ತುಂಗಭದ್ರಾ ಡ್ಯಾಮ್ ಖಾಲಿ: ಅಧಿಕಾರಿಗಳ ಮಾತು ನಂಬಿ ಬೆಳೆ ಬೆಳದ ರೈತರಿಗೆ ಶಾಕ್
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿರುವ ತುಂಗಭದ್ರಾ ಡ್ಯಾಮ್, ಕೊಪ್ಪಳ, ವಿಜಯನಗರ, ರಾಯಚೂರು, ಬಳ್ಳಾರಿ ಜಿಲ್ಲೆಯ ಜನರ ಪಾಲಿಗೆ ಜೀವಜಲವಾಗಿದೆ. ಇದೇ ನೀರನ್ನು ನಂಬಿಕೊಂಡು ಲಕ್ಷಾಂತರ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ತುಂಗಭದ್ರಾ ಡ್ಯಾಮ್ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿದ್ದ ರೈತರಿಗೆ ಸಂಕಷ್ಟ ಆರಂಭವಾಗಿದೆ.
ಕೊಪ್ಪಳ, ನವೆಂಬರ್ 06: ಕಳೆದ ಎರಡು ವರ್ಷ ಅತಿವೃಷ್ಟಿಯಿಂದ ಪೆಟ್ಟು ತಿಂದಿದ್ದ ರೈತರಿಗೆ ಈ ಬಾರಿ ಬರಗಾಲ ದೊಡ್ಡ ಪೆಟ್ಟು ನೀಡಿದೆ. ಪ್ರತಿ ವರ್ಷ ಸಾವಿರಾರು ರೂಪಾಯಿ ಖರ್ಚು ಮಾಡಿ ಕೃಷಿ ಕೆಲಸ ಕೈಗೊಳ್ಳೋ ರೈತರಿಗೆ ಫಲ ಬರುವ ಸಮಯದಲ್ಲಿ ಉಂಟಾಗುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ ರೈತರ ಬದುಕನ್ನು ಮೂರಾಬಟ್ಟಿ ಮಾಡಿದೆ. ಇದರ ಜೊತೆಗೆ ತುಂಗಭದ್ರಾ (Tungabhadra Dam) ನೀರಾವರಿ ಇಲಾಖೆಯ ಅಧಿಕಾರಿಗಳ ಮಾತನ್ನು ನಂಬಿ ಭತ್ತ, ಮೆಣಸಿನಕಾಯಿ ಬೆಳೆದ ರೈತರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
ನೀರಾವರಿ ವಲಯ ಕೇಂದ್ರ ಕಚೇರಿಗೆ ರೈತರ ಮುತ್ತಿಗೆ
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿರುವ ತುಂಗಭದ್ರಾ ಡ್ಯಾಮ್, ಕೊಪ್ಪಳ, ವಿಜಯನಗರ, ರಾಯಚೂರು, ಬಳ್ಳಾರಿ ಜಿಲ್ಲೆಯ ಜನರ ಪಾಲಿಗೆ ಜೀವಜಲವಾಗಿದೆ. ಇದೇ ನೀರನ್ನು ನಂಬಿಕೊಂಡು ಲಕ್ಷಾಂತರ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ತುಂಗಭದ್ರಾ ಡ್ಯಾಮ್ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿದ್ದ ರೈತರಿಗೆ ಸಂಕಷ್ಟ ಆರಂಭವಾಗಿದೆ. ರೈತರ ಸಂಕಷ್ಟಕ್ಕೆ ಕಾರಣ, ಒಂದಡೆ ಅಧಿಕಾರಿಗಳ ಎಡವಟ್ಟು ಮತ್ತೊಂದಡೆ ವರುಣದೇವನ ಮನಿಸಿಕೊಂಡಿದ್ದಾನೆ.
ಇದನ್ನೂ ಓದಿ: ಕೊಪ್ಪಳ: ಗಡ್ಡೆಯಾಗುವ ಮೊದಲೇ ಹಾಳಾದ ಈರುಳ್ಳಿ, ಬೆಲೆ ಹೆಚ್ಚಾದರೂ ರೈತರಿಗಿಲ್ಲ ಪ್ರಯೋಜನ
ಬಳ್ಳಾರಿ, ವಿಜಯನಗರ ಜಿಲ್ಲೆಯ ಸಾವಿರಾರು ರೈತರು ತುಂಗಭದ್ರಾ ಡ್ಯಾಮ್ ನ ಅಧಿಕಾರಿಗಳ ಮಾತನ್ನು ನಂಬಿ, ಭತ್ತ, ಮೆಕ್ಕಜೋಳ, ಮಣಸಿನಕಾಯಿ ಬೆಳೆ ಬೆಳದಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ, ಬಳ್ಳಾರಿ ಜಿಲ್ಲೆಯ ಕುರುಗೋಡು, ಬಳ್ಳಾರಿ ತಾಲೂಕು, ಸೊಂಡುರು ತಾಲೂಕಿನ ಕೆಲ ಗ್ರಾಮಗಳ ಜನರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ, ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ.
ರಾಜ್ಯದಲ್ಲಿ ಬರಗಾಲವಿದ್ರು ಕೂಡಾ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯಲು ಮುಂದಾಗಲು ಕಾರಣ ಅಧಿಕಾರಿಗಳ ಆಶ್ವಾಸನೆ. ಹೌದು ಕಳೆದ ತಿಂಗಳು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿ ತುಂಗಭದ್ರಾ ಡ್ಯಾಮ್ ನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ನವೆಂಬರ್ ಮೂವತ್ತರವರಗೆ ನೀರು ಬಿಡುವದಾಗಿ ಹೇಳಿದ್ದರಂತೆ. ಹೀಗಾಗಿ ರೈತರು ಅಧಿಕಾರಿಗಳ ಮಾತನ್ನು ನಂಬಿ ಬೆಳೆ ಬೆಳದಿದ್ದಾರಂತೆ. ಆದ್ರೆ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮತ್ತೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿರೋ ಅಧಿಕಾರಿಗಳು, ನವಂಬರ್ 10 ವರಗೆ ಮಾತ್ರ ನೀರು ಬಿಡೋದಾಗಿ ಹೇಳ್ತಿದ್ದಾರಂತೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನೀವು ಹೇಳಿದ ಮಾತನ್ನು ನಂಬಿ ನಾವು ಬೆಳೆ ಬೆಳದಿದ್ದೇವೆ. ರೈತರನ್ನು ಕೂಡಾ ಸಬೆಗೆ ಕರೆಯದೆ, ಅವರ ಅಭಿಪ್ರಾಯವನ್ನು ಕೇಳದೆ, ಬೆಂಗಳೂರಿನಲ್ಲಿ ಕೂತು ನವಂಬರ್ 10 ರವರಗೆ ಮಾತ್ರ ನೀರು ಬಿಡೋದಾಗಿ ಹೇಳ್ತಿದ್ದಿರಿ. ನೀರು ಬಿಡದೆ ಇದ್ರೆ ಬೆಳೆ ಹಾಳಾಗಿ ಹೋಗುತ್ತದೆ. ನಮ್ಮ ಬದುಕು ಬೀದಿಗೆ ಬೀಳುತ್ತದೆ ಅಂತಿದ್ದಾರೆ ರೈತರು. ತಮಗೆ ಡಿಸೆಂಬರ್ 15 ರವರಗೆ ನೀರು ಬಿಡಬೇಕು ಅಂತ ಆಗ್ರಹಿಸಿ ವಿಜಯನಗರ, ಬಳ್ಳಾರಿ ಜಿಲ್ಲೆಯ ನೂರಾರು ರೈತರು ಇಂದು ಮುನಿರಾಬಾದ್ ನಲ್ಲಿರುವ ನೀರಾವರಿ ವಲಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕೈಗೆ ಬಂದ ತುತ್ತು ಬಾಯಿಗೆ ಬಾರದ ಆತಂಕ
ಇದೀಗ ನೀರು ಬಿಡದೇ ಇದ್ದರೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆ ನೂರಾರು ಗ್ರಾಮಗಳ ರೈತರಿಗೆ ದೊಡ್ಡ ಮಟ್ಟದ ಸಂಕಷ್ಟ ಎದುರಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಭತ್ತ ಕಾಳು ಗಟ್ಟುವ ಹಂತದಲ್ಲಿದೆಯಂತೆ. ಮೆಣಸಿನಕಾಯಿ ಹೂ ಬಿಡೋ ಹಂತದಲ್ಲಿದೆಯಂತೆ. ಈ ಸಮಯದಲ್ಲಿ ದಿಢೀರನೆ ನೀರು ಬಂದ್ ಮಾಡಿದ್ರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳದಿದ್ದ ಬೆಳೆ ಹಾಳಾಗಿ ಹೋಗುತ್ತದೆ ಅನ್ನೋದು ರೈತರ ಅಳಲಾಗಿದೆ.
ಈ ಹಿಂದೆ ಇದೇ ಅಧಿಕಾರಿಗಳು ಡ್ಯಾಮ್ ನಲ್ಲಿನ ನೀರು ಎಷ್ಟಿದೆ ಅನ್ನೋದರ ಲೆಕ್ಕದ ಮೇಲೆಯೇ ನೀರು ಬಿಡೋದಾಗಿ ಹೇಳಿದ್ದರು. ಆದ್ರೆ ದಿಢೀರನೆ ಹೇಗೆ ನೀರು ಕಡಿಮೆಯಾಯ್ತು, ರೈತರಿಗೆ ಮಾತ್ರ ಬಿಡಲು ನೀರಿನ ಸಮಸ್ಯೆಯಾಗ್ತಿದೆಯಾ ಅಂತ ರೈತರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಇರೋ ನೀರಲ್ಲಿಯೇ ರೈತರಿಗೆ ಡಿಸೆಂಬರ್ ಹತ್ತರವರಗೆ ನೀರು ಬಿಡಬೇಕು. ಆ ಮೂಲಕ ರೈತರಿಗೆ ನೆರವಾಗಬೇಕು ಅಂತ ರೈತರು ಆಗ್ರಹಿಸಿದ್ದಾರೆ.
ಪ್ರತಿ ಎಕರೆ ಮೆಣಸಿನಕಾಯಿ ಬೆಳೆಯಲು ಒಂದು ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಭತ್ತ ಬೆಳೆಯಲು ಕೂಡಾ ಸಾವಿರಾರು ರೂಪಾಯಿ ಖರ್ಚಾಗಿದೆ. ಇದೀಗ ದಿಢೀರನೆ ನೀರು ಬಂದ್ ಮಾಡಿದ್ರೆ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಅಧಿಕಾರಿಗಳ ಮಾತನ್ನು ನಂಬಿಯೇ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದಾರೆ. ಇದೀಗ ದಿಢೀರನೆ ನೀರು ಬಂದ್ ಮಾಡುವದು ಸರಿಯಲ್ಲಾ. ಹೇಗಾದ್ರು ಮಾಡಿ ರೈತರ ಬೆಳೆಗಳಿಗೆ ಡಿಸೆಂಬರ್ ಹತ್ತರವರಗೆ ನೀರು ಬಿಡಬೇಕು ಅಂತಾರೆ ರೈತ ಮುಖಂಡ ಕಾರ್ತಿಕ್.
ಬಾರದ ಮಳೆ, ಖಾಲಿಯಾದ ಡ್ಯಾಮ್
ಶಿವಮೊಗ್ಗ ಸೇರಿದಂತೆ ಕೆಲವಡೆ ಮಳೆಯಾದ್ರೆ ಮಾತ್ರ ತುಂಗಭದ್ರಾ ನದಿಗೆ ನೀರು ಬರುತ್ತದೆ. ಆದರೆ ಈ ಬಾರಿ ಮಲೆನಾಡಿನಲ್ಲಿ ಕೂಡಾ ಉತ್ತಮ ಮಳೆಯಾಗದೇ ಇರೋದರಿಂದ, ಮಳೆಗಾಲದಲ್ಲಿಯೇ ನದಿ ಬತ್ತಿದೆ. ತುಂಗಭದ್ರಾ ಡ್ಯಾಮ್ ಗೆ ಕಳೆದ ಕೆಲ ದಿನಗಳಿಂದ ಒಳ ಹರಿವೇ ಇಲ್ಲದಂತಾಗಿದೆ. ಇನ್ನು 105 ಟಿಎಂಸಿ ನೀರು ಸಾಮರ್ಥದ ತುಂಗಭದ್ರಾ ಡ್ಯಾಮ್ ನಲ್ಲಿ 28 ಟಿಎಂಸಿ ನೀರು ಮಾತ್ರ ಬಾಕಿಯಿದೆ. ಇದರಲ್ಲಿಯೇ ಕುಡಿಯುವ ನೀರನ್ನು ಕೂಡಾ ಸಂಗ್ರಹಿಸಿಟ್ಟಿಕೊಳ್ಳಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಇದೆ.
ಇದನ್ನೂ ಓದಿ: Kannada Rajotsava award: ವೃದ್ದ ಹುಚ್ಚಮ್ಮಗೆ ಅರ್ಹ ರಾಜೋತ್ಸವ ಪ್ರಶಸ್ತಿ! ಕನ್ನಡ ನಾಡಿಗೆ ಇವರ ಕೊಡುಗೆ ಏನು ಗೊತ್ತಾ?
ಅಧಿಕಾರಿಗಳು ಈ ವರ್ಷ ಡ್ಯಾಮ್ ಗೆ 175 ಟಿಎಂಸಿ ನೀರು ಬರುತ್ತೆ ಅಂತ ಲೆಕ್ಕಾಚಾರ ಹಾಕಿದ್ದರಂತೆ. ಆದರೆ ಬಂದಿರೋದು ಕೇವಲ 103 ಟಿಎಂಸಿ ನೀರು ಮಾತ್ರ. ಈ ಪೈಕಿ ಇಲ್ಲಿವರಗೆ ಬಿಟ್ಟ ನೀರನ್ನು ಬಿಟ್ಟು ಡ್ಯಾಮ್ ನಲ್ಲಿ ಉಳದಿರೋದು ಕೇವಲ 28 ಟಿಎಂಸಿ ನೀರು ಮಾತ್ರ.
ಈ ವರ್ಷ ಪ್ಯಾಕ್ಟರಿಗಳಿಗೆ ನೀಡ್ತಾಯಿದ್ದ ನೀರನ್ನು ಕೂಡಾ ಬಂದ್ ಮಾಡಿ, ರೈತರಿಗೆ ನೀಡಲಾಗಿದೆ. ಸಮಪರ್ಕ ಮಳೆ ಬಾರದೇ ಇರುವದರಿಂದ ಡ್ಯಾಮ್ ಗೆ ನೀರಿನ ಹರಿವು ನಿಂತಿದೆ. ಹಿಂಗಾರು ಮಳೆ ಉತ್ತಮವಾದ್ರೆ ಡ್ಯಾಮ್ ಗೆ ನೀರು ಬರೋ ನಿರೀಕ್ಷೆಯಿದೆ. ನಾವು ಕೂಡಾ ಬೆಳೆಗಳಿಗೆ ನೀರು ಬಿಡಲು ಅನೇಕ ಕ್ರಮ ಕೈಗೊಂಡಿದ್ದೇವೆ. ಆದರೆ ಡ್ಯಾಮ್ ನಲ್ಲಿಯೇ ನೀರು ಖಾಲಿಯಾದ್ರೆ ನಾವು ನೀರು ಬಿಡೋದಾದ್ರು ಹೇಗೆ ಅಂತಿದ್ದಾರೆ ಮನಿರಾಬಾದ್ ನೀರಾವರಿ ವಲಯದ ಮುಖ್ಯ ಅಭಿಯಂತರ ಎಲ್ ಬಸವರಾಜ್.
ಇರೋ ನೀರನ್ನು ಖಾಲುವೆ ಮೂಲಕ ರೈತರ ಬೆಳೆಗೆ ಬಿಟ್ಟರೆ ಕುಡಿಯುವ ನೀರು ಇಲ್ಲದಂತಾಗುತ್ತದೆ. ನೀರು ಬಂದ್ ಮಾಡಿದ್ರೆ ರೈತರು ಬೆಳದಿರೋ ಬೆಳೆ ಹಾಳಾಗಿ ಹೋಗುತ್ತದೆ. ಹೀಗಾಗಿ ಇರೋ ನೀರಿನಲ್ಲಿಯೇ ರೈತರ ಬೆಳೆ ಹಾಳಾಗದಂತೆ ನೀರು ಬಿಡೋ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.