ಕೋಲಾರ: ಸ್ಮಶಾನದಲ್ಲಿ ವಾಸ, ಅಲ್ಲೇ ಸ್ಕೆಚ್; ಜನರ ನಿದ್ದೆಗೆಡಿಸಿದ್ದ ಮಂಕಿಕ್ಯಾಪ್ ಗ್ಯಾಂಗ್ ಭೇದಿಸಿದ ಖಾಕಿ
ಕೋಲಾರದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳ ಶೆಟರ್‌ಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದ ಮಂಕಿ ಕ್ಯಾಪ್ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಈ ಗ್ಯಾಂಗ್ ಎರಡು ರಾಜ್ಯಗಳಲ್ಲಿ 1000ಕ್ಕೂ ಹೆಚ್ಚು ಅಂಗಡಿಗಳಿಗೆ ದರೋಡೆ ಮಾಡಿದೆ. ಕಳ್ಳತನದಲ್ಲಿ ಬಳಸಿದ ಮೂರು ಬೈಕ್‌ಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಲಾರ, ಫೆಬ್ರವರಿ 07: ರಾತ್ರಿಯಾಯ್ತು ಅಂದರೆ ಅವನು ವ್ಹೀಲಿಂಗ್ (Wheeling) ಮಾಡುತ್ತಾ ಸ್ಟಂಟ್ ಮಾಡುವ ಜಾಲಿ ಹುಡುಗ, ವ್ಹೀಲಿಂಗ್ ಸ್ಟಂಟ್ ಮಾಡುತ್ತಲೇ ಊರಿಂದ ಊರಿಗೆ ಹಾರುವುದು ಆತನದ್ದು ಖತರ್ನಾಕ್ ಕೆಲಸ. ಸ್ಮಶಾನ ವಾಸಿಯಾದ ಆತ ಹಾಕಿದ್ದ ಸ್ಕೆಚ್ಗೆ ಎರಡು ರಾಜ್ಯ ಹಾಗೂ ಆರು ಜಿಲ್ಲೆಯ ಪೊಲೀಸರೇ ದಂಗಾಗಿ ಹೋಗಿದ್ದರು. ಶೋಕಿಗಾಗಿ ಮಂಕಿ ಕ್ಯಾಪ್ ಧರಿಸಿ ಸಾವಿರಾರು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಸ್ಟೋರಿ ಇದು.
ಏಳು ಜನರ ಬಂಧನ
ಕಳೆದ ಎರಡು ತಿಂಗಳಿಂದ ಕೋಲಾರ ನಗರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಸಿಕ್ಕ ಸಿಕ್ಕಿದ್ದನ್ನು ದೋಚಿ ಪರಾರಿಯಾಗುತ್ತಿದ್ದ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ ಜನರ ನಿದ್ದೆಗೆಡಿಸಿತ್ತು. ಸದ್ಯ ಬೆಂಗಳೂರಿನ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ನ ಮಾಸ್ಟರ್ ಮೈಂಡ್ ರೋಹಿತ್, ರಿಯಾನ್, ಪ್ರವೀಣ್ ಕುಮಾರ್, ವಿನೋದ್, ದಾದಾಪೀರ್ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಒಟ್ಟು ಏಳು ಜನರನ್ನು ಕೋಲಾರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಮೂರು ಬೈಕ್‌ಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಪರ ಸ್ತ್ರೀಯೊಂದಿಗೆ ಸಲುಗೆ: ಸುಪಾರಿ ನೀಡಿ ಪತಿಯ ಎರಡು ಕಾಲು ಮುರಿಸಿದ ಪತ್ನಿ!
ಈತ ಕಳೆದ ಏಳೆಂಟು ವರ್ಷಗಳಿಂದ ಮಂಕಿಕ್ಯಾಪ್ ಧರಿಸಿ ಬಂದು ಸಿಕ್ಕ ಸಿಕ್ಕ ಅಂಗಡಿಗಳ ಶೆಟರ್ ಮುರಿದು ಸಿಕ್ಕಷ್ಟು ಹಣ ದೋಚಿಕೊಂಡು ಪರಾರಿಯಾಗಿ ಪೊಲೀಸರ ಹಾಗೂ ಸಾರ್ವಜನಿಕರ ನಿದ್ದೆಗೆಡಿಸಿದ್ದ. ಕೋಲಾರ ನಗರದಲ್ಲಿ ಡಿಸೆಂಬರ್-17 ರ ರಾತ್ರಿ ಹಾಗೂ ಜನವರಿ-17 ರ ರಾತ್ರಿ ಟೇಕಲ್ ರಸ್ತೆ, ಎಂ.ಬಿ.ರಸ್ತೆಯಲ್ಲಿನ ಆಧೀಶ್ವರ ಮಾರ್ಕೆಟಿಂಗ್, ಅಪೋಲೋ ಮೆಡಿಕಲ್ಸ್, ಸಲೂನ್, ದಿನಸಿ ಅಂಗಡಿ, ಮೊಬೈಲ್ ಅಂಗಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಸಾವಿರಾರು ರೂಪಾಯಿ ದೋಚಿ ಪರಾರಿಯಾಗಿದ್ದರು.
ಇನ್ನು ಈ ಖತರ್ನಾಕ್ ಕಳ್ಳನ ಕೈಚಳಕ ಕಂಡು ಕೋಲಾರ ನಗರ ಬೆಚ್ಚಿಬಿದ್ದಿತ್ತು. ಈ ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು. ಇನ್ನು ಖತರ್ನಾಕ್ ಕಳ್ಳನ ಬೇಟೆಗಾಗಿ ಬಲೆ ಬೀಸಿದ್ದ ಕೋಲಾರ ನಗರ ಠಾಣಾ ಪೊಲೀಸರಿಗೆ ಕಳ್ಳನ ಕುರಿತ ಯಾವುದೇ ಸುಳಿವು ಸಿಕ್ಕಿರಲಿಲ್ಲ, ಆದರೆ ಇದೇ ಗ್ಯಾಂಗ್ ಮತ್ತೊಂದು ಕಳ್ಳತನಕ್ಕೆ ತಯಾರಿ ನಡೆಸುತಿದ್ದ ವೇಳೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಿಸಿದ ಪೊಲೀಸರಿಗೆ ಖತರ್ನಾಕ್ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದೆ.
ಅಷ್ಟಕ್ಕೂ ಈ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ ಮಾಸ್ಟರ್ ಮೈಂಡ್ ರೋಹಿತ್ ಸೇರಿ ಎಲ್ಲರೂ ಇನ್ನು ಚಿಗರು ಮೀಸೆಯ ಹುಡುಗರು. ಕೆಲವರು ಅಪ್ರಾಪ್ತರು. ಇವರೆಲ್ಲರಿಗೂ ಹಣದ ಆಸೆ ತೋರಿಸಿ ಕುಡಿಯೋದು, ಗಾಂಜಾ ಸೇವನೆ, ಇಲ್ಲದ ಶೋಕಿಯ ಆಸೆ ತೋರಿಸಿ ಅವರನ್ನು ಗ್ಯಾಂಗ್ ಕಟ್ಟುವ ರೋಹಿತ್ ನಂತರ ಆ ಹುಡುಗರನ್ನು ತನ್ನೊಂದಿಗೆ ಕಳ್ಳತನದ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ.
ಯಾರು ಈ ರೋಹಿತ್?
ಅಷ್ಟಕ್ಕೂ ಯಾರು ಈ ರೋಹಿತ್ ಅಂತ ನೋಡೋದಾದ್ರೆ ಈತ ಮೂಲತಃ ನೇಪಾಳದವನು. ಕಳೆದ 25 ವರ್ಷಗಳ ಹಿಂದೆಯೇ ರೋಹಿತ್ ತಂದೆ ಧನರಾಜ್ ಗಿರಿ ಎಂಬುವರ ಕರ್ನಾಟಕದ ಬೆಂಗಳೂರಿಗೆ ಬಂದು ನೆಲೆಸಿದ್ದರು. ನಂತರ ಕರ್ನಾಟಕದಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೇ ಕುಟುಂಬದಲ್ಲಿ ಹುಟ್ಟಿದ್ದ ರೋಹಿತ್ ಕಳೆದ ಏಳೆಂಟು ವರ್ಷಗಳಿಂದ ಅಂದರೆ ಈತನ 16ನೇ ವಯಸ್ಸಿಗೆ ಕಳ್ಳತನದ ಕೆಲಸ ಶುರುಮಾಡಿಕೊಂಡಿದ್ದ. ಮನೆಗೆ ಹೋಗದೆ ಬೆಂಗಳೂರಿನ ಸುಧಾಮ ನಗರದ ಸ್ಮಶಾನದಲ್ಲೇ ವಾಸಮಾಡಿಕೊಂಡು ಅಲ್ಲೇ ಇವನು ಇರೋದಕ್ಕೆ ಒಂದು ಸೆಟಪ್ ಮಾಡಿಕೊಂಡಿದ್ದ. ಅಲ್ಲೇ ಊಟ, ಅಲ್ಲೇ ಕುಡಿಯೋದು, ಅಲ್ಲೇ ಮಲಗೋದು, ಅಲ್ಲೇ ಕಳ್ಳತನದ ಸ್ಕೆಚ್ ಕೂಡ ಹಾಕುತ್ತಿದ್ದ.
ಚಿಕ್ಕ ಟೆಂಟ್ ಹಾಕಿಕೊಂಡು ಸ್ಮಶಾನದ ಸುತ್ತಲೂ ಬಿಯರ್ ಬಾಟಲ್ ಕಟ್ಟಿಕೊಂಡು ಯಾರಾದರೂ ಬಂದರೆ ಶಬ್ದವಾಗುತ್ತಿತ್ತು, ಆಗ ಕೂಡಲೇ ಅಲ್ಲಿಂದ ರೋಹಿತ್ ಎಸ್ಕೇಪ್ ಆಗುತ್ತಿದ್ದ. ಹೀಗೆ ತಾನು ಕಳ್ಳತನದ ಹಣದಲ್ಲಿ ಬೈಕ್ಗಳನ್ನು ಖರೀದಿಸಿದ್ದ ರೋಹಿತ್ ನಂಬರ್ ಪ್ಲೇಟ್ ಇಲ್ಲದ ಬೈಕ್ಗಳಲ್ಲಿ ವ್ಹೀಲಿಂಗ್ ಮಾಡುತ್ತಾ ಜಾಲಿಯಾಗಿ ಬೆಂಗಳೂರಿನ ಸುತ್ತಮುತ್ತಲ ನಗರಗಳನ್ನು ಟಾರ್ಗೆಟ್ ಮಾಡುತಿದ್ದ.
ಮಧ್ಯರಾತ್ರಿ ಸುಮಾರಿಗೆ ಹೊರಟರೆ ಬೆಳಿಗ್ಗೆ ಹೊತ್ತಿಗೆ ಕಳ್ಳತನ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ. ಈ ಖತರ್ನಾಕ್ ಕಳ್ಳ ರೋಹಿತ್ ಈವರೆಗೂ ಎರಡು ರಾಜ್ಯ ಹಾಗೂ ಆರು ಜಿಲ್ಲೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಂಗಳೂರು ನಗರ, ರಾಮನಗರ, ತಮಿಳುನಾಡಿನ ಹೊಸೂರು ಪೊಲೀಸರಿಗೆ ಮೋಸ್ಟ್ ವಾಂಟೆಡ್ ಖತರ್ನಾಕ್ ಕಳ್ಳ ಸದ್ಯ ಕೋಲಾರ ಪೊಲೀಸರ ಅಥಿತಿಯಾಗಿದ್ದಾನೆ.
ಇದನ್ನೂ ಓದಿ: ಕಳ್ಳ ಮಗನ ಮೃತದೇಹ ಬೇಡವೆಂದು ಹೊರಟ ತಾಯಿ: ಬೆಂಗಳೂರಿನಲ್ಲೊಂದು ಕರುಣಾಜನಕ ಕಥೆ
ಈತನ ದುಷ್ಚಟ, ಶೋಕಿಗಾಗಿ ತಾನು ಕಳ್ಳತನ ಮಾಡುವ ಜೊತೆಗೆ ಅಪ್ರಾಪ್ತ ಬಾಲಕರನ್ನು ಕಳ್ಳತನದ ದುಷ್ಚಟಗಳಿಗೆ ದೂಡಿದ್ದಾನೆ. ಇನ್ನು ಈತನ ಕಳ್ಳತನದ ಕೃತ್ಯ ಕಂಡು ಬೆಚ್ಚಿಬಿದ್ದಿದ್ದ ಕೋಲಾರದ ಜನರು ಸದ್ಯ ಖತರ್ನಾಕ್ ಕಳ್ಳನ ಬಂಧನ ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆ ಮುಖದ ಮೇಲೆ ಮೀಸೆ ಚಿಗುರುವ ಮುನ್ನವೇ ಅಪ್ರಾಪ್ತ ಹುಡುಗರ ಗ್ಯಾಂಗ್ ಕಟ್ಟಿ ಅವರಿಗೆ ದುಶ್ಚಟಗಳ ಖಯಾಲಿ ಹತ್ತಿಸಿ, ಅವರನ್ನು ಕಳ್ಳತನದ ಕೃತ್ಯಕ್ಕೆ ತಳ್ಳಿದ್ದ ಈ ಖತರ್ನಾಕ್ ನೇಪಾಳಿ ರೋಹಿತ್ ಸದ್ಯ ಪೊಲೀಸರ ಕೈಗೆ ಸಿಕ್ಕಿದ್ದು ಜನರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈತನಿಗೆ ಸರಿಯಾಗಿ ರಿಪೇರಿ ಮಾಡದಿದ್ದರೆ ಮತ್ತೊಮ್ಮೆ ಜೈಲಿನಿಂದ ಹೊರಬಂದು ಮತ್ತೆ ತನ್ನ ಕೈಚಳಕ ಶುರುಮಾಡುವ ಸಾಧ್ಯತೆ ಇದ್ದು ಪೊಲೀಸರು ಹಾಗೂ ಕಾನೂನು ಈತನಿಗೆ ಸರಿಯಾದ ಶಿಕ್ಷೆ ವಿಧಿಸಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.