ಕೊಪ್ಪಳ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ; ಸ್ಕೂಲ್​ನಿಂದ ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ ತಂದೆ

ಸರಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದರಿಂದ ನನ್ನ ಧರ್ಮಕ್ಕೆ ವಿರೋಧವಿದೆ. ಒಂದೆರೆಡು ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಆದರೆ ಬೇರೆ ಮಕ್ಕಳು ತಿನ್ನುವುದನ್ನು ನೋಡಿ ನನ್ನ ಮಗನೂ ತಿನ್ನಬಹುದು. ಇದೇ ಕಾರಣಕ್ಕೆ ಸರಕಾರಿ ಶಾಲೆ ಬಿಡಿಸಿದ್ದೇನೆ ಎಂದು ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷ ವಿರಣ್ಣ ತಿಳಿಸಿದ್ದಾರೆ.

ಕೊಪ್ಪಳ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ; ಸ್ಕೂಲ್​ನಿಂದ ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ ತಂದೆ
ಮಗನ ಟಿಸಿ ಪಡೆದ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೀರಣ್ಣ ಕೋರ್ಲಹಳ್ಳಿ ಹಂಚಿಕೊಂಡಿದ್ದಾರೆ
Follow us
TV9 Web
| Updated By: preethi shettigar

Updated on:Dec 19, 2021 | 9:05 AM

ಕೊಪ್ಪಳ: ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ (Egg to students) ಹಿನ್ನೆಲೆ ಸರಕಾರಿ ಶಾಲೆಯಿಂದ‌ ತಂದೆಯೊಬ್ಬರು ಮಗನ ಟಿಸಿ ಹಿಂಪಡೆದಿದ್ದಾರೆ. ಕೊಪ್ಪಳದ ವೀರಣ್ಣ ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷರಾಗಿದ್ದು, ಶಾಲೆಯಲ್ಲಿ ಮೊಟ್ಟೆ ನೀಡುತ್ತಾರೆ ಎಂಬ ಕಾರಣಕ್ಕೆ ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ (Private school) ಸೇರಿಸಿದ್ದಾರೆ. ಕೊಪ್ಪಳದ ರೈಲ್ವೆ ನಿಲ್ದಾಣದ ಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School) ಒಂದನೇ ತರಗತಿ ಓದುತ್ತಿರುವ ಮಗ ಶರಣಬಸವಕಿರಣನನ್ನು ಸರಕಾರಿ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ.

ಸರಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದರಿಂದ ನನ್ನ ಧರ್ಮಕ್ಕೆ ವಿರೋಧವಿದೆ. ಒಂದೆರೆಡು ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಆದರೆ ಬೇರೆ ಮಕ್ಕಳು ತಿನ್ನುವುದನ್ನು ನೋಡಿ ನನ್ನ ಮಗನೂ ತಿನ್ನಬಹುದು. ಇದೇ ಕಾರಣಕ್ಕೆ ಸರಕಾರಿ ಶಾಲೆ ಬಿಡಿಸಿದ್ದೇನೆ ಎಂದು ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷ ವಿರಣ್ಣ ತಿಳಿಸಿದ್ದಾರೆ.

ಮಗನ ಟಿಸಿ ಪಡೆದ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀರಣ್ಣ ಕೋರ್ಲಹಳ್ಳಿ ಹಂಚಿಕೊಂಡಿದ್ದು, ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ಶಾಲೆಗಳಲ್ಲಿ ಮೊಟ್ಟೆ ವಿತರಣೆಯನ್ನು ಸರ್ಕಾರ ಕೈಗೊಂಡಿದ್ದೇಕೆ? ಮಕ್ಕಳಲ್ಲಿನ ಅಪೌಷ್ಟಿಕತೆ ವಿಚಾರ ಸರ್ಕಾರವನ್ನು ಆತಂಕಕ್ಕೆ ದೂಡಿತ್ತು. ಸತತ ಪ್ರಯತ್ನದ ಬಳಿಕವೂ ಮಕ್ಕಳಲ್ಲಿ ಅಪೌಷ್ಟಿಕತೆ ಹಿನ್ನೆಲೆ, ಡಿಸೆಂಬರ್ ತಿಂಗಳಿ​ನಿಂದ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಿಸಲು ಸರ್ಕಾರ ನಿರ್ಧಾರ ಮಾಡಿದೆ. 7 ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಯಾದಗಿರಿ, ಕಲಬುರಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೀಗೆ ನಿರ್ಧಾರ ಕೈಗೊಳ್ಳಲಾಗಿದೆ.

ಕೆಲವು ಜಿಲ್ಲೆಗಳಲ್ಲಿ ಶೇಕಡಾ 70 ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಕಂಡುಬಂದಿದೆ. 14 ಲಕ್ಷಕ್ಕೂ ಹೆಚ್ಚು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ನಿರ್ಧಾರ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 74, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 72.4, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 72.3, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 70.7, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 70.6, ಬೀದರ್ ಜಿಲ್ಲೆಯಲ್ಲಿ ಶೇಕಡಾ 69.1, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 68 ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಕಂಡುಬಂದಿದೆ. ಏಳು ಜಿಲ್ಲೆಗಳ 14 ಲಕ್ಷಕ್ಕೂ ಹೆಚ್ಚು ಮಕ್ಕಳು ರಕ್ತಹೀನತೆಯಿಂದಲೂ ಬಳಲುತ್ತಿರುವ ಬಗ್ಗೆ ತಿಳಿದುಬಂದಿದೆ. ಅಪೌಷ್ಟಿಕತೆ ರಕ್ತಹೀನತೆ ಬಳಲುವಿಕೆ ಹಿನ್ನೆಲೆಯಲ್ಲಿ  ಮೊಟ್ಟೆ, ಬಾಳೆಹಣ್ಣು ವಿತರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.

ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ವಿರೋಧವೇಕೆ? ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ರಾಷ್ಟ್ರೀಯ ಲಿಂಗಾಯತ ಧರ್ಮ, ಮಹಾ ಸಭಾ ಬಸವ ಮಂಟಪದ ಜಗದ್ಗುರುಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕೋಳಿ ಮೊಟ್ಟೆ ಸಂಪೂರ್ಣವಾಗಿ ಮಾಂಸಾಹಾರವಾಗಿದೆ. ಮೊಟ್ಟೆ ಕೊಡುವುದರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಸರ್ವಸಮ್ಮತ ಆಹಾರವನ್ನು ನೀಡಬೇಕು. ಶಾಲೆಯಲ್ಲಿ ಮೊಟ್ಟೆ ಕೊಡುವುದರಿಂದ ಸಸ್ಯಹಾರಿ, ಮಾಂಸಹಾರಿ ಎಂಬ 2 ಗುಂಪು ರಚನೆಯಾಗತ್ತೆ. ಹೀಗಾಗಿ ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ನಿರ್ಧಾರ ವಾಪಸ್ ತೆಗೆದುಕೊಳ್ಳದೇ ಇದ್ದರೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದ ಹಿನ್ನೆಲೆ; ಡಿಸೆಂಬರ್​ನಿಂದ ಮೊಟ್ಟೆ, ಬಾಳೆಹಣ್ಣು ವಿತರಿಸಲು ನಿರ್ಧಾರ

ಧಾರವಾಡ: ಶಾಲಾ‌ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶ ವಾಪಸ್ ಪಡೆಯದಿದ್ದಲ್ಲಿ ಹೋರಾಟಕ್ಕೆ ಮಠಾಧೀಶರ ನಿರ್ಧಾರ

Published On - 8:56 am, Sun, 19 December 21