ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ
ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಮಗಳಿಗೆ ಸರ್ಕಾರಿ ಹುದ್ದೆಗಾಗಿ ನಕಲಿ ಆದಾಯ ಪ್ರಮಾಣಪತ್ರ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದಾರೆ. ರಾಜ್ಯಪಾಲರು ಅವರನ್ನು ಅಮಾನತುಗೊಳಿಸಿದ್ದು, ಹೈಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಶಾಸಕ ಯತ್ನಾಳ್ ಸಿಬಿಐ ತನಿಖೆಗೆ ಆಗ್ರಹಿಸಿದ್ದು, ಪಾರದರ್ಶಕತೆ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು, ಜು.16: ಲಕ್ಷಾಂತರ ಯುವಕರ ಭವಿಷ್ಯವನ್ನು ನಿರ್ಧರಿಸುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಅಕ್ರಮ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಕಾರಣಕ್ಕೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶದ ವಿರುದ್ಧ ಇದೀಗ ಕಾನೂನು ಹೋರಾಟ ನಡೆಯುತ್ತಿದೆ. ಇದರ ಹೊತ್ತಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರವಾಗಿ ರಾಜಕೀಯವಾಗಿ ಭಾರೀ ಚರ್ಚೆಯಾಗುತ್ತಿದೆ. ರಾಜ್ಯಪಾಲರ ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ ಅವರು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು, ಆದರೆ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯತ್ನಾಳ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪೋಸ್ಟ್ನಲ್ಲಿ ಏನಿದೆ?
ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯ ಮುಖ್ಯಸ್ಥರೇ ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಿಎಸ್‌ಸಿ ಅಧ್ಯಕ್ಷರ ಮಾಸಿಕ ವೇತನ, ಸೌಲಭ್ಯ ಹಾಗೂ ಭತ್ಯೆಗಳು ಸೇರಿ ತಿಂಗಳಿಗೆ ಸುಮಾರು 2.25 ಲಕ್ಷ ರೂ. ಸಂದಾಯವಾಗುತ್ತದೆ. ಅಂದರೆ ಅವರ ವಾರ್ಷಿಕ ವೇತನವೇ ಅಂದಾಜು 27 ಲಕ್ಷ ರೂ. ಆಗುತ್ತದೆ.
ಇಷ್ಟೊಂದು ಭಾರಿ ಪ್ರಮಾಣದ ಆದಾಯ ಪಡೆಯುತ್ತಿದ್ದರೂ, ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಮಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಸೌಲಭ್ಯ ಸಿಗಲಿ ಎಂಬ ಕಾರಣಕ್ಕಾಗಿ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ಘೋಷಿಸಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದು ಸ್ಪಷ್ಟವಾದ ‘ಸ್ವಜನಪಕ್ಷಪಾತ’ ಮತ್ತು ಕಾನೂನು ಬಾಹಿರ ಕೃತ್ಯ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ಸರ್ಕಾರಿ ಉದ್ಯೋಗ ಪಡೆಯಲು ಆಕಾಂಕ್ಷಿಗಳು ಹಗಲು ರಾತ್ರಿ ಕಷ್ಟ ಪಟ್ಟು ಓದುತ್ತಾರೆ. ಆರ್ಥಿಕವಾಗಿ ದುರ್ಬಲವಾಗಿರುವವರು ಪದವಿ ಮುಗಿಸಿ ಕೆಲಸ ಮಾಡಿಕೊಂಡು ರಾತ್ರಿಯಲ್ಲಿ ಅಭ್ಯಾಸ ಮಾಡುತ್ತಾರೆ. ಆಕಾಂಕ್ಷಿಗಳ ಪೋಷಕರೂ ಸಹ ನಮ್ಮ ಮಕ್ಕಳು ಸರ್ಕಾರೀ ಹುದ್ದೆ ಸಿಗಲಿ ಎಂದು ಹಂಬಲಿಸುತ್ತಿರುತ್ತಾರೆ. ಆದರೆ, ಕರ್ನಾಟಕ ಲೋ(ಪ)ಕ ಸೇವಾ ಆಯೋಗದ [KPSC]… pic.twitter.com/jZIaEtNvUk
— Basanagouda R Patil (Yatnal) (@BasanagoudaBJP) July 16, 2026
ಸರ್ಕಾರಿ ಉದ್ಯೋಗ ಪಡೆಯಲು ರಾಜ್ಯದ ಲಕ್ಷಾಂತರ ಬಡ ಆಕಾಂಕ್ಷಿಗಳು ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ಹಗಲಿನಲ್ಲಿ ತಮಗೊಂದು ಕೆಲಸ ಮಾಡಿಕೊಂಡು, ರಾತ್ರಿಯಿಡೀ ನಿದ್ದೆಗೆಟ್ಟು ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾರೆ. ತಮ್ಮ ಮಕ್ಕಳಿಗೆ ಒಂದು ಗೌರವಾನ್ವಿತ ಸರ್ಕಾರಿ ಹುದ್ದೆ ಸಿಗಲಿ ಎಂದು ಹೆತ್ತ ಪೋಷಕರು ಹಂಬಲಿಸುತ್ತಿರುತ್ತಾರೆ. ಆದರೆ, ನೇಮಕಾತಿ ಮಾಡುವ ಆಯೋಗದ ಮುಖ್ಯಸ್ಥರೇ ಇಂತಹ ಅಕ್ರಮವೆಸಗಿದರೆ, ವರ್ಷಗಟ್ಟಲೆ ಓದಿದ ಪ್ರತಿಭಾವಂತ, ಬುದ್ಧಿವಂತ ಹಾಗೂ ಅರ್ಹ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ. ಪತ್ರಿಕೆ ಸೋರಿಕೆ, ಲೋಪ ಹಾಗೂ ಸ್ವಜನಪಕ್ಷಪಾತದಿಂದಾಗಿ ಯೋಗ್ಯ ಆಡಳಿತಗಾರರು ವ್ಯವಸ್ಥೆಗೆ ಬರದಂತಾಗುತ್ತದೆ.
ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ ಸಿಂಧನೂರು ನ್ಯಾಯಾಲಯ
ಪ್ರಕರಣ ಸಿಬಿಐಗೆ ವಹಿಸಿ: ಯತ್ನಾಳ್ ಆಗ್ರಹ
ಶಿವಶಂಕರಪ್ಪ ಅವರ ವಿರುದ್ಧದ ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಯಾವುದೇ ಬಾಹ್ಯ ಅಥವಾ ರಾಜಕೀಯ ಒತ್ತಡಗಳಿಗೆ ಮಣಿಯದೆ ಮುಕ್ತವಾಗಿ ತನಿಖೆ ನಡೆಯಬೇಕಿದೆ ಎಂದು ಯತ್ನಾಳ್ ಆಗ್ರಹ ಮಾಡಿದ್ದಾರೆ. ರಾಜ್ಯದ ಲಕ್ಷಾಂತರ ನಿಷ್ಠಾವಂತ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಈ ಪ್ರಕರಣವನ್ನು ತಕ್ಷಣವೇ ಕೇಂದ್ರ ತನಿಖಾ ದಳಕ್ಕೆ (CBI) ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರವು ಇಂತಹ ಪರೀಕ್ಷಾ ಮತ್ತು ನೇಮಕಾತಿ ಅಕ್ರಮಗಳಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು. ಅಕ್ರಮವೆಸಗಿದವರನ್ನು ಜೈಲಿಗಟ್ಟುವ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




