ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ! ಅ.17ರಂದು ತಲಕಾವೇರಿಯಲ್ಲಿ ಪವಿತ್ರ ತೀರ್ಥ ದರ್ಶನ; ಭಕ್ತರಿಗೆ ಸಕಲ ಸಿದ್ಧತೆ
ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಶುರುವಾಗಿದೆ. ಸಹಸ್ರಾರು ಭಕ್ತರು, ಗಣ್ಯರು ಈ ಪುಣ್ಯ ಘಳಿಗೆಗೆ ಸಾಕ್ಷಿಯಾಗಲಿದ್ದಾರೆ. ಜಿಲ್ಲಾಡಳಿತ ಭಕ್ತರಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಉಚಿತ ಬಸ್, ಊಟ, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ತೀರ್ಥ ತೆಗೆದುಕೊಂಡು ಹೋಗಲು ಪ್ಲಾಸ್ಟಿಕ್ ನಿಷೇಧಿಸಲಾಗಿದೆ.

ಮುಖ್ಯಾಂಶಗಳು
- ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ
- ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿ
- ಭಕ್ತರಿಗೆ ಉಚಿತ ಬಸ್, ಊಟದ ವ್ಯವಸ್ಥೆ
ಕೊಡಗು, ಅಕ್ಟೋಬರ್ 16: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 17ರ ಸಂಜೆ 7 ಗಂಟೆ 50 ನಿಮಿಷಕ್ಕೆ ಕಾವೇರಿ, ತೀರ್ಥರೂಪಿಣಿಯಾಗಿ ಆವಿರ್ಭವಿಸಲಿದ್ದಾಳೆ. ಜೀವ ನದಿಯನ್ನ ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ಆಗಮಿಸುವ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಜೀವನದಿ ಕಾವೇರಿ ಕೇವಲ ನೀರಿನ ಸೆಲೆಯಲ್ಲ, ಅದೊಂದು ಶಕ್ತಿ. ಕೋಟ್ಯಂತರ ಜನರ ಪಾಲಿಗೆ ದೈವಿ ಸ್ವರೂಪ. ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಾಳೆ. ತುಲಾ ಮಾಸದ ಮೊದಲ ದಿನ ಅಂದರೆ ಸೂರ್ಯ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ತಲಕಾವೇರಿಯ ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಸಹಸ್ರಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ
ಈ ಪವಿತ್ರ ಘಳಿಗೆಯನ್ನು ಕಣ್ತುಂಬಿಸಿಕೊಳ್ಳಲು ದೇಶದ ಮೂಲೆಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನಾಳೆ ಸಂಜೆ 7 ಗಂಟೆ 50 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವವಾಗಲಿದೆ. ಪ್ರಧಾನ ಅರ್ಚಕ ರವಿರಾಜ್ ಆಚಾರ್, ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಬೆಳಗ್ಗಿನ ವೇಳೆ ತೀರ್ಥೋದ್ಭವವಾಗುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಬೆಳಗ್ಗಿನ ಜಾವದಿಂದಲೇ ನಿತ್ಯ ಪೂಜಾಕರ್ಮಗಳು ನಡೆಯುತ್ತದೆ. ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗಾಗಿ ಉಚಿತ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ
ಇನ್ನು ಭಕ್ತರ ಪ್ರಯಾಣಕ್ಕೆ ಉಚಿತ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಭಕ್ತರ ನಿಯಂತ್ರಣಕ್ಕೆ ದೇವಸ್ಥಾನದ ಆವರಣದಲ್ಲಿ ಬ್ಯಾರಿಕೇಡ್ಗಳನ್ನ ಅಳವಡಿಸಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಕಟ್ಟೆಚ್ಚರವಹಿಸಲಾಗಿದೆ. ಭದ್ರತೆಗಾಗಿ ಕೆಎಸ್ಆರ್ಪಿ ಮತ್ತು ಡಿಎಆರ್ ಪೊಲೀಸರನ್ನ ನಿಯೋಜಿಸಲಾಗಿದೆ. ತಲಕಾವೇರಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾದೆ.
ಇದನ್ನೂ ಓದಿ: ಕಾವೇರಿ ತೀರ್ಥೋದ್ಭವದ ಮಹತ್ವವೇನು? ಕೊಡಗಿನ ಪವಿತ್ರ ಆಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಭಕ್ತರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ಈ ಬಾರಿ ತೀರ್ಥ ತೆಗೆದುಕೊಂಡು ಹೋಗಲು ಪ್ಲಾಸ್ಟಿಕ್ ಬಿಂದಿಗೆ, ಬಾಟಲಿ ಡಬ್ಬಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಭಾಗಮಂಡಲದಿಂದ ಸಹಸ್ರಾರು ಭಕ್ತರು ತಲಕಾವೇರಿಗೆ ಪಾದಯಾತ್ರೆ ಮಾಡಲಿದ್ದಾರೆ. ಹಾಗಾಗಿ ರಸ್ತೆಯುದ್ಧಕ್ಕೂ ವಿದ್ಯುತ್ ದೀಪ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಡಳಿತ ಸಕಲ ಸಿದ್ಧತೆ
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ದೇವಸ್ಥಾನ ಸಮಿತಿ ಒಟ್ಟಾಗಿ ಕಾವೇರಿ ಜಾತ್ರೆಯನ್ನು ಯಶಸ್ಸುಗೊಳಿಸಲು ಸಜ್ಜಾಗಿದೆ. ಆದರೆ ಕಳೆದೆರಡು ದಿನಗಳಿಂದ ಸಂಜೆ ವೇಳೆ ತಲಕಾವೇರಿಯಲ್ಲಿ ಮಳೆ ಅಬ್ಬರಿಸುತ್ತಿದೆ. ಹಾಗಾಗಿ ತೀರ್ಥೋದ್ಭವದ ವೇಳೆ ಮಳೆ ಬಂದರೆ ಸ್ವಲ್ಪ ಸಮಸ್ಯೆಯಾಗುವ ಸಾಧ್ಯತೆ ಇದೆ. ಜೀವನದಿ ತೀರ್ಥ ರೂಪದಲ್ಲಿ ದರ್ಶನ ನೀಡುವ ಈ ವಿಸ್ಮಯ ವೀಕ್ಷಿಸಲು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಕಾವೇರಿಕೊಳ್ಳದ ಶಾಸಕರು, ಸಂಸದರು ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Fri, 16 October 26




