ಪ್ರಭಾವಿ ಸಚಿವರ ಕ್ಷೇತ್ರದಲ್ಲಿಯೇ ಹಿನ್ನಡೆ: ಸಭೆಯಲ್ಲಿ ರಾಹುಲ್ ಗಾಂಧಿ ಸಿಡಿಮಿಡಿ, ವರದಿ ನೀಡುವಂತೆ ಸೂಚನೆ
Loksabha Election Results 2024: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಕರಣವೊಂದರ ಸಂಬಂಧ ಕೋರ್ಟ್ಗೆ ಹಾಜರಾಗಲು ಇಂದು (ಜೂನ್ 07) ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳ ರಾಹುಲ್, ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ನೂತನ ಸಂಸದರು ಮತ್ತು ಪರಾಜಿತ ಅಭ್ಯರ್ಥಿಗಳ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಚುನಾವಣಾ ಫಲಿತಾಂಶ ಕುರಿತು ಪರಾಮರ್ಶೆ ನಡೆಸಿದರು. ಆದ್ರೆ, ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ವರದಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು, (ಜೂನ್ 07): ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಕರ್ನಾಟಕದ ನೂತನ ಸಂಸದರು ಮತ್ತು ಪರಾಜಿತ ಅಭ್ಯರ್ಥಿಗಳ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಚುನಾವಣಾ ಫಲಿತಾಂಶ (Loksabha Results 2024) ಕುರಿತು ಪರಾಮರ್ಶೆ ನಡೆಸಿದರು. ಇಂದು (ಜೂನ್ 07) ಬೆಂಗಳೂರಿನ ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಇದೇ ವೇಳೆ ಗೆದ್ದವರಿಗೆ ಅಭಿನಂದನೆ ಹಾಗೂ ಸೋತ ಅಭ್ಯರ್ಥಿಗಳಿಗೆ ಧೈರ್ಯ ಹೇಳಿದ್ದಾರೆ. ಅಲ್ಲದೇ ರಾಜ್ಯ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಕೋನದಿಂದ ಮುಂದೆ ಕೈಗೊಳ್ಳಬೇಕಿರುವ ಕಾರ್ಯಗಳ ಕುರಿತು ಈ ವೇಳೆ ಚರ್ಚಿಸಲಾಯಿತು. ಬಳಿಕ ನಡೆದ ಮತ್ತೊಂದು ಪ್ರಮುಖರ ಸಭೆಯಲ್ಲಿ 18 ಕ್ಷೇತ್ರಗಳಲ್ಲಿ ಲೀಡ್ ಕೊಡಿಸಲು ವಿಫಲರಾದ ಸಚಿವರ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿ ದೆಹಲಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.
ವರದಿ ಕೇಳಿದ ರಾಹುಲ್ ಗಾಂಧಿ
ಎಲ್ಲಾ 28 ಕಾಂಗ್ರೆಸ್ ಅಭ್ಯರ್ಥಿಗಳ ಜತೆ ರಾಹುಲ್ ಗಾಂಧಿ ಸಭೆ ನಡೆಸಿದ್ದು, ಗೆದ್ದವರಿಗೆ ಅಭಿನಂದನೆ ಹಾಗೂ ಸೋತ ಅಭ್ಯರ್ಥಿಗಳಿಗೆ ಧೈರ್ಯ ಹೇಳಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಚುನಾವಣಾ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದ ಸಚಿವರ ಬಗ್ಗೆ ಸಭೆಯಲ್ಲಿ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಲೀಡ್ ಕಡಿಮೆ ಕೊಟ್ಟ ಸಚಿವರ ಬಗ್ಗೆ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ. ಈ ವೇಳೆ 18 ಸಚಿವರು ಲೀಡ್ ಕೊಡಿಸುವಲ್ಲಿ ವಿಫಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಮ್ಮ ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲ್ಲಿಸುವುದರಲ್ಲೂ ವಿಫಲರಾಗಿದ್ದಕ್ಕೆ ಸಚಿವರ ವಿರುದ್ಧ ರಾಹುಲ್ ಗಾಂಧಿ ಸಿಡಿಮಿಡಿಗೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮುಂದೆಯೇ ರಾಹುಲ್ ಗಾಂಧಿ, ಸಚಿವರ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದ್ದು, ಸಚಿವರ ಕ್ಷೇತ್ರದಲ್ಲಿ ಏಕೆ ಹಿನ್ನಡೆ ಆಗಿದೆ ಎಂದು ವರದಿ ನಿಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಜ್ ಸುರ್ಜೆವಾಲ ಅವರಿಗೆ ಸೂಚನೆ ನೀಡಿ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಗ್ಯಾರಂಟಿ ಯೋಜನೆಗಳು ಇದ್ದಾಗಲೂ ಯಾಕೆ ಹಿನ್ನಡೆ ಆಗಿದೆ ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ, ಕ್ಷೇತ್ರದಲ್ಲಿನ ಲೀಡ್ ಕಡಿಮೆ, ಕ್ಷೇತ್ರದ ಸೋಲು, ಕೆಲವು ಕ್ಷೇತ್ರಗಳ ಆಂತರಿಕ ಕಿತ್ತಾಟ ಒಳೇಟುಗಳ ಬಗ್ಗೆಯೂ ರಿಪೋರ್ಟ್ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಗೆದ್ದವರಿಗೆ ರಾಹುಲ್ ಕಿವಿ ಮಾತು
ಇನ್ನು ಗೆದ್ದ ಸಂಸದರಿಗೆ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯಿರಿ. ಬೆಂಗಳೂರು, ದೆಹಲಿಯಲ್ಲೇ ಇರಬೇಡಿ. ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಿ. ನಾವು ನಿಮ್ಮ ಜತೆಗೆ ಇದ್ದೇವೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ. ಕಾರ್ಯಕರ್ತರ ವಿಶ್ವಾಸಗಳಿಸಿ, ಅದರಿಂದ ಮುಂದೆ ನಿಮಗೂ, ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Fri, 7 June 24




