
ಕೊಪ್ಪಳ, ಅಕ್ಟೋಬರ್ 14: ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಒಳಹರಿವು ಸ್ಥಗಿತಗೊಂಡಿದೆ. ಸದ್ಯ ಜಲಾಶಯದಲ್ಲಿ 59 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಕಾಲುವೆ ಹಾಗೂ ನದಿಗಳ ಮೂಲಕ ನೀರು ಬಿಡುಗಡೆ ಮುಂದುವರಿದಿದೆ. ಹೀಗಾಗಿ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ರೈತರಲ್ಲಿ ಆತಂಕ ಹೆಚ್ಚಾಗಿದೆ. ಮೊದಲನೇ ಬೆಳೆಯ ಫಸಲು ಕೈ ಸೇರಲು ಇನ್ನೂ ಎರಡು ತಿಂಗಳ ಕಾಲ ನೀರು ಅಗತ್ಯವಿದ್ದು, ಜಲಾಶಯದಲ್ಲಿ ಉಳಿದಿರುವ ನೀರು ಬೆಳೆ ಉಳಿಸಲು ಸಾಕಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
ತುಂಗಭದ್ರಾ ಜಲಾಶಯವು ನಾಲ್ಕು ಜಿಲ್ಲೆಗಳ ಕೃಷಿಗೆ ಪ್ರಮುಖ ಆಧಾರವಾಗಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಭತ್ತದ ಬೆಳೆಗೆ ಈ ಜಲಾಶಯದ ನೀರು ಜೀವನಾಡಿಯಾಗಿದೆ. ಆದರೆ, ಕಳೆದೊಂದು ತಿಂಗಳಿನಿಂದ ಜಲಾಶಯಕ್ಕೆ ಒಳಹರಿವು ಸ್ಥಗಿತಗೊಂಡಿದ್ದು, ನೀರಿನ ಮಟ್ಟ ಕುಸಿಯುತ್ತಿದೆ. ಸದ್ಯ ಸುಮಾರು 12 ಸಾವಿರ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.
ಮೊದಲನೇ ಬೆಳೆಯ ಫಸಲು ಕೈ ಸೇರಲು ಇನ್ನೂ ಎರಡು ತಿಂಗಳ ಕಾಲ ನೀರು ಬೇಕಿದೆ. ದೀಪಾವಳಿವರೆಗೂ ಕಾಲುವೆಗಳಿಗೆ ನೀರು ಹರಿಸಿದರೆ ರೈತರು ಮೊದಲನೇ ಬೆಳೆಯನ್ನು ಉಳಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ. ಆದರೆ, ಅಲ್ಲಿಯವರೆಗೆ ನೀರು ಬಿಡುಗಡೆ ಮುಂದುವರಿದರೆ ಜಲಾಶಯದಲ್ಲಿ ಕೇವಲ 20ರಿಂದ 25 ಟಿಎಂಸಿ ನೀರು ಮಾತ್ರ ಉಳಿಯಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಉಳಿದ ನೀರಿನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಪಾಲನ್ನು ಮೀಸಲಿಡುವುದರ ಜೊತೆಗೆ ಕುಡಿಯುವ ನೀರಿನ ಅಗತ್ಯವನ್ನೂ ಪೂರೈಸಬೇಕಿದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗುತ್ತಿದೆ. ನೀರಿನ ಲಭ್ಯತೆ ಮತ್ತಷ್ಟು ಕಡಿಮೆಯಾದರೆ ಸಾವಿರಾರು ಎಕರೆ ಭತ್ತದ ಬೆಳೆ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.
ಜಲಾಶಯದ ನೀರಿನ ಹಂಚಿಕೆ ವಿಚಾರದಲ್ಲಿ ನೀರಾವರಿ ಸಲಹಾ ಸಮಿತಿಯ ನಿರ್ಧಾರವೂ ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ 11ರಂದು ನಡೆದ ಸಭೆಯಲ್ಲಿ 90 ದಿನಗಳವರೆಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಸೆಪ್ಟೆಂಬರ್ನಲ್ಲಿ ಮತ್ತೊಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದರು. ಆದರೆ, ಇದುವರೆಗೂ ಮತ್ತೊಂದು ನೀರಾವರಿ ಸಲಹಾ ಸಮಿತಿ ಸಭೆ ನಡೆದಿಲ್ಲ.
ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆ ಹೇಗೆ ಎಂಬುದು ಮಹತ್ವ ಪಡೆದುಕೊಂಡಿದೆ. ಕಾಲುವೆಗಳಿಗೆ ನೀರು ಬಿಡುಗಡೆ, ಕುಡಿಯುವ ನೀರಿನ ಅಗತ್ಯ ಹಾಗೂ ರೈತರ ಬೆಳೆಗಳಿಗೆ ನೀರು ಒದಗಿಸುವ ವಿಚಾರದಲ್ಲಿ ಮುಂದಿನ ನಿರ್ಧಾರಗಳತ್ತ ರೈತರು ಎದುರು ನೋಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹಿಂಗಾರು ಬೆಳೆ ಬೆಳೆಯಲು ಸಾಧ್ಯವಾಗದೆ ಸಂಕಷ್ಟ ಅನುಭವಿಸಿದ್ದ ರೈತರಿಗೆ, ಈ ಬಾರಿ ಮುಂಗಾರು ಬೆಳೆಯೂ ಕೈಗೆ ಸಿಗುತ್ತದೆಯೇ ಎಂಬ ಆತಂಕ ಎದುರಾಗಿದೆ. ತುಂಗಭದ್ರಾ ಜಲಾಶಯವನ್ನು ನಂಬಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿರುವ ರೈತರು ಬೆಳೆ ಉಳಿಸಿಕೊಳ್ಳಲು ಅಗತ್ಯ ನೀರು ಸಿಗುವ ನಿರೀಕ್ಷೆಯಲ್ಲಿದ್ದಾರೆ.
ನೀರಿನ ಕೊರತೆಯಿಂದ ಬೆಳೆ ನಷ್ಟವಾದರೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಸಾಲ ಮಾಡಿ ಭತ್ತ ನಾಟಿ ಮಾಡಿರುವ ರೈತರಿಗೆ ಬೆಳೆ ಕೈಗೆ ಸಿಗದಿದ್ದರೆ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಮುಂಗಾರು ಬೆಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಕೈಗೆ ಸಿಗದಿದ್ದರೆ ಅದರ ಪರಿಣಾಮ ರೈತರಿಗೆ ಮಾತ್ರ ಸೀಮಿತವಾಗದೆ ಅಕ್ಕಿಯ ಬೆಲೆಯ ಮೇಲೂ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕಳೆದ ಎರಡು–ಮೂರು ವರ್ಷಗಳಿಂದ ನಾಲ್ಕು ಜಿಲ್ಲೆಗಳ ರೈತರು ನಿರೀಕ್ಷಿತ ಮಟ್ಟದಲ್ಲಿ ಭತ್ತ ಬೆಳೆಯಲು ಸಾಧ್ಯವಾಗಿಲ್ಲ ಎನ್ನಲಾಗಿದ್ದು, ಉತ್ಪಾದನೆ ಕುಸಿದರೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: ತಟ್ಟೆಗೆ ಬೀಳೋಕು ಮುಂಚೆ ಜನರ ಜೇಬು ಸುಡಲಾರಂಭಿಸಿದ ಅನ್ನ: ಸತತ 4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆ
ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರನ್ನು ಹೇಗೆ ನಿರ್ವಹಿಸಲಾಗುತ್ತದೆ ಮತ್ತು ಮೊದಲನೇ ಬೆಳೆಯನ್ನು ಉಳಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಈಗ ಪ್ರಮುಖ ಪ್ರಶ್ನೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Wed, 14 October 26