ಮದ್ದೂರಿನಲ್ಲಿ ಕಳೆದ ವರ್ಷದ ಕಲ್ಲೆಸೆತಕ್ಕೆ ದೋಸ್ತಿಗಳ ಉತ್ತರ: ನಾಳೆ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ, ಬೃಹತ್ ಮೆರವಣಿಗೆ
ಮಂಡ್ಯದ ಮದ್ದೂರಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಳೆದ ವರ್ಷದ ಗಲಭೆಗೆ ಪ್ರತಿಕ್ರಿಯೆಯಾಗಿ 108 ಗಣೇಶ ಮೂರ್ತಿಗಳ ಬೃಹತ್ ವಿಸರ್ಜನಾ ಕಾರ್ಯಕ್ರಮ ಆಯೋಜಿಸಿದೆ. ಇದು ಮೈತ್ರಿಕೂಟದ ರಾಜಕೀಯ ಶಕ್ತಿ ಪ್ರದರ್ಶನವೂ ಆಗಿದ್ದು, ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಮಂಡ್ಯ, ಸೆ.15: ಕಳೆದ ವರ್ಷ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟ ಮತ್ತು ಗಲಾಟೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರು, ಈ ಬಾರಿ ಅತ್ಯಂತ ಅದ್ದೂರಿಯಾಗಿ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮಾಡಲು ಬೃಹತ್ ಯೋಜನೆ ರೂಪಿಸಿದ್ದಾರೆ. ನಾಳೆ (ಬುಧವಾರ ಸೆ.16) ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ. ಗಣೇಶೋತ್ಸವದ ನೆಪದಲ್ಲಿ ಮಂಡ್ಯ ಜಿಲ್ಲೆಯಲ್ಲಿ ದೋಸ್ತಿ ಪಕ್ಷಗಳು ಒಂದಾಗಿ ತಮ್ಮ ರಾಜಕೀಯ ಶಕ್ತಿಯನ್ನೂ ಪ್ರದರ್ಶಿಸಲು ಸಜ್ಜಾಗಿವೆ.
ಕಳೆದ ವರ್ಷ ಮದ್ದೂರು ಪಟ್ಟಣದಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ಸಾಗುತ್ತಿದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ದೊಡ್ಡ ಮಟ್ಟದ ಕೋಮು ಸಂಘರ್ಷ ಹಾಗೂ ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಡಿಎ (BJP-JDS) ಮೈತ್ರಿಕೂಟದ ನಾಯಕರು, ಈ ಬಾರಿ ಅದೇ ಹಳೆಯ ಮಾರ್ಗದಲ್ಲೇ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ. ಮದ್ದೂರು ಪಟ್ಟಣ ಹಾಗೂ ಸುತ್ತಮುತ್ತಲ ವಿವಿಧ ಬಡಾವಣೆ, ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಬರೋಬ್ಬರಿ 108 ಗಣೇಶ ಮೂರ್ತಿಗಳನ್ನು ಒಂದೆಡೆ ಸೇರಿಸಿ ಸಾಮೂಹಿಕವಾಗಿ ವಿಸರ್ಜಿಸಲಾಗುತ್ತದೆ.
ಸಾಮೂಹಿಕ ವಿಸರ್ಜನೆಗೂ ಮುನ್ನ ಮದ್ದೂರಿನ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಯಲಿದ್ದು, ಸುಮಾರು 10,000ಕ್ಕೂ ಹೆಚ್ಚು ಭಕ್ತರು ಹಾಗೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಈ ಬೃಹತ್ ಮೆರವಣಿಗೆ ಮತ್ತು ಸಾಮೂಹಿಕ ವಿಸರ್ಜನಾ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ವಿಪಕ್ಷ ನಾಯಕರು ಭಾಗವಹಿಸಲಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಎರಡೂ ಪಕ್ಷಗಳ ಹಲವು ಶಾಸಕರು, ಮಾಜಿ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಮದ್ದೂರು ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.
ಇದನ್ನೂ ಓದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಸಿಐಡಿ-ಇಡಿ ಜಂಟಿ ತನಿಖೆ ಚುರುಕು, ಬಯಲಾಯ್ತು ಸ್ಫೋಟಕ ಸತ್ಯಗಳು
ಗಣೇಶ ಮೆರವಣಿಗೆಯ ಮೇಲಿನ ಕಲ್ಲು ತೂರಾಟ ಪ್ರಕರಣ
ರಾಮ್ ರಹೀಂ ನಗರ ಪ್ರದೇಶದಲ್ಲಿ ಬೃಹತ್ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ, ಮಸೀದಿಯೊಂದರ ಮುಂಭಾಗದಲ್ಲಿ ಧ್ವನಿವರ್ಧಕ ಹಾಗೂ ನೃತ್ಯದ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ಶುರುವಾಯಿತು. ವಾಗ್ವಾದ ತೀವ್ರಗೊಂಡು ಕಿಡಿಗೇಡಿಗಳು ಮೆರವಣಿಗೆಯ ಮೇಲೆ ಕಲ್ಲು ಹಾಗೂ ಬಾಟಲಿಗಳನ್ನು ಎಸೆದರು. ಇದರಿಂದ ಗಣೇಶ ಮೂರ್ತಿಯಲ್ಲಿದ್ದ ಹಲವು ಭಕ್ತರಿಗೆ ಗಾಯಗಳಾಗಿ, ಸ್ಥಳದಲ್ಲಿ ತೀವ್ರ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆಯನ್ನು ಖಂಡಿಸಿ ಮರುದಿನವೇ ಬಿಜೆಪಿ, ಜೆಡಿಎಸ್ ಹಾಗೂ ಪ್ರಮುಖ ಹಿಂದೂ ಸಂಘಟನೆಗಳು ಮದ್ದೂರು ಬಂದ್‌ಗೆ ಕರೆ ನೀಡಿದವು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ತಹಸೀಲ್ದಾರ್ ಕಚೇರಿ ಮುಂದೆ ಬೃಹತ್ ಧರಣಿ ನಡೆಸಲಾಯಿತು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಘಟನೆಗೆ ಕಾರಣರಾದ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಮದ್ದೂರು ಪಟ್ಟಣದಾದ್ಯಂತ ನಿಷೇಧಾಜ್ಞೆ (Section 144) ಜಾರಿಗೊಳಿಸಿ ಹೆಚ್ಚುವರಿ ಕೆಎಸ್‌ಆರ್‌ಪಿ ಪಡೆಗಳನ್ನು ನಿಯೋಜಿಸಲಾಗಿತ್ತು. ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಟುವಾಗಿ ವಾಗ್ದಾಳಿ ನಡೆಸಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




