.
ಮಮತಾ ಅವರ ಕಾರಿನ ನಾಲ್ಕೂ ಚಕ್ರಗಳನ್ನ ಡ್ಯಾಮೇಜ್ ಮಾಡಿ ಗಾಳಿ ತೆಗೆಯಲಾಗಿತ್ತು. ಇದರಿಂದ ರೋಸಿ ಹೋದ ಮಮತಾ, ಮಡಿಕೇರಿ ನಗರ ಪೊಲಿಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾದ ತಕ್ಷಣ ಕಾರ್ಯಾಚರಣೆ ನಡೆಸಿದ ಮಡಿಕೇರಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಗೆ ಕಿರುಕುಳ ನೀಡಿದ ಆರೋಪಿ ಪ್ರವೀಣ್ ಮತ್ತು ಆತನ ಸಹಚರ ಬಾಬುವನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ಹೋಂಸ್ಟೇ ಮಾಲೀಕ ಕಾವೇರಪ್ಪ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಆರೋಪಿ ಪ್ರವೀಣ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆತನ ಮೇಲೆ ಅದಾಗಲೇ ರೌಡಿಶೀಟರ್ ತೆರೆಯಲಾಗಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ. ಸದ್ಯ, ಈ ಹೋಂಸ್ಟೇಯ ಲೈಸೆನ್ಸ್ ರದ್ದತಿ ಮಾಡಲು ಪೊಲಿಸ್ ಇಲಾಖೆ ಪ್ರವಾಸೋಧ್ಯಮ ಇಲಾಖೆಗೆ ಪತ್ರ ಬರೆದಿದೆ.
ಇದನ್ನೂ ಓದಿ: ಕೊಪ್ಪಳ ಘಟನೆ ಬಳಿಕ ಎಚ್ಚೆತ್ತ ಸರ್ಕಾರ: ರೆಸಾರ್ಟ್-ಹೋಮ್ಸ್ಟೇಗಳಲ್ಲಿ ಭದ್ರತೆ, ಸುರಕ್ಷತೆ ಕುರಿತು ಸುತ್ತೋಲೆ
ಕೊಪ್ಪಳದಲ್ಲಿ ಪ್ರವಾಸಿಗರ ಮೇಲೆ ದೌರ್ಜನ್ಯ ನಡೆದ ಬಳಿಕ ಎಲ್ಲ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಗರಿಷ್ಟ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸೂಚಿಸಿದ್ದರು. ಪ್ರವಾಸಿಗರಿಗೆ ಹೋಂಸ್ಟೇ ನಿರ್ವಾಹಕರು ಈ ರೀತಿ ಹಿಂಸೆ ನೀಡಿದ್ರೆ ಪ್ರವಾಸಕ್ಕೆ ಬರುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಪ್ರವಾಸಿಗರು ಕೇಳುತ್ತಿದ್ದಾರೆ. ಆದರೆ, ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಇಂತಹ ದೌರ್ಜನ್ಯಗಳಾಗುತ್ತಿರುವುದು ವಿಪರ್ಯಾಸವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ