ಕಾಂಗ್ರೆಸ್ ಶಾಸಕ ನಂಜೇಗೌಡಗೆ ಸಂಕಷ್ಟ: ಆರೋಪಗಳ ಪಟ್ಟಿ ಬಿಡುಗಡೆ ಮಾಡಿದ ಇಡಿ
ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮನೆ, ಕಚೇರಿ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕೇಸ್ ದಾಖಲಿಸಿ ಇಡಿ ತನಿಖೆ ಮಾಡುತ್ತಿದೆ. 150 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಅಕ್ರಮವಾಗಿ ಹಂಚಿಕೆ ಪ್ರಕರಣ ಸಂಬಂಧ ಶೋಧ ವೇಳೆ 25 ಲಕ್ಷಕ್ಕೂ ಹೆಚ್ಚು ಹಣ, 50 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ.
ಕೋಲಾರ, ಜನವರಿ 11: ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ (MLA Nanjegowda) ಮನೆ, ಕಚೇರಿ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕೇಸ್ ದಾಖಲಿಸಿ ಇಡಿ ತನಿಖೆ ಮಾಡುತ್ತಿದೆ. 150 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಅಕ್ರಮವಾಗಿ ಹಂಚಿಕೆ ಪ್ರಕರಣ ಸಂಬಂಧ ಶೋಧ ವೇಳೆ 25 ಲಕ್ಷಕ್ಕೂ ಹೆಚ್ಚು ಹಣ, 50 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ ವೇಳೆ ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಹಣ ವರ್ಗಾವಣೆ, ಹಣಕ್ಕಾಗಿ ಉದ್ಯೋಗ ಮಾರಾಟ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಮಾಲೂರು ಶಾಸಕ, ಹಿಂದಿನ ತಹಶೀಲ್ದಾರ್ ನಾಗರಾಜ್ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ನ ಆಧಾರದಲ್ಲಿ ತನಿಖೆ ಮಾಡಲಾಗಿದೆ.
ಇದನ್ನೂ ಓದಿ: ಇಡಿ ಅಧಿಕಾರಿಗಳ ಪರಿಶೀಲನೆ ಅಂತ್ಯ: ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಾಂಗ್ರೆಸ್ ಶಾಸಕ
ಜನವರಿ 8, 9ರಂದು ದಾಳಿ ನಡೆಸಿ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳು, ಜಿಲ್ಲೆಯ ಮಾಲೂರು ತಾಲೂಕಿನಲ್ಲಿ 150 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಹಂಚಿಕೆ ಮಾಡಿದ ಆರೋಪ ಮಾಡಲಾಗಿತ್ತು. ಒಂದೇ ತಿಂಗಳಲ್ಲಿ 4 ಸಭೆ ನಡೆಸಿ, ನಕಲಿ ದಾಖಲೆ ಸೃಷ್ಟಿಸಿ 80 ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಮಂಜೂರು ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಶಾಸಕ ಕೆ.ವೈ.ನಂಜೇಗೌಡರ ವಿರುದ್ದ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಶಾಸಕ ನಂಜೇಗೌಡ ಮನೆ ಮೇಲೆ ಇಡಿ ದಾಳಿ ಕೇಸ್: ಪುತ್ರ ಹರೀಶ್, ಪಿಎ ಕರೆದೊಯ್ದ ಅಧಿಕಾರಿಗಳು
ಕೋಲಾರ ಹಾಲು ಒಕ್ಕೂಟದಲ್ಲಿ ಹೊಸ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಮತ್ತೊಂದು ಪ್ರಕರಣದಲ್ಲಿಯೂ ಹಗರಣ ನಡೆಸಿರುವ ಆರೋಪ ಮಾಡಲಾಗಿದೆ. ಪ್ರತಿ ಉದ್ಯೋಗಕ್ಕೆ 20 ರಿಂದ 30 ಲಕ್ಷ ರೂ. ಲಂಚ ಪಡೆದಿರುವ ಆರೋಪ ಮಾಡಲಾಗಿದ್ದು, ಸಂದರ್ಶನದ ಪ್ರಕ್ರಿಯೆ ದುರ್ಬಳಕೆ ಮಾಡಿಕೊಂಡಿರುವ ಮಾಹಿತಿ ಇಡಿಗೆ ಲಭ್ಯವಾಗಿದೆ.
ಒಕ್ಕೂಟದ ಅಧ್ಯಕ್ಷ ಕೆ.ವೈ ನಂಜೇಗೌಡ ಸೇರಿದಂತೆ ನಾಲ್ಕು ಮಂದಿ ಸದಸ್ಯರ ವಿರುದ್ದ ಆರೋಪ ಕೇಳಿಬಂದಿದ್ದು, ಕೆಲವು ರಾಜಕಾರಣಿಗಳು ಶಿಫಾರಸು ಮಾಡಿದ್ದ 30 ಮಂದಿ ಅಭ್ಯರ್ಥಿಗಳ ಪಟ್ಟಿ ಪತ್ತೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.