ಕೊಪ್ಪಳ: 12 ಲಕ್ಷ ಮೌಲ್ಯದ ಗೊಂಬೆಗಳ ಮೂಲಕ ನಿವೃತ್ತ ಶಿಕ್ಷಕರಿಂದ ವಿಜ್ಞಾನ, ಗಣಿತ ಹಾಗೂ ಇಂಗ್ಲೀಷ್ ಪಾಠ
ಈಗಿನ ಮಕ್ಕಳು ಆನ್ಲೈನ್ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆನ್ಲೈನ್ ಶಿಕ್ಷಣ ಮಕ್ಕಳ ಮೇಲೆ ಪ್ರಭಾವಶಾಲಿಯಾಗಿ ಪರಿಣಾಮ ಬೀರದು. ಹೀಗಾಗಿ ರಚನಾತ್ಮಕ ಕಲಾಕೃತಿ ಮೂಲಕ ಮಕ್ಕಳಿಗೆ ಪಾಠ ಹೇಳುತ್ತಿದ್ದೇನೆ. ಇದರಿಂದ ಮಕ್ಕಳಿಗೆ ಗ್ರಹಣ ಶಕ್ತಿ ಹೆಚ್ಚಾಗಲಿದೆ ಎಂದು ನಿವೃತ್ತ ಶಿಕ್ಷಕ ಶ್ಯಾಮಣ್ಣ ಕುಲಕರ್ಣಿ ಹರ್ಷ ವ್ಯಕ್ತಪಡಿಸುತ್ತಾರೆ.
ಕೊಪ್ಪಳ: ಮಕ್ಕಳ ಆಟಿಕೆಗಳು ಇಲ್ಲಿ ಕೇವಲ ಮನರಂಜನೆಗೆ ಮತ್ತು ಮಕ್ಕಳಾಟಿಕೆಯಾಗದೇ ವಿಜ್ಞಾನ-ಗಣಿತ ವಿಷಯಗಳ ಬೋಧನಾ ಸಲಕರಣೆಗಳ ವಸ್ತುಗಳಾಗಿವೆ. ಆಟಿಕೆಗಳಿಂದ ಮಕ್ಕಳ ಕಲಿಕಾ ಆಸಕ್ತಿಯನ್ನು ಮೂಡಿಸುತ್ತಿದ್ದಾರೆ ನಿವೃತ್ತ ಶಿಕ್ಷಕ ಶಾಮಣ್ಣ ಮೇಷ್ಟ್ರು. ಸುಮಾರು 12 ಲಕ್ಷ ಮೌಲ್ಯದ ಗೊಂಬೆಗಳನ್ನು ಖರೀದಿಸಿ ಅವುಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಹಾಗಾದರೆ ಯಾರು ಈ ಶಿಕ್ಷಕ ಅಂತೀರಾ? ಈ ಸ್ಟೋರಿ ಓದಿ.
ಮೂಲತಃ ಬಾಗಲಕೋಟ ಜಿಲ್ಲೆ ಹುನಗುಂದ ಪಟ್ಟಣದ ಶಾಮರಾವ್ ಕುಲಕರ್ಣಿ ಅವರು, ಪ್ರಾಥಮಿಕ ಶಾಲೆಯಿಂದ ಶಿಕ್ಷಕ ಸೇವೆ ಆರಂಭಿಸಿ ಪ್ರೌಢಶಾಲಾ ಶಿಕ್ಷಕರಾಗಿ ಕಳೆದ 2016 ರಲ್ಲಿ ನಿವೃತ್ತರಾಗಿದ್ದಾರೆ. ಇವರ ಪತ್ನಿ ತಾಲೂಕಿನ ಶಾಖಾಪೂರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸೇವೆಯಲ್ಲಿದ್ದು ಹೀಗಾಗಿ ಕುಷ್ಟಗಿ ಪಟ್ಟಣದ ಹಳೆ ಬಜಾರದಲ್ಲಿ ವಾಸವಾಗಿದ್ದಾರೆ.
ಕಳೆದ 35 ವರ್ಷಗಳಿಂದ ಶೈಕ್ಷಣಿಕ ಸೇವೆಯಲ್ಲಿ ಆಟಿಕೆಗಳ ಮೂಲಕ ಬೋಧಿಸಿ ಕಠಿಣ ವಿಷಯ ಸರಳೀಕರಿಸುವ ವಿಧಾನ ಮೈಗೂಡಿಸಿಕೊಂಡಿದ್ದಾರೆ. ಆಟಿಕೆಗಳು ಮನರಂಜನೆಗೆ ಮಾತ್ರವಲ್ಲ ಬೋಧನಾ ಉಪಕರಣಗಳಾಗಿ ಬಳಸಿಕೊಂಡಿದ್ದು ಸ್ಥಳೀಯ ಕಚ್ಚಾವಸ್ತು ಬಳಸಿ ತಾವೇ ವಿಜ್ಞಾನ, ಗಣಿತದ ಮಾದರಿಗಳನ್ನು ತಯಾರಿಸಿರುವುದು ಇಲ್ಲಿ ಗಮನಾರ್ಹ. ಇದೆಲ್ಲವನ್ನು ಮಕ್ಕಳಿಗಾಗಿಯೇ ನಿರ್ವಹಿಸಿದ್ದು ನಿವೃತ್ತರಾದರೂ ಈ ಸೇವೆ ಮನಸಾರೆ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರ ಮನೆ ಮಿನಿ ವಿಜ್ಞಾನ ಪ್ರಯೋಗಾಲಯವಾಗಿದೆ.
ದೈನಂದಿನ ದಿನಚರಿಯನ್ನು ಇವುಗಳಲ್ಲಿ ತೊಡಗಿಸಿ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ. ಅಲ್ಲದೇ ಶಾಲೆಗಳಿಗೂ ತೆರಳಿ ವಿಜ್ಞಾನ, ಗಣಿತ ಹಾಗೂ ಇಂಗ್ಲೀಷ್ ಮತ್ತು ಇತರ ಕ್ಲಿಷ್ಟಕರ ವಿಷಯಗಳನ್ನು ಮಕ್ಕಳಲ್ಲಿ ಸರಳೀಕರಣಗೊಳಿಸಿ ಪಾಠ ಮಾಡುವ ವಿಧಾನ ಮಕ್ಕಳ ಕಲಿಕಾಸಕ್ತಿ ಹೆಚ್ಚಿಸಲು ನೆರವಾಗಿದ್ದಾರೆ. ಅವರ ಈ ಸೇವೆಗೆ ಬಿಡಿಗಾಸು ತೆಗೆದುಕೊಳ್ಳದ ಅವರು ಮಕ್ಕಳೊಟ್ಟಿಗೆ ಸಮಯ ಕಳೆಯಲು ಇಚ್ಚಿಸುವ ಅವರು ನಿವೃತ್ತಿ ಜೀವನ ಈ ರೀತಿಯಾಗಿ ರೂಢಿಸಿಕೊಂಡಿದ್ದಾರೆ. ಅವರಿಗೆ ಮಕ್ಕಳು ಇಲ್ಲ ಎನ್ನುವ ಕೊರಗು ಮನದಲ್ಲಿದ್ದರೂ ಶಾಲಾ ಮಕ್ಕಳಿಗೆ ವಿಜ್ಞಾನ, ಗಣಿತ ವಿಷಯಗಳನ್ನು ಆಟಿಕೆಗಳಿಂದ ಬೋಧಿಸುವ ಕಾಯಕ ನಿರಂತರವಾಗಿ ಸಾಗಿದೆ. ವಿಜ್ಞಾನ, ಗಣಿತ ಕಲಿಕಾ ಉಪಕರಣಗಳ ಸಂಖ್ಯೆ ಲೆಕ್ಕ ಇಟ್ಟಿಲ್ಲ. ಮನೆಯಲ್ಲಿ ಓರಣವಾಗಿ ಒಪ್ಪವಾಗಿ ಜೋಡಿಸಿಟ್ಟಿದ್ದು ಅಷ್ಟೇ ಜತನದಿಂದ ಕಾಯ್ದುಕೊಂಡಿದಾರೆ. ವಿದ್ಯಾರ್ಥಿಗಳು ಇಚ್ಚಿಸುವ ವಿಷಯಗಳನ್ನು ಆಟಿಕೆಗಳ ಮೂಲಕ ಮನದಟ್ಟು ಮಾಡುವ ಕಲಿಕಾ ವಿಧಾನ ಮಕ್ಕಳ ಪ್ರೀತಿ ಸಂಪಾದಿಸಿದ್ದಾರೆ.
850ಕ್ಕೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಯಾವುದೇ ಪ್ರಚಾರ ಬಯಸದೇ ತಮ್ಮ ನಿವೃತ್ತ ಜೀವನ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತರಹೇವಾರಿ ಆಟಿಕೆಗಳಿಗೆ ಬರೋಬ್ಬರಿ 12 ಲಕ್ಷ ವೆಚ್ಚ ಮಾಡಿದ್ದು, ವಿಜ್ಞಾನ ಗಣಿತ ಮಾದರಿಗಳಿಗೆ ಮೂರ್ನಾಲ್ಕು ಲಕ್ಷ ವೆಚ್ಚವಾಗಿದೆ. ಅವರ ಗೆಳೆಯರ ಬಳಗದಿಂದ 850ಕ್ಕೂ ಪವಾಡ ರಹಸ್ಯ ಬಯಲು ವೇದಿಕೆ ಕಾರ್ಯಕ್ರಮ ನೀಡುತ್ತಿದ್ದು ಮೂಢನಂಬಿಕೆ ನಿವಾರಣೆಗೆ ಕೈಲಾದ ಸೇವೆ ಮುಂದುವರಿಸಿದ್ದಾರೆ. ನನ್ನ ಬಳಿ ವಿಜ್ಞಾನ, ಗಣಿತ, ಇಂಗ್ಲೀಷ ವಿಷಯಗಳ ಪ್ರಾಯೋಗಾತ್ಮಕ ಬೋಧನಾ ಕಿಟ್, ಬೊಂಬೆಗಳು, ವಿವಿಧ ಬಗೆಯ ಪ್ರಾಣಿ, ಪಕ್ಷಿ, ಯಾಂತ್ರಿಕ ಆಟಿಕೆ, ಕಲಿಕಾ ಉಪಕರಣಗಳು ಏಕಾಂತ, ಒಂಟಿತನ ದೂರ ಮಾಡಿದ್ದು ಮಕ್ಕಳೊಟ್ಟಿಗೆ ಬೆರೆಯುವುದು ನನ್ನ ಆಯುಷ್ಯ ವೃದ್ದಿಗೆ ಸಹಾಯಕವಾಗಿದೆ ಎನ್ನುತ್ತಾರವರು. ಅನೇಕ ಶಿಕ್ಷಕರು ಆಸಕ್ತಿಯಿಂದ ನಮ್ಮ ಮನೆಗೆ ಬಂದು ವಿಜ್ಞಾನ, ಗಣಿತ ವಿಷಯಗಳ ಸರಳೀಕರಣ ವಿಧಾನ ಕೇಳಿಕೊಂಡು ತಮ್ಮ ಶಾಲಾ ಮಕ್ಕಳಿಗೂ ಬೋಧಿಸುತ್ತಿದ್ದಾರೆ. ಲಸಾಸ, ಮಸಾಅ, ಪೈಥಾಗೋರಸ್ ಪ್ರಮೇಯ ಹಾಗೂ ನ್ಯೂಟನ್ ನಿಯಮಗಳನ್ನು ಗೊಂಬೆಗಳ ಮೂಲಕ ಮಕ್ಕಳಿಗೆ ಹೇಳುತ್ತಿದ್ದಾರೆ.
ಈಗಿನ ಮಕ್ಕಳು ಆನ್ಲೈನ್ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆನ್ಲೈನ್ ಶಿಕ್ಷಣ ಮಕ್ಕಳ ಮೇಲೆ ಪ್ರಭಾವಶಾಲಿಯಾಗಿ ಪರಿಣಾಮ ಬೀರದು. ಹೀಗಾಗಿ ರಚನಾತ್ಮಕ ಕಲಾಕೃತಿ ಮೂಲಕ ಮಕ್ಕಳಿಗೆ ಪಾಠ ಹೇಳುತ್ತಿದ್ದೇನೆ. ಇದರಿಂದ ಮಕ್ಕಳಿಗೆ ಗ್ರಹಣ ಶಕ್ತಿ ಹೆಚ್ಚಾಗಲಿದೆ. ಸುಮಾರು 12 ಲಕ್ಷ ಮೌಲ್ಯದ ಗೊಂಬೆಗಳು ನನ್ನ ಬಳಿಯಿವೆ. ನಿವೃತ್ತಿಯ ನಂತರ ಮಕ್ಕಳು ಹಾಗೂ ಗೊಂಬೆಗಳ ಜೊತೆ ಕಾಲ ಕಳೆಯುವುದು ನನಗೆ ಸಂತೋಷ ಎಂದು ಶ್ಯಾಮಣ್ಣ ಕುಲಕರ್ಣಿ ಹರ್ಷ ವ್ಯಕ್ತಪಡಿಸುತ್ತಾರೆ.
ವರದಿ: ಶಿವಕುಮಾರ್ ಪತ್ತಾರ್ ಟಿವಿ9 ಕನ್ನಡ, ಕೊಪ್ಪಳ
ಇದನ್ನೂ ಓದಿ:
100 ಸಿಸಿ ಬೈಕ್ನಲ್ಲಿ ಕಾಶ್ಮೀರಕ್ಕೆ ರೈಡ್; ಧಾರವಾಡದ ಯುವಕನಿಂದ ಕೊರೊನಾ ಜಾಗೃತಿ ಅಭಿಯಾನ
Published On - 8:20 pm, Sun, 10 October 21