ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಅಂಜನಾದ್ರಿ ಬೆಟ್ಟದಲ್ಲಿ ಹಾಕಿದ್ದ ಬ್ಯಾನರ್ ತೆರವುಗೊಳಿಸಿದ ಜಿಲ್ಲಾಡಳಿತ
ಅಂಜನಾದ್ರಿ ಬೆಟ್ಟದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಕಿದ್ದ ಬ್ಯಾನರ್ನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.
ಕೊಪ್ಪಳ: ರಾಜ್ಯದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಬುಗಿಲೆದ್ದ ಧರ್ಮ ದಂಗಲ್ ಬೂದಿ ಮುಚ್ಚಿದ ಕೆಂಡದಂತಿದೆ. ಇದು ಆಗಾಗ ಪ್ರಜ್ವಲಿಸುತ್ತದೆ. ಈ ಧರ್ಮ ದಂಗಲ್ನ ಭಾಗವಾದ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬ್ಯಾನರ್ ಹಾಕಲು ಪ್ರಾರಂಭಿಸಿದ್ದಾರೆ. ಇದು ಮುಂದುವರೆದು ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಕಿದ್ದ ಬ್ಯಾನರ್ನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 5ರಂದು ಹನುಮಮಾಲೆ (Hanuman Male) ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆ ಅಂದು ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಮಾಲಧಾರಿಗಳು ಆಗಮಿಸಲಿದ್ದಾರೆ. ಹೀಗಾಗಿ ಅಂದು ಕಾರ್ಯಕ್ರಮದಲ್ಲಿ ಹಿಂದೂಯೇತರರು ವ್ಯಾಪಾರ ಮಾಡಬಾರದೆಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಫ್ಲೆಕ್ಸ್ ಹಾಕಿದ್ದರು.
ಅಂಜನಾದ್ರಿಯಲ್ಲಿ ಅನ್ಯ ಧರ್ಮದವರು ವ್ಯಾಪಾರ ವಹಿವಾಟು ಮಾಡಬಾರದು. ಹಿಂದುಗಳ ಕ್ಷೇತ್ರದಲ್ಲಿ ಹಿಂದುಗಳೇ ವ್ಯಾಪಾರ ಮಾಡಬೇಕು. ಇದಕ್ಕೆ ಜಿಲ್ಲಾಡಳಿತ ಇತರೆ ಧರ್ಮಿರನ್ನು ಖಾಲಿ ಮಾಡಿಸುವಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.ಅಂಜನಾದ್ರಿ ಸುತ್ತಮುತ್ತ ಅನ್ಯ ಧರ್ಮಿಯರು ವ್ಯಾಪಾರ ಮಾಡಬಾರದೆಂದು ಬ್ಯಾನರ್ ಬಂಟಿಂಗ್ಸ್ ಹಾಕಿದ್ದರು. ಸಂಘಪರಿವಾರದವರ ಈ ಕೆಲಸದ ಕುರಿತು ಪ್ರಗತಿಪರರು, ಸಿಲ್ಕಿ ಐಎಂ ಹಾಗೂ ಕಾಂಗ್ರೆಸ್ ಪಕ್ಷದವರು ಟೀಕೆ ವ್ಯಕ್ತಪಡಿಸಿದ್ದರು. ಕೂಡಲೇ ಎಚ್ಚತ್ತ ಜಿಲ್ಲಾಡಳಿತ ಹಿಂದೂ ಜಾಗರಣಾ ವೇದಿಕೆಯವರು ಹಾಕಿದ್ದ ಬ್ಯಾನರ್ ತೆರವು ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಸಹಾಯಕ ಆಯುಕ್ತ ಅಂಜನಾದ್ರಿ ದೇಗುಲದ ವಿಶೇಷ ಅಧಿಕಾರಿ ಬಸವಣೆಪ್ಪ ಕಲಶೆಟ್ಟಿ ಬ್ಯಾನರ್ ಹಾಕಿದವರನ್ನು ಪತ್ತೆ ಮಾಡಿ ಕೇಸ್ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
Published On - 8:14 pm, Tue, 29 November 22