ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಡಾ. ಹೆಚ್ ಡಿ ಚೌಡಯ್ಯ ವಿಧಿವಶ
ಹೆಚ್ ಡಿ ಚೌಡಯ್ಯ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಮಾಜಿ ಶಾಸಕರು, ಶಿಕ್ಷಣ ತಜ್ಞರು, ಶಿಸ್ತು, ದಕ್ಷ ಆಡಳಿಗಾರರೂ ಆಗಿದ್ದ ಹೆಚ್ ಡಿ ಚೌಡಯ್ಯ ಅವರ ನಿಧನ ನನಗೆ ಬಹಳ ನೋವನ್ನುಂಟು ಮಾಡಿದೆ.
ಮಂಡ್ಯ: ಮಾಜಿ ಶಾಸಕ ಡಾ.ಹೆಚ್ ಡಿ ಚೌಡಯ್ಯ(94) (HD Chowdaiah) ಇಂದು (ಫೆ.16) ವಿಧಿವಶರಾಗಿದ್ದಾರೆ. ಮಂಡ್ಯ ನಗರದ ಹೊಳಲು ನಿವಾಸದಲ್ಲಿ ಚೌಡಯ್ಯ ರಾತ್ರಿ 2.15 ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿದ್ದ ಚೌಡಯ್ಯ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಲ್ಲದೆ ಕಾವೇರಿ ಹೋರಾಟದಲ್ಲಿ ಮಾದೇಗೌಡರ ಜತೆ ಭಾಗಿಯಾಗಿದ್ದರು. ಪಿಇಟಿ ಶಿಕ್ಷಣ ಸಂಸ್ಥೆ ಕಟ್ಟಿದ್ದವರಲ್ಲಿ ಚೌಡಯ್ಯನವರು ಒಬ್ಬರು. ಇನ್ನು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚೌಡಯ್ಯ ಅವರು ಇಂದು ನಿಧನರಾಗಿದ್ದಾರೆ.
ಹೆಚ್ ಡಿ ಚೌಡಯ್ಯ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸಂತಾಪ ಸೂಚಿಸಿದ್ದಾರೆ. ಮಾಜಿ ಶಾಸಕರು, ಶಿಕ್ಷಣ ತಜ್ಞರು, ಶಿಸ್ತು, ದಕ್ಷ ಆಡಳಿಗಾರರೂ ಆಗಿದ್ದ ಹೆಚ್ ಡಿ ಚೌಡಯ್ಯ ಅವರ ನಿಧನ ನನಗೆ ಬಹಳ ನೋವನ್ನುಂಟು ಮಾಡಿದೆ. ನಾಲ್ಕು ಅವಧಿಗೆ ಶಾಸಕರು, ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಅವರು ಆದರ್ಶ ಜನಪ್ರತಿನಿಧಿ ಆಗಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಎಣೆ ಇಲ್ಲದಷ್ಟು ಸೇವೆ ಸಲ್ಲಿಸಿದ್ದರು ಅಂತ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ
ಚೌಡಯ್ಯ ಅವರ ಅಗಲಿಕೆಯೊಂದಿಗೆ ಪ್ರಾಮಾಣಿಕ, ಸೇವಾತತ್ಪರ, ನಿಸ್ವಾರ್ಥ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ: ಪತ್ನಿ ದೊಡ್ಡಲಿಂಗಮ್ಮನವರ ಅಗಲಿಕೆಯ ನಂತರ ತೀವ್ರವಾಗಿ ಕ್ಷಿಣಿಸಿದ್ದ ಚೌಡಯ್ಯನವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರರಿದ್ದಾರೆ. ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಇವರು 1928 ರಲ್ಲಿ ಜನಿಸಿದ್ದರು. ಚೌಡಯ್ಯ ಬಿಎಸ್ಸಿ (ಅಗ್ರಿ) ಪದವೀಧರರಾಗಿದ್ದರು. ಆಗಿನ ಕಾಲದಲ್ಲಿ ತಾಲೂಕು ಬೋಡ್೯ ಮೆಂಬರ್ ಹಾಗೂ ಅಧ್ಯಕ್ಷರಾಗುವ ಮೂಲಕ ರಾಜಕೀಯಕ್ಕೆ ಪಾದಾಪ೯ಣೆ ಮಾಡಿ, 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
1989 ರಲ್ಲಿ ಮಂಡ್ಯದ ಪಿಎಸ್ ಇ ಟ್ರಸ್ಟ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಚೌಡಯ್ಯನರು 31 ವಷ೯ಗಳ ಕಾಲ ಸುದೀರ್ಘ ಆಡಳಿತ ನಡೆಸಿದರು. ಇಂದು ಸಂಜೆ 4 ಗಂಟೆಗೆ ಹೊಳಲು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯುತ್ತದೆ. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ
Poco M4 Pro 5G: ಭಾರತದಲ್ಲಿ ರಿಲೀಸ್ ಆದ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್ ಹೇಗಿದೆ?: ಖರೀದಿಸಬಹುದೆ?
Published On - 10:06 am, Wed, 16 February 22