KFCSC ಗೋಡೌನ್ ನಲ್ಲಿದ್ದ 2.5 ಕೋಟಿ ಮೌಲ್ಯದ ಜೋಳ ನಾಪತ್ತೆ! ಕೆಎಫ್‍ಸಿಎಸ್‍ಸಿ ಅಧಿಕಾರಿಗಳ ವಿರುದ್ಧ 2 ಪ್ರಕರಣ ದಾಖಲು
KFCSC: ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಿ ಗೋದಾಮುಗಳಲ್ಲಿ ದಾಸ್ತಾನಿರಿಸಲಾಗಿದ್ದ ಜೋಳದಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಪಡಿತರ ಹಂಚಿಕೆಯಲ್ಲಿ ಆಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೆಎಫ್‍ಸಿಎಸ್‍ಸಿ ಅಧಿಕಾರಿಗಳ ವಿರುದ್ಧ ಬಳ್ಳಾರಿ ಮತ್ತು ಸಿರಗುಪ್ಪ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ
ಬಳ್ಳಾರಿ: 2021-22ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಿ (KFCSC) ಗೋದಾಮುಗಳಲ್ಲಿ ದಾಸ್ತಾನಿರಿಸಲಾಗಿದ್ದ ಜೋಳದಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಪಡಿತರ ಹಂಚಿಕೆಯಲ್ಲಿ ಆಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೆಎಫ್‍ಸಿಎಸ್‍ಸಿ (Karnataka Food & Civil Supplies Corporation Ltd) ಅಧಿಕಾರಿಗಳ ವಿರುದ್ಧ ಬಳ್ಳಾರಿ ಮತ್ತು ಸಿರಗುಪ್ಪ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು (FIR) ದಾಖಲಾಗಿವೆ.
ಬಳ್ಳಾರಿ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಜೋಳಕ್ಕೆ ರೂ. 2738ರಂತೆ ಬಳ್ಳಾರಿ ತಾಲೂಕಿನಲ್ಲಿ 109986.85 ಕ್ವಿಂಟಾಲ್ ಜೋಳ ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 130978.00 ಕ್ವಿಂಟಾಲ್ ಜೋಳ ಖರೀದಿಸಲಾಗಿತ್ತು. ಈ ಪೈಕಿ ಮೇ-2022 ಮತ್ತು ಜೂನ್-2022 ಮಾಹೆಗೆ ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕುಗಳಿಗೆ ಸಾರ್ವಜನಿಕ ವಿತರಣಾ ಪದ್ಧತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಗೆ ಹಾಗೂ ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಒಟ್ಟು 228850.85 ಕ್ವಿಂಟಾಲ್ ಜೋಳ ವಿತರಣೆಗೆ ಹಂಚಿಕೆ ನೀಡಲಾಗಿತ್ತು.
ಬಳ್ಳಾರಿ ತಾಲೂಕಿನ ಎಸ್‍ಡಬ್ಲ್ಯೂಸಿ (SWC) ಗೋಡಾನ್‍ಲ್ಲಿ 2267.87 ಕ್ವಿಂಟಾಲ್ ಹಾಗೂ ಸಿರುಗುಪ್ಪ ತಾಲೂಕಿನ ಸಂಗ್ರಹಣಾ ಕೇಂದ್ರವಾದ ಕೆ.ಎಫ್.ಸಿ.ಎಸ್.ಸಿ ಸಗಟು ಗೋದಾಮು ಹಾಗೂ ಬಾಲಾಜಿ ಗೋಡಾನು (ಸಿಂಧನೂರು ರಸ್ತೆ) ರಲ್ಲಿ 9846.45 ಕ್ವಿಂಟಾಲ್ ಜೋಳ ಇರಬೇಕಾಗಿತ್ತು. ಆದರೆ ಸ್ಥಳ ತನಿಖೆ ಮಾಡಿ ಪರಿಶೀಲನೆ ಮಾಡಿದಾಗ ಬಳ್ಳಾರಿಯ ಎಸ್‍ಡಬ್ಲ್ಯೂಸಿ (SWC) ಗೋಡಾನ್‍ಲ್ಲಿ 1030 ಕ್ವಿಂಟಾಲ್ ಹಾಗೂ ಸಿರುಗುಪ್ಪ ತಾಲೂಕಿನ ಸಂಗ್ರಹಣಾ ಕೇಂದ್ರವಾದ ಕೆ.ಎಫ್.ಸಿ.ಎಸ್.ಸಿ ಸಗಟು ಗೋದಾಮು ಹಾಗೂ ಬಾಲಾಜಿ ಗೋಡಾನು (ಸಿಂಧನೂರು ರಸ್ತೆ) ರಲ್ಲಿ 2548.50 ಕ್ವಿಂಟಾಲ್ ಜೋಳ ಇರುತ್ತದೆ.
ಆದರೆ ಇನ್ನೂ ಬಳ್ಳಾರಿ ಎಸ್‍ಡಬ್ಲ್ಯೂಸಿ (SWC) ಗೋಡಾನ್‍ಲ್ಲಿ 1237.87 ಕ್ವಿಂಟಾಲ್ ಜೋಳ ಹಾಗೂ ಸಿರುಗುಪ್ಪ ಬಾಲಾಜಿ ಗೋಡಾನ್ ಹಾಗೂ ಕೆ.ಎಫ್.ಸಿ.ಎಸ್.ಸಿ ಗೋಡಾನ್‍ನಲ್ಲಿ 7282.42 ಕ್ವಿಂಟಾಲ್ ಜೋಳ ದಾಸ್ತಾನು ಕಡಿಮೆ ಇರುವುದು ಕಂಡು ಬಂದಿತ್ತು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಜುಲೈ-2022 ಮಾಹೆಗೆ ಪಡಿತರ ಚೀಟಿದಾರರಿಗೆ ಅಕ್ಕಿ ಜೊತೆಗೆ ಜೋಳ ಸಹ ಹಂಚಿಕೆ ನೀಡಿರುವುದರಿಂದ ಜುಲೈ-2022 ಮಾಹೆಯ ಪಡಿತರ ಹಂಚಿಕೆಯಲ್ಲಿ ಅಡಚಣೆ ಉಂಟಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್ ಅವರು ತಿಳಿಸಿದ್ದಾರೆ.
ಜೋಳದ ಕೊರತೆಗೆ ಕಾರಣೀಕರ್ತರಾದ ಬಳ್ಳಾರಿ ಕೆ.ಎಫ್.ಸಿ.ಎಸ್.ಸಿಯ ಜಿಲ್ಲಾ ವ್ಯವಸ್ಥಾಪಕರಾದ ನಾರಾಯಣಸ್ವಾಮಿ.ಎಮ್, ಬಳ್ಳಾರಿ ತಾಲೂಕಿನ ಖರೀದಿ ಅಧಿಕಾರಿಯಾದ ಕೆ.ಎಫ್.ಸಿ.ಎಸ್.ಸಿಯ ಕಿರಿಯ ಸಹಾಯಕರು/ಖರೀದಿ ಅಧಿಕಾರಿ ಶಿವೇಗೌಡ, ಸಿರಗುಪ್ಪ ಗೋದಾಮು ವ್ಯವಸ್ಥಾಪಕರು/ಖರೀದಿ ಅಧಿಕಾರಿ ಬಸವರಾಜ ಅವರ ಮೇಲೆ ಜಿಲ್ಲಾಧಿಕಾರಿಗಳ ನಿರ್ದೇಶನದ ಅನುಸಾರ ಬಳ್ಳಾರಿ ಗ್ರಾಮೀಣ ಮತ್ತು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಅಧಿಕಾರಿಗಳ ವಿರುದ್ಧ Essential Commodities Act 1955 (U/s-7, 3), Karnataka Essential Commodities (Storage Accounts Maintaining Value Notification) Order 1981 (U/s-4,8,3(2)(i),6), Karnataka Essential Commodities (Public Distribution System) Public Control Order 2016 (U/s-12), ಹಾಗೂ ಐಪಿಸಿ ಕಾಯ್ದೆ 1860 (U/s-403, 409, 420)ರಡಿ ಸಿರುಗುಪ್ಪ ಪೊಲೀಸ್ ಠಾಣೆಯ ಎಫ್‍ಐಆರ್ ಸಂಖ್ಯೆ:0178/2022 ಜು.06ರಂದು ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಎಫ್‍ಐಆರ್ ಸಂಖ್ಯೆ:0157/2022 ಜು.07ರಂದು ಪ್ರಕರಣ ದಾಖಲಿಸಿಲಾಗಿದೆ ಎಂದು ಅವರು ತಿಳಿಸಿದ್ದಾರೆ.
– ವೀರಪ್ಪ ದಾನಿ