AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಒಳಜಗಳ: ಡಿಸಿಸಿ ಬ್ಯಾಂಕ್​ ಮತ್ತು ಕೋಮುಲ್​ಗೆ ಸಂಕಷ್ಟ

ಕೋಲಾರ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಕೋಲಾರ ಹಾಲು ಒಕ್ಕೂಟ (ಕೋಮುಲ್) ಮತ್ತು ಡಿಸಿಸಿ ಬ್ಯಾಂಕ್‌ಗಳು ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತು ಗುಂಪುಗಾರಿಕೆಯಿಂದ ತೀವ್ರ ನಷ್ಟಕ್ಕೆ ಸಿಲುಕಿವೆ. ಕೋಮುಲ್‌ನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸರಕುಗಳು ಮಾರಾಟವಾಗದೆ ಕೊಳೆಯುತ್ತಿವೆ, ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಸ್ಥಗಿತಗೊಂಡಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ.

ಕಾಂಗ್ರೆಸ್​ ಒಳಜಗಳ: ಡಿಸಿಸಿ ಬ್ಯಾಂಕ್​ ಮತ್ತು ಕೋಮುಲ್​ಗೆ ಸಂಕಷ್ಟ
ಕಾಂಗ್ರೆಸ್​ ಒಳಜಗಳ: ಡಿಸಿಸಿ ಬ್ಯಾಂಕ್​ ಮತ್ತು ಕೋಮುಲ್​ಗೆ ಸಂಕಷ್ಟ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 06, 2025 | 9:58 PM

Share

ಕೋಲಾರ​, ಫೆಬ್ರವರಿ 06: ಅವು ಜಿಲ್ಲೆಯ ಮಹಿಳೆಯರ, ರೈತರ ಹಾಗೂ ಬಡವರ ಜೀವನಾಡಿಗಳಾಗಿರುವ ಸಹಕಾರಿ ಸಂಸ್ಥೆಗಳು. ರೈತರು, ಮಹಿಳೆಯರಿಗೆ ಆರ್ಥಿಕ ಬೆನ್ನಲುಬಾಗಿವೆ. ಇಂಥ ಎರಡು ಸಂಸ್ಥೆಗಳಲ್ಲಿ ರಾಜಕೀಯ ಕಾರಣಕ್ಕೆ ಅದರಲ್ಲೂ ಕಾಂಗ್ರೆಸ್ (congress)​ ಪಕ್ಷದಲ್ಲಿನ ಒಳಜಗಳ ಗುಂಪುಗಾರಿಕೆ ಹಾಗೂ ವೈಯಕ್ತಿಕ ಪ್ರತಿಷ್ಠೆಯಿಂದ ಈ ಎರಡೂ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕುತ್ತಿದ್ದು, ಕಾಂಗ್ರೆಸ್​ ರಾಜಕೀಯ ಎಲ್ಲಿ ಈ ಸಂಸ್ಥೆಗಳನ್ನು ಮುಗಿಸಿಬಿಡುತ್ತವೋ ಅನ್ನೋ ಆತಂಕ ಜಿಲ್ಲೆಯ ಜನರಲ್ಲಿ ಶುರುವಾಗಿದೆ.

ನಷ್ಟದ ಸುಳಿ

ಜಿಲ್ಲೆಯಲ್ಲಿ ಸುಮಾರು 1200ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರಿ ಸಂಸ್ಥೆಗಳಿಗೆ, ಜಿಲ್ಲೆಯ ಸಾವಿರಾರು ಕುಟುಂಬಗಳು ಇಂದು ಹೈನೋದ್ಯಮದ ಮೇಲೆ ಅವಲಂಬಿತವಾಗಿ ಆರ್ಥಿಕ ಸ್ವಾವಲಂಬನೆ ಕಂಡು ಕೊಂಡಿವೆ ಅದಕ್ಕೆ ಕಾರಣ ಕೋಲಾರ ಹಾಲು ಒಕ್ಕೂಟ ಕೋಮುಲ್.​ ಕೋಲಾರ ಹಾಲು ಒಕ್ಕೂಟ ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಕಾರಣಕ್ಕಾಗಿ ನಷ್ಟದ ಸುಳಿಗೆ ಸಿಲುಕುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ: ಗೋಡೌನ್​ನಲ್ಲಿ ಕೊಳೆಯುತ್ತಿದೆ ಕೋಮುಲ್​ನ ಹಾಲಿನ ಪೌಡರ್ ಮತ್ತು ಬೆಣ್ಣೆ

ಕೋಮುಲ್​ನಲ್ಲಿ ಇರುವ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಹಾಲಿನ ಪೌಡರ್ ಹಾಗೂ ಬೆಣ್ಣೆ ಮಾರಾಟವಾಗದೆ ಗೋಡೌನ್​ನಲ್ಲಿ ಕೊಳೆಯುತ್ತಿದೆ. ಜೊತೆಗೆ ಕೋಲಾರ ಹಾಲು ಒಕ್ಕೂಟಕ್ಕೆ ಸದ್ಯ ಆಡಳಿತಾಧಿಕಾರಿ ನೇಮಕವಾಗಿದ್ದು, ಆಡಳಿತ ಮಂಡಳಿ ಚುನಾವಣೆಗೆ ಕೋರ್ಟ್​​ನಲ್ಲಿ ತಡೆಯಾಜ್ಞೆ ಇದ್ದು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯಾದ ನಂತರ ಕೋಲಾರ ಹಾಲು ಒಕ್ಕೂಟದ ನೂತನ ಕ್ಷೇತ್ರ ಪುನರ್​ವಿಂಗಡನೆ ವಿಚಾರವಾಗಿ ಮಾಲೂರು ಕಾಂಗ್ರೇಸ್​ ಶಾಸಕ ನಂಜೇಗೌಡ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಒಕ್ಕೂಟದ ವ್ಯವಸ್ಥಾಪಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ತನಗಿಷ್ಟ ಬಂದಂತೆ ಕ್ಷೇತ್ರ ಪುನರ್​ ವಿಂಗಡಣೆ ಮಾಡಿಕೊಂಡಿದ್ದಾರೆ.

ಕೋಮುಲ್​ನಲ್ಲಿ ಅವ್ಯವಹಾರ ಆರೋಪ

ಯಾವುದೇ ನಿಯಮ ಪಾಲಿಸದೆ ಯಾರೊಬ್ಬರ ಅಭಿಪ್ರಾಯ ಪಡೆಯದೆ ಅಕ್ರಮ ಎಸಗಿದ್ದಾರೆ ಎಂದು ಬಂಗಾರಪೇಟೆ ಕಾಂಗ್ರೇಸ್​ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಬಹಿರಂಗವಾಗಿಯೇ ಆರೋಪಿಸಿದ್ದರು. ಈ ವಿಚಾರವನ್ನು ಬೆಳಗಾವಿ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿ ಸ್ವಪಕ್ಷದ ಶಾಸಕರ ವಿರುದ್ದವೇ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೆ ಕೋಮುಲ್​ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮತ್ತೊಮ್ಮೆ ನಿಯಮಾನುಸುವಾರ ಮಾಡಬೇಕು ಎಂದು ಕೋರ್ಟ್​ ಮೊರೆ ಹೋಗಿ ಈ ಹಿಂದೆ ಮಾಡಿದ್ದ ಕ್ಷೇತ್ರ ಪುನರ್ ವಿಂಗಡಣೆಗೆ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಮತ್ತೊಮ್ಮೆ ಕ್ಷೇತ್ರ ಪುನರ್ ವಿಂಗಡಣೆ ನಡೆಯುವವರೆಗೂ ಸದ್ಯ ಕೋಮುಲ್​ ಆಡಳಿತ ಮಂಡಳಿ ಚುನಾವಣೆಗೆ ಮಾಡುವಂತಿಲ್ಲ ಅಲ್ಲಿಯವರೆಗೆ ಕೋಲಾರ ಉಪವಿಭಾಗಾಧಿಕಾರಿಯನ್ನು ಕೋಮುಲ್​ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಕೇವಲ ಅಧಿಕಾರಿಗಳಿಂದ ಕೋಮುಲ್​ ಆಡಳಿತ ನಡೆಯುತ್ತಿದ್ದು ಒಕ್ಕೂಟ ಆಡಳಿತ ಮಂಡಳಿ ಇಲ್ಲದೆ ಕೋಮುಲ್​ ಏನಾಗುತ್ತದೋ ಅನ್ನೋ ಆತಂಕ ಎದುರಾಗಿದೆ.

ಇದು ಕೋಲಾರ ಹಾಲು ಒಕ್ಕೂಟದ ಕಥೆಯಾದರೆ, ಕೋಲಾರ ಡಿಸಿಸಿ ಬ್ಯಾಂಕ್​ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಕೋಲಾರ ಡಿಸಿಸಿ ಬ್ಯಾಂಕ್​ ವಿಚಾರವಾಗಿ ಕೋಲಾರ ಜಿಲ್ಲೆಯ ಹಿರಿಯ ಕಾಂಗ್ರೇಸ್ ಮುಖಂಡರಾದ ರಮೇಶ್​ ಕುಮಾರ್ ಹಾಗೂ ಕೆ.ಹೆಚ್​.ಮುನಿಯಪ್ಪ ಬಣದ ನಡುವೆ ಪ್ರತಿಷ್ಠೆಯ ಕಣವಾಗಿ ಡಿಸಿಸಿ ಬ್ಯಾಂಕ್ ಪರಿಣಮಿಸಿದ್ದು, ಎರಡೂ ಗುಂಪಿನ ಮುಖಂಡರು ತಮ್ಮ ಪ್ರತಿಷ್ಠೆಗಾಗಿ ಡಿಸಿಸಿ ಬ್ಯಾಂಕ್​ನ್ನು ನಷ್ಟದ ಸುಳಿಗೆ ಸಿಲುಕಿಸುತ್ತಿದ್ದಾರೆ. ಕಳೆದ ಎರಡು ವರ್ಷ ಗಳಿಂದ ಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿ ಚುನಾವಣೆ ಮಾಡದೆ, ಎರಡು ವರ್ಷಗಳಿಂದ ಒಂದು ಬಿಡಿಗಾಸು ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಸಾಲ ನೀಡಲಾಗದೆ ಬ್ಯಾಂಕ್​​ ಈಗಾಗಲೇ 9 ಕೋಟಿ ರೂಪಾಯಿ ನಷ್ಟಕ್ಕೆ ಸಿಲುಕಿದೆ. ಸರಿಯಾಗಿ ಸಾಲ ಮರುಪಾವತಿಯಾಗುತ್ತಿಲ್ಲ.

ಡಿಸಿಸಿ ಬ್ಯಾಂಕ್​ ಅಂದರೆ ಕೋಲಾರ ಚಿಕ್ಕಬಳ್ಳಾಪುರ ಸಹಕಾರಿ ಕೇಂದ್ರ ಬ್ಯಾಂಕ್​ನ ಆಡಳಿತ ಮಂಡಳಿಯ ಅಧಿಕಾರವಧಿ ನವೆಂಬರ್​-17-2023ಕ್ಕೆ ಪೂರ್ಣಗೊಂಡಿದ್ದರೂ ಇನ್ನೂ ಚುನಾವಣೆ ಮಾಡಲು ಆಗಿಲ್ಲ. ಎರಡು ಗುಂಪಿನ ನಾಯಕರು ತೆರೆಮರೆಯಲ್ಲೇ ಹೋರಾಟ ಮಾಡುತ್ತಿದ್ದಾರೆ. ಒಂದೆಡೆ ರಮೇಶ್​ ಕುಮಾರ್ ಬಣದ ಮುಖಂಡರು ಡಿಸಿಸಿ ಬ್ಯಾಂಕ್​ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಬ್ಯಾಂಕ್​ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಅದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಆನಂತರವೇ ಚುನಾವಣೆ ಮಾಡಬೇಕು ಎಂದು ಪಟ್ಟು ಹಿಡಿದು ಕೆ.ಹೆಚ್. ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ದ ಕತ್ತಿ ಮಸೆಯುತ್ತಿದ್ದಾರೆ.

ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ ಪ್ರಯೋಜನ ರೈತರಿಗೆ ಸಿಗಲ್ಲ! ಹಾಲು ಉತ್ಪಾದಕರು ಹೇಳುವ ಲೆಕ್ಕಾಚಾರ ಇಲ್ಲಿದೆ

ಇನ್ನು ಇದಕ್ಕೆ ಪ್ರತಿಯಾಗಿ ಕೆ.ಹೆಚ್​ ಮುನಿಯಪ್ಪ ಬಣದ ಕೆಜಿಎಫ್ ಕಾಂಗ್ರೇಸ್​​ ಶಾಸಕಿ ರೂಪಕಲಾ ಹಾಗೂ ಬ್ಯಾಲಹಳ್ಳಿ ಗೋವಿಂದಗೌಡ ರಮೇಶ್​ ಕುಮಾರ್ ಬಣಕ್ಕೆ ಟಕ್ಕರ್ ಕೊಡುತ್ತಾ ಅವರ ಎಲ್ಲಾ ಆದೇಶಗಳಿಗೂ ಕೋರ್ಟ್​ ನಿಂದ ತಡೆಯಾಜ್ಞೆ ತರುವ ಮೂಲಕ ಚುನಾವಣೆ ಮಾಡಬೇಕು ಎಂದು ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಡಳಿತ ಮಂಡಳಿ ಚುನಾವಣೆ ಮಾಡದೆ, ಪರಸ್ಪರ ಎರಡೂ ಗುಂಪಿನ ಮುಖಂಡರು ಒಬ್ಬರ ಕಾಲು ಮತ್ತೊಬ್ಬರು ಎಳೆದುಕೊಂಡು ಡಿಸಿಸಿ ಬ್ಯಾಂಕ್​ನನ್ನು ಅಧೋಗತಿಗೆ ತಂದಿಟ್ಟಿದ್ದಾರೆ.

ಸಚಿವ ಬೈರತಿ ಸುರೇಶ್ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅವರನ್ನು ಕೇಳಿದರೆ, ಡಿಸಿಸಿ ಬ್ಯಾಂಕ್​ ವಿಚಾರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಮತ್ತು ಚೇಳೂರು ಹೋಬಳಿ ಕೇಂದ್ರಗಳನ್ನು ಹೊಸ ತಾಲ್ಲೂಕು ಕೇಂದ್ರವಾಗಿ ಮಾಡಿದ್ದು, ಅದಕ್ಕೆ ಹೊಸ ನಿರ್ದೇಶಕರನ್ನು ಸ್ಥಾನ ಮಾಡಿ ನಂತರ ಚುನಾವಣೆ ಮಾಡುವುದಾಗಿ ಸಬೂಬು ಹೇಳುತ್ತಿದ್ದಾರೆ. ಅಲ್ಲದೆ ಕೋಲಾರ ಹಾಲು ಒಕ್ಕೂಟದ ಚುನಾವಣೆಗೆ ತಡೆಯಾಜ್ಞೆ ಇದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಕೋಲಾರ ಜಿಲ್ಲೆಯ ಕಾಂಗ್ರೆಸ್​ ಪಕ್ಷದಲ್ಲಿರುವ ಒಳಜಗಳ, ಗುಂಪುಗಾರಿಕೆ ಹಾಗೂ ಪ್ರತಿಷ್ಠೆಯ ಕಾರಣದಿಂದ ಇಂದು ಜಿಲ್ಲೆಯ ಜನರ ರೈತರ ಬಡವರ ಮಹಿಳೆಯರ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್​ ಹಾಗೂ ಕೋಮುಲ್​ ನಷ್ಟದತ್ತ ಸಾಗುತ್ತಿದೆ. ರಾಜ್ಯ ಸರ್ಕಾರ ಕೂಡ ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಕೋಲಾರ ಜಿಲ್ಲೆಯ ಕಾಂಗ್ರೆಸ್​ ಮುಖಂಡರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 pm, Thu, 6 February 25