ರಾಜಧನ ವಂಚಿಸಿದ ಕ್ವಾರಿಗಳಿಗೆ ಕೋಟ್ಯಂತರ ರೂ ದಂಡ: ರಾಜಕೀಯ ಪ್ರಭಾವಿಗಳಿಗೂ ಶಾಕ್!
ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಜಧನ ಪಾವತಿಸದ ಕಲ್ಲು ಕ್ವಾರಿಗಳ ವಿರುದ್ಧ ಕಠಿಣ ಕ್ರಮಕೈಗೊಂಡಿದೆ. ಮುಖ್ಯವಾಗಿ ಕೊಪ್ಪಳ ಜಿಲ್ಲೆಯಲ್ಲಿ, ಪರವಾನಿಗೆ ಹೊಂದಿದ್ದರೂ ರಾಜಧನ ವಂಚನೆ ಮಾಡಿದ 60 ಕ್ವಾರಿಗಳಿಗೆ 110 ಕೋಟಿ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ವಾರಿಗಳೂ ಸೇರಿವೆ.

ಕೊಪ್ಪಳ, ಮೇ 20: ಸರ್ಕಾರದ ಪರವಾನಿಗೆ ಪಡೆದು ರಾಜಧನ ಪಾವತಿಸದೆ ಕಲ್ಲು ಗಣಿಗಾರಿಕೆ (Stone mining) ನಡೆಸುತ್ತಿದ್ದವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮ ಉಲ್ಲಂಘಿಸಿದ ಗಣಿ ಮಾಲೀಕರಿಗೆ ಭಾರೀ ದಂಡ (fine) ವಿಧಿಸುವ ಮೂಲಕ ಸರ್ಕಾರ ತನ್ನ ಖಜಾನೆ ತುಂಬಿಸಲು ಸಜ್ಜಾಗಿದೆ. ರಾಜ್ಯಾದ್ಯಂತ ಜಾರಿಯಾಗಬೇಕಿದ್ದ ಈ ಆದೇಶ ಸದ್ಯಕ್ಕೆ ಕೊಪ್ಪಳದಲ್ಲಿ ಮಾತ್ರ ಜಾರಿಯಾಗಿದ್ದು, ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇನ್ನು ಇದರಲ್ಲಿ ಪ್ರಭಾವಿ ರಾಜಕಾರಣಿಗಳು ಇರುವುದು ಸದ್ಯ ಸಂಚಲನ ಮೂಡಿಸಿದೆ.
ಮುಖ್ಯಾಂಶಗಳು
- ಕಲ್ಲು ಗಣಿಗಾರಿಕೆ: ಕಠಿಣ ಕ್ರಮಕ್ಕೆ ಮುಂದಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ
- 60 ಕ್ವಾರಿಗಳಿಗೆ ಬರೋಬ್ಬರಿ 110 ಕೋಟಿ ರೂ ದಂಡದ ಬಿಸಿ!
- ಪ್ರಭಾವಿ ರಾಜಕಾರಣಿಗಳೂ ನೋಟಿಸ್ ಜಾರಿ
ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ ಮಾಡಿಕೊಂಡಿದೆ ಎನ್ನುವ ಆರೋಪವಿದೆ. ಸದ್ಯ ಈ ಆರೋಪದಿಂದ ಹೊರ ಬರಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ವಾರಿಗಳ ಮೇಲೆ ಕಣ್ಣಿಟ್ಟಿದೆ. ಸರ್ಕಾರ ಪರವಾಣಿಗೆ ಪಡೆದು ಗಣಿಗಾರಿಕೆ ಮಾಡುತ್ತಿದ್ದ ಗಣಿ ಮಾಲೀಕರು ರಾಜಧನ ಪಾವತಿಸದೆ ಇರುವವರಿಗೆ, ನೋಟಿಸ್ ನೀಡಿ ರಾಜಧನ ಪಾವತಿ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು ಈ ಆದೇಶ ರಾಜ್ಯಾದ್ಯಂತ ಪಾಲನೆ ಮಾಡಬೇಕಿ ಕೊಪ್ಪಳದಲ್ಲಿ ಮಾತ್ರ ಜಾರಿಯಾಗಿದೆ. ಇದರಲ್ಲಿ ಕೊಪ್ಪಳದ ಪ್ರಭಾವಿ ರಾಜಕಾರಣಿ ಹಿಟ್ನಾಳ್ ಬ್ರದರ್ಸ್ಗೂ ಶಾಕ್ ಎದುರಾಗಿದೆ. ಏಕೆಂದರೆ ಗಣಿ ಇಲಾಖೆ ಅವರಿಗೂ ನೋಟಿಸ್ ನೀಡಿದೆ.
60 ಕ್ವಾರಿಗಳಿಗೆ ಗಣಿ ಇಲಾಖೆ ಶಾಕ್! 110 ಕೋಟಿ ರೂ ದಂಡ
ಜಿಲ್ಲೆಯೊಂದರಲ್ಲೇ ಒಟ್ಟು 60 ಕ್ವಾರಿಗಳಿಗೆ ಗಣಿ ಇಲಾಖೆ ದಂಡದ ಬಿಸಿ ಮುಟ್ಟಿಸಿದೆ. ಬರೋಬ್ಬರಿ 110 ಕೋಟಿ ರೂ ದಂಡವನ್ನು ವಿಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಅತ್ಯಂತ ಗಮನಾರ್ಹ ಸಂಗತಿ ಎಂದರೆ, ಕೊಪ್ಪಳದ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ವಾರಿಗಳಿಗೂ ದಂಡ ಬಿದ್ದಿದೆ. ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಹಾಗೂ ಅವರ ಸಹೋದರ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಒಡೆತನದ ಕ್ವಾರಿಗೆ ಇಲಾಖೆ ಭಾರೀ ಮೊತ್ತದ ದಂಡ ವಿಧಿಸಿದೆ. ಜನಪ್ರತಿನಿಧಿಗಳ ಕ್ವಾರಿಗೆ ದಂಡ ಬಿದ್ದಿರುವುದು ಈಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಜಿಲ್ಲೆಯಾದ್ಯಂತ 300 ಕೋಟಿಗೂ ಅಧಿಕ ದಂಡ ಹಾಕಿರಬಹುದು ಎನ್ನುವುದು ಸಂಸದರ ಮಾತು.
ಸರ್ಕಾರದ ಮಟ್ಟದಲ್ಲಿ ಮಾತುಕತೆ ಮಾಡುತ್ತೇವೆ ಎಂದ ರಾಜಶೇಖರ್ ಹಿಟ್ನಾಳ್
ಇಲಾಖೆಯ ಈ ದಿಢೀರ್ ಕ್ರಮದಿಂದ ಎಚ್ಚೆತ್ತುಕೊಂಡಿರುವ ಹಿಟ್ನಾಳ್ ಬ್ರದರ್ಸ್, ಸದ್ಯಕ್ಕೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ. ಈ ದಂಡದ ಪ್ರಕ್ರಿಯೆ ಕುರಿತಂತೆ ನಾವು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುತ್ತೇವೆ ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದ್ದಾರೆ. ರಾಜಧನ ಪಾವತಿ ಮಾಡಬೇಕಾದರೆ ಸರ್ಕಾರಿ ಕೆಲಸಗಳಿಗೆ ಉಪಯೋಗಿಸಿದ ಜಲ್ಲಿ, ಕಲ್ಲುಗಳಿಗೆ, ಗುತ್ತಿಗೆದಾರರು ರಾಜಧನ ಪಾವತಿ ಮಾಡಬೇಕು, ಆದರೆ ಅದು ಗುತ್ತಿಗೆದಾರರು ಪಾವತಿಸಿಲ್ಲ. ಏಕೆಂದರೆ ಸರ್ಕಾರಿ ಕೆಲಸಗಳನ್ನ ಮಾಡಿರುವ ಗುತ್ತಿಗೆದಾರರಿಗೆ ಸರ್ಕಾರ ಹಣ ಪಾವತಿ ಮಾಡದಿರುವುದಕ್ಕೆ ರಾಜಧನ ಪಾವತಿಸಿಲ್ಲ ಎಂಬುದು ಸಂಸದರ ವಾದವಾಗಿದೆ.
ಇದನ್ನೂ ಓದಿ: ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ
ಸದ್ಯ ರಾಜ್ಯದ ಬೊಕ್ಕಸ ತುಂಬಿಸಲು ಸರ್ಕಾರ ಗಣಿ ಇಲಾಖೆಯ ಮೇಲೆ ಅಸ್ತ್ರ ಪ್ರಯೋಗ ಮಾಡಿದರೆ ಇದಕ್ಕೆ ಗುತ್ತಿಗೆದಾರರು ಬಿಲ್ ಪಾವತಿ ಮಾಡಿದರೆ ಮಾತ್ರ ರಾಜಧನ ಸಂದಾಯ ಆಗತ್ತೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯ ಗುತ್ತಿಗೆದಾರರು, ಗಣಿ ಮಾಲಿಕರು ಹಾಗೂ ಸರ್ಕಾರದ ನಡುವಿನ ಸಮಸ್ಯೆ ಮುಂದೆ ಯಾವ ಹಂತ ತಲುಪತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




