ಕೋಲಾರ: ಶಾಶ್ವತವಾಗಿ ಇತಿಹಾಸದ ಪುಟ ಸೇರಲಿದೆ ಕೆಜಿಎಫ್ ಚಿನ್ನದ ಗಣಿ
Kolar Gold Fields: 2001 ರ ಫೆಬ್ರವರಿಯಲ್ಲಿ ಬೀಗ ಜಡಿಯಲಾಗಿದ್ದ ಕೆಜಿಎಫ್ ಚಿನ್ನದ ಗಣಿಯನ್ನು ಮತ್ತೆ ತೆರೆಯುವ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಆದರೆ ಇದೀಗ ಗಣಿ ಶಾಶ್ವತವಾಗಿ ಮುಚ್ಚುವ ಸುಳಿವು ದೊರೆತಿದ್ದು, ಇತಿಹಾಸದ ಪುಟ ಸೇರುವುದು ನಿಶ್ಚಿತವಾಗಿದೆ.
ಕೋಲಾರ, ಜನವರಿ 24: ಕೋಲಾರದ (Kolar) ಕೆಜಿಎಫ್ನ ಪ್ರಸಿದ್ಧ ಚಿನ್ನದ ಗಣಿ (Kolar Gold Fields) ಇನ್ನು ಶಾಶ್ವತವಾಗಿ ಇತಿಹಾಸದ ಪುಟ ಸೇರುವುದು ಬಹುತೇಕ ಖಚಿತವಾಗಿದೆ. ಚಿನ್ನದ ಗಣಿಯ ಕೇಂದ್ರದ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಪುನರಾರಂಭಕ್ಕೆ ಕೇಂದ್ರ ನಿರಾಸಕ್ತಿ ತಾಳಿದೆ. ರಾಜ್ಯ ಸರ್ಕಾರಕ್ಕೆ ಭೂಮಿಯನ್ನು ಹಿಂತಿರುಗಿಸುವ ಪ್ರಕ್ರಿಯೆಯನ್ನೂ ಕೇಂದ್ರ ಗಣಿ ಇಲಾಖೆ ಆರಂಭಿಸಿದೆ. 2001 ರ ಫೆಬ್ರವರಿಯಲ್ಲಿ ಕೆಜಿಎಫ್ ಚಿನ್ನದ ಗಣಿಗೆ ಅಧಿಕೃತವಾಗಿ ಬೀಗ ಹಾಕಲಾಗಿತ್ತು. ನಂತರ ಚಿನ್ನದ ಗಣಿ ಪುನರಾರಂಭ ಮಾಡುವ ಬಗ್ಗೆ ಸತತ 22 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ, ಈಗ ಅದೂ ಕೊನೆಗೊಂಡಿದೆ.
ಕೆಜಿಎಫ್ ಚಿನ್ನದ ಗಣಿಯ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಗುತ್ತಿಗೆ ಅವಧಿ 2023ರ ಆಗಸ್ಟ್ಗೆ ಮುಕ್ತಾಯವಾಗಲಿದೆ. ಹೀಗಾಗಿ 12,500 ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರಕ್ಕೆ ಹಿಂದುರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಧ್ಯೆ, ಚಿನ್ನದ ಅದಿರು ತೆಗೆದು ಹಾಕಲಾಗಿರುವ ಸೈನೆಡ್ ಮಿಶ್ರಿತ ಮಣ್ಣಿನ ಗುಡ್ಡಗಳನ್ನು ಶೋಧಿಸಿ ಚಿನ್ನ ತೆಗೆಯಲು ಕೇಂದ್ರ ಸರ್ಕಾರ ಗ್ಲೋಬಲ್ ಟೆಂಡರ್ ಕರೆದಿದೆ.
ಸದ್ಯ ರಾಜ್ಯ ಸರ್ಕಾರದ ಅಂಗಳದಲ್ಲಿ ಕೆಜಿಎಫ್ ಚಿನ್ನದ ಗಣಿ ಪ್ರದೇಶ ಇದ್ದು, ರಾಜ್ಯ ಸರ್ಕಾರ ಕೈಗಾರಿಕಾ ಪ್ರದೇಶ ಹಾಗೂ ಹೊಸ ಟೌನ್ ಶಿಪ್ ಮಾಡುವ ಆಲೋಚನೆಯಲ್ಲಿದೆ.
ಕೇಂದ್ರ ಗಣಿ ಇಲಾಖೆಯ ಸ್ಪಷ್ಟನೆ ಏನು?
ಕೆಜಿಎಫ್ ಚಿನ್ನದ ಗಣಿಯ ಕೇಂದ್ರದ ಗುತ್ತಿಗೆ ಅವಧಿ ಮುಕ್ತಾಯವಾದ ಕುರಿತು ಕೇಂದ್ರ ಗಣಿ ಇಲಾಖೆಯ ಕಾರ್ಯದರ್ಶಿ ಕಾಂತರಾವ್ ಸ್ಪಷ್ಟನೆ ನೀಡಿದ್ದು, ಗಣಿ ಪ್ರದೇಶದ ಒತ್ತುವರಿ ತೆರವು ಕಾರ್ಯ ಹಾಗೂ ಸೈನೈಡ್ ಗುಡ್ಡಗಳ ಮರುಸಂಸ್ಕರಣೆ ಪ್ರಕ್ರಿಯೆ ಮುಗಿದ ನಂತರ ರಾಜ್ಯಕ್ಕೆ ಅಧಿಕೃತವಾಗಿ ಭೂಮಿ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಎಂಟು ತಿಂಗಳಿಂದ ಬಾಡಿಗೆ ಬಾಕಿ ಇರಿಸಿದ ರಾಜ್ಯ ಸರ್ಕಾರ; ಸಂಕಷ್ಟದಲ್ಲಿ ರಾಯಚೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳು
ಕೆಜಿಎಫ್ ಚಿನ್ನದ ಗಣಿಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಪುನಾರಂಭಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಕಳೆದ ವರ್ಷ ವರದಿಯಾಗಿತ್ತು. ಆದರೆ, ಇದೀಗ ಗಣಿ ಶಾಶ್ವತವಾಗಿ ಇತಿಹಾಸದ ಪುಟ ಸೇರುವ ಎಲ್ಲ ಸಾಧ್ಯತೆ ಗೋಚರಿಸಿದೆ.
ಮುಚ್ಚಿದ್ದೇಕೆ ಕೆಜಿಎಫ್ ಚಿನ್ನದ ಗಣಿ?
ನಿಕ್ಷೇಪ ಕೊರತೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆ ಬೆಲೆಗಳ ಕಾರಣ ಕೋಲಾರದ ಕೆಜಿಎಫ್ ಚಿನ್ನದ ಗಣಿಯನ್ನು 2001 ರಲ್ಲಿ ಮುಚ್ಚಲಾಗಿತ್ತು. ಅದಾದ ನಂತರ ಅದನ್ನು ಪುನರಾರಂಭಿಸುವ ಪ್ರಯತ್ನಗಳು ನಡೆಯುತ್ತಲೇ ಇದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ