ವೀರಗಲ್ಲು ಪಾರ್ಕ್​.. ರಾಜ್ಯದಲ್ಲಿ ಮೊದಲ ಬಾರಿಗೆ ವೀರಗಲ್ಲುಗಳ ಸಂರಕ್ಷಿಸಿ, ವಿದ್ಯಾರ್ಥಿಗಳಿಗೆ ಬೋಧಿಸುವ ಕೆಲಸ ನಡೆಯುತ್ತಿದೆ

ಎಲ್ಲಾ ವೀರಗಲ್ಲು, ಶಿಲಾ ಶಾಸನಗಳು ಹಾಗೂ ಕೆಲವೊಂದು ಇತಿಹಾಸ ಹೇಳುವ ಕುರುಹುಗಳು ಈ ರೀತಿ ಎಲ್ಲವನ್ನೂ ಪಾರ್ಕ್​ನಲ್ಲಿ ಸುರಕ್ಷಿತವಾಗಿಡುವ ಕೆಲಸ ನಡೆದಿದೆ. ಈ ಪಾರ್ಕ್​ ವಿದ್ಯಾರ್ಥಿಗಳಿಗೆ ಬೋಧನಾ ಕೇಂದ್ರವಾಗಿ ಮಾಡುವ ಕೆಸಲವೂ ನಡೆದಿದೆ. ಜಿಲ್ಲೆಯಲ್ಲಿ 3 ಸ್ಥಳಗಳಲ್ಲಿ ಈ ಪಾರ್ಕ್​ ನಿರ್ಮಾಣ ಮಾಡಲಾಗುತ್ತಿದೆ.

ವೀರಗಲ್ಲು ಪಾರ್ಕ್​.. ರಾಜ್ಯದಲ್ಲಿ ಮೊದಲ ಬಾರಿಗೆ ವೀರಗಲ್ಲುಗಳ ಸಂರಕ್ಷಿಸಿ, ವಿದ್ಯಾರ್ಥಿಗಳಿಗೆ ಬೋಧಿಸುವ ಕೆಲಸ ನಡೆಯುತ್ತಿದೆ
ರಾಜ್ಯದಲ್ಲಿ ಮೊದಲ ಬಾರಿಗೆ ವೀರಗಲ್ಲುಗಳ ಸಂರಕ್ಷಿಸಿ ವಿದ್ಯಾರ್ಥಿಗಳಿಗೆ ಬೋಧನೆ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Jan 15, 2024 | 5:14 PM

ಆ ಜಿಲ್ಲೆಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕೆ ಪೂರಕವಾಗಿಯೇ ಆ ಜಿಲ್ಲೆಯಲ್ಲಿ ಅಲ್ಲಿನ ರೋಚಕ ಇತಿಹಾಸ ನೆನಪಿಸುವ, ಆಗಿನ ಯುದ್ದಗಳಲ್ಲಿ ಹೋರಾಡಿ ಮಡಿದ ವೀರ ಯೋಧರ ನೆನಪಿನ ಕಲ್ಲುಗಳು ನೂರಾರಿದ್ದವು. ಆ ವೀರಗಲ್ಲುಗಳನ್ನು ಸಂರಕ್ಷಿಸಿ ಇತಿಹಾಸವನ್ನು ಭದ್ರವಾಗಿ ಸಂರಕ್ಷಿಸುವ ಕೆಲಸವೊಂದು ರಾಜ್ಯದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ.. ಡೀಟೇಲ್ಸ್​ ಇಲ್ಲಿದೆ. ಹತ್ತಾರು ವೀರ ಯೋಧರ ನೆನಪಿನಲ್ಲಿ ನಿರ್ಮಾಣವಾಗಿರುವ ಅಪರೂಪದ ಪಾರ್ಕ್ ಅದು. ಆ ಪಾರ್ಕ್​ನಲ್ಲಿ ಕಂಡು ಬರುವ ಹತ್ತಾರು ಬಗೆ ಬಗೆಯ ವೀರಗಲ್ಲುಗಳು, ಹಲವು ಸಂಸ್ಥಾನಗಳು, ರಾಜ ಮನೆತನಗಳ ಇತಿಹಾಸ ನೆನಪಿಸುವ ಈ ವೀರಗಲ್ಲುಗಳು ಇದೆಲ್ಲಾ ಕಂಡು ಬಂದಿದ್ದು ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಗ್ರಾಮದಲ್ಲಿ.

ಹೌದು ಕೋಲಾರ ಜಿಲ್ಲೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ, ಇಲ್ಲಿ ಚೋಳರು, ಗಂಗರು, ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ಒಡೆಯರು ಹೀಗೆ ಹಲವು ರಾಜಮನೆತನಗಳು ಆಳಿರುವ ನೂರಾರು ಕುರುಹುಗಳು ಕೋಲಾರದಲ್ಲಿ ಸಿಗುತ್ತವೆ. ಇಂಥ ಇತಿಹಾಸ ಹೊಂದಿರುವ ಜಿಲ್ಲೆಯಲ್ಲಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಕೋಲಾರ ಜಿಲ್ಲಾ ಪಂಚಾಯ್ತಿ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ.

ಅದು ಕೋಲಾರ ಜಿಲ್ಲೆಯಲ್ಲಿರುವ ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುವ ಸಂರಕ್ಷಣೆ ಮಾಡಲಾಗದೆ ಇರುವ ನೂರಾರು ವೀರಗಲ್ಲುಗಳನ್ನು ಸಂರಕ್ಷಿಸುವ ಹಾಗೂ ಅವುಗಳನ್ನು ಒಂದೆಡೆ ಸುರಕ್ಷಿತವಾಗಿ ಇಡುವ ಆ ಮೂಲಕ ಆ ವೀರಗಲ್ಲುಗಳ ಇತಿಹಾಸವನ್ನು ತಲೆ ತಲೆಮಾರಿಗೆ ತಿಳಿಸುವ ಪ್ರಯತ್ನವೊಂದು ಮಾಡಲಾಗಿದೆ.

ಆ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪಂಚಾಯ್ತಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಹಲವೆಡೆ ವೀರಗಲ್ಲು ಪಾರ್ಕ್​ ನಿರ್ಮಾಣ ಮಾಡಿ ಜಿಲ್ಲೆಯ ಹಲವು ಭಾಗಗಳಲ್ಲಿ ಎಲ್ಲೆಂದರಲ್ಲಿ ಬಿದ್ದು ಹಾಳಾಗುತ್ತಿದ್ದ ವೀರಗಲ್ಲುಗಳನ್ನು ಸುರಕ್ಷಿತವಾಗಿ ಒಂದೆಡೆ ಸಂರಕ್ಷಿಸಿ ಅದನ್ನು ಒಂದೊಳ್ಳೆ ಮಾಹಿತಿ ಕೇಂದ್ರವನ್ನಾಗಿ ಮಾಡುವ ಕೆಲಸ ಮಾಡಲಾಗಿದೆ. ಇದು ಗ್ರಾಮದ ಜನರಿಗೂ ಕೂಡಾ ಒಂದು ಹೆಮ್ಮೆಯ ವಿಷಯವಾಗಿದೆ.

ಸದ್ಯಕ್ಕೆ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು, ಮಾಲೂರು ತಾಲ್ಲೂಕಿನ ದೊಡ್ಡ ಶಿವಾರ, ಬಂಗಾರಪೇಟೆ ತಾಲ್ಲೂಕಿನ ಹುನುಕುಂದ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಂಥಾದೊಂದು ವೀರಗಲ್ಲು ಪಾರ್ಕ್​ ನಿರ್ಮಾಣ ಕಾರ್ಯ ಮಾಡಲಾಗಿದೆ.

ಇದನ್ನೂ ಓದಿ: ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿದೆ ಮೈಸೂರಿನ ಅರುಣ್ ಯೋಗಿರಾಜ್ ನಿರ್ಮಿಸಿದ ರಾಮಲಲ್ಲಾ ವಿಗ್ರಹ

ಅದರಲ್ಲೂ ಕೇವಲ ವೀರಗಲ್ಲುಗಳಷ್ಟೇ ಅಲ್ಲದೆ ಅಲ್ಲಿನ ಆ ಗ್ರಾಮಗಳ ಸುತ್ತಮುತ್ತ ಸಿಗುವ ಇತಿಹಾಸವನ್ನು ನೆನಪಿಸುವ ಎಲ್ಲಾ ವೀರಗಲ್ಲುಗಳನ್ನು, ಶಿಲಾ ಶಾಸನಗಳನ್ನು, ಹಾಗೂ ಕೆಲವೊಂದು ಇತಿಹಾಸ ಹೇಳುವ ಕುರುಹುಗಳು ಈ ರೀತಿ ಎಲ್ಲವನ್ನೂ ಪಾರ್ಕ್​ನಲ್ಲಿ ಸುರಕ್ಷಿತವಾಗಿ ಒಂದೇ ಸೂರಿನಡಿ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ.

ಈ ಪಾರ್ಕ್​ ವಿದ್ಯಾರ್ಥಿಗಳಿಗೆ ಭೋದನಾ ಕೇಂದ್ರವನ್ನಾಗಿ ಮಾಡುವ ಕೆಲಸವೂ ನಡೆದಿದೆ. ಸದ್ಯ ಜಿಲ್ಲೆಯಲ್ಲಿ ಮೂರು ಸ್ಥಳಗಳಲ್ಲಿ ಇಂಥಾ ಪಾರ್ಕ್​ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ತಾಲ್ಲೂಕುಗಳಲ್ಲಿ ವೀರಗಲ್ಲು ಪಾರ್ಕ್ ನಿರ್ಮಾಣ ಮಾಡಿದರೆ ಅನುಕೂಲಕರ ಅನ್ನೋದು ಗ್ರಾಮಸ್ಥರ ಮಾತು.

ಒಟ್ಟಾರೆ ರಾಜ್ಯದಲ್ಲೇ ಮೊದಲ ಬಾರಿಗೆ ಸಾವಿರಾರು ವರ್ಷಗಳ ಇತಿಹಾಸ ಹೇಳುವ ವೀರಗಲ್ಲುಗಳನ್ನು ಸಂರಕ್ಷಿಸುವ ಮೂಲಕ ಅವುಗಳ ಇತಿಹಾಸವನ್ನು ತಲೆ ತಲೆ ಮಾರುಗಳಿಗೆ ತಿಳಿಸುವ ಒಂದು ಬೋಧನಾ ಕೇಂದ್ರವನ್ನಾಗಿ ನಿರ್ಮಾಣ ಮಾಡಿರುವುದು ನಿಜಕ್ಕೂ ವಿಭಿನ್ನ ಹಾಗೂ ಅಪರೂಪ ಅನ್ನೋದರಲ್ಲಿ ಎರಡು ಮಾತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ