ಮೇಲುಕೋಟೆ: ನ 2ರಿಂದ ವೈರಮುಡಿ ಉತ್ಸವ, ನ 3ಕ್ಕೆ ತೊಟ್ಟಿಲಮಡು ಜಾತ್ರೆ

ಸಂತಾನಭಾಗ್ಯ ಕರುಣಿಸುವ ಜಾತ್ರೆ ಎನ್ನುವ ಕಾರಣಕ್ಕೆ ತೊಟ್ಟಿಲಮಡು ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ಇದೆ.

ಮೇಲುಕೋಟೆ: ನ 2ರಿಂದ ವೈರಮುಡಿ ಉತ್ಸವ, ನ 3ಕ್ಕೆ ತೊಟ್ಟಿಲಮಡು ಜಾತ್ರೆ
ಮೇಲುಕೋಟೆ ಚೆಲುವ ನಾರಾಯಣಸ್ವಾಮಿಯ ವೈರಮುಡಿ ಉತ್ಸವ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 27, 2022 | 1:40 PM

ಮಂಡ್ಯ: ಮಕ್ಕಳು ಬೇಕೆಂಬ ಹಂಬಲ ತಣಿಸುವ ಉತ್ಸವವೆಂದೇ ಹೆಸರುವಾಸಿಯಾಗಿರುವ ಮೇಲುಕೋಟೆ ಚೆಲುವ ನಾರಾಯಣಸ್ವಾಮಿಯ (Melukote Cheluva Narayanaswamy) ತೊಟ್ಟಿಲ ಮಡುಜಾತ್ರೆ ನ 3ರಂದು ನಡೆಯಲಿದೆ. ಇದೇ ವೇಳೆ ರಾಜಮುಡಿ ಅಷ್ಟತೀರ್ಥೋತ್ಸವವೂ ಆರಂಭವಾಗಲಿದ್ದು, ಅಂದು ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಗ್ರಾಮದಲ್ಲಿ ಉತ್ಸವಗಳು ನೆರವೇರಿಲಿವೆ. ಗ್ರಾಮದ ಒಳಗೆ ಮತ್ತು ಸುತ್ತಮುತ್ತಲು ಇರುವ 8 ಕಲ್ಯಾಣಿಗಳಲ್ಲಿ ದೇವರ ಪಾದುಕೆಗಳಿಗೆ ಅಭಿಷೇಕ ನಡೆಯಲಿದೆ.

ಗ್ರಾಮದ ಸಮೀಪ ಇರುವ ತೊಟ್ಟಿಲಮಡು ಸಮೀಪ ಅಂದು ಸಂಜೆ ಜಾತ್ರೆ ಸೇರುವುದು ವಾಡಿಕೆ. ಜಾತ್ರೆಯಲ್ಲಿ ಮಕ್ಕಳಾಗದ ವಿವಾಹಿತರು ಹರಕೆಹೊರುವ ಸಂಪ್ರದಾಯವಿದೆ. ಸಂತಾನಭಾಗ್ಯ ಕರುಣಿಸುವ ಜಾತ್ರೆ ಎನ್ನುವ ಕಾರಣಕ್ಕೆ ತೊಟ್ಟಿಲಮಡು ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ಇದೆ. ಗ್ರಾಮದಲ್ಲಿ ಅ 29ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ನ 2ರಂದು ರಾತ್ರಿ 7 ಗಂಟೆಗೆ ರಾಜಮುಡಿ ಉತ್ಸವ ನಡೆಯಲಿದೆ. ಇದು ಸತತ 10 ದಿನಗಳ ಅವಧಿಯ ಉತ್ಸವವಾಗಿದೆ.

ರಾಜಮುಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ವಿವಿಧೆಡೆಗಳಿಂದ ಜನರು ಆಗಮಿಸುತ್ತಾರೆ. ಪ್ರತಿ ವರ್ಷ ಉತ್ಸವದ ಸಂದರ್ಭದಲ್ಲಿ ಮಂಡ್ಯದ ಜಿಲ್ಲಾ ಖಜಾನೆಯಲ್ಲಿರುವ ರಾಜಮುಡಿ ಕಿರೀಟವನ್ನು ಪೊಲೀಸ್‌ ಭದ್ರತೆಯಲ್ಲಿ ಮೇಲುಕೋಟೆಗೆ ತರುವುದು ವಾಡಿಕೆ. ನಂತರ ಮೆರವಣಿಯಲ್ಲಿ ಕಿರೀಟವನ್ನು ದೇಗುಲಕ್ಕೆ ತಂದು ಸ್ಥಾನಿಕರು, ಮತ್ತು ಅರ್ಚಕರು ಪರಿಶೀಲಿಸುತ್ತಾರೆ. ವೈರಮುಡಿ ಉತ್ಸವದಲ್ಲಿ ಸಾಗಿಬರುವ ಚಲುವ ನಾರಾಯಣ ಸ್ವಾಮಿಯನ್ನು ನೋಡುವುದೇ ಕಣ್ಣಿಗೆ ಹಬ್ಬ.

Parrot-in-Melukote

ಮೇಲುಕೋಟೆಗೆ ಬಂದಿರುವ ಗಿಣಿ ರಾಣಿ

ಚೆಲುವ ನಾರಾಯಣನ ದರ್ಶನಕ್ಕೆ ಬಂದ ಗಿಣಿ

ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಯ ದರ್ಶನಕ್ಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಿಂದ ವಿಶೇಷ ಭಕ್ತರೊಬ್ಬರು ಬಂದಿದ್ದಾರೆ. ಒಡೆಯನ ಹೆಗಲೇರಿ ಸಂಚರಿಸುವ ಈ ಭಕ್ತೆಯನ್ನು ಗ್ರಾಮದ ಜನರು ಅಚ್ಚರಿಯಿಂದ ನೋಡುತ್ತಿದ್ದಾರೆ. ನಿಂಗಯ್ಯನ ಹೆಗಲು ಏರಿ ಸಂಚರಿಸುವ ಗಿಣಿ ‘ರಾಣಿ’ಯೇ ಈ ವಿಶೇಷ ಅತಿಥಿ. ಈ ಗಿಣಿಮರಿಯು ಕನ್ನಡ, ತಮಿಳು, ತೆಲಗು ಭಾಷೆ ಮಾತನಾಡಬಲ್ಲದು. ಎರಡು ವರ್ಷಗಳ ಹಿಂದೆ ಗಾಯಗೊಂಡು ಕೆಳಗೆ ಬಿದ್ದಿದ್ದ ಗಿಣಿಯನ್ನು ನಿಂಗಯ್ಯ ಪ್ರೀತಿಯಿಂದ ಸಾಕುತ್ತಿದ್ದಾರೆ. ಅಂದಿನಿಂದಲೂ ಇದು ಅವರ ತೋಟದಲ್ಲಿಯೇ ವಾಸವಾಗಿದೆ. ಮೈಸೂರಿನ ತಾಯಿ ಚಾಮುಂಡಿ, ನಂಜುಡೇಶ್ವರ, ರಂಗನಾಥ ಸ್ವಾಮಿ, ನಿಮಿಷಾಂಬ, ಮೇಲುಕೋಟೆ ಚಲುವನಾರಾಯಣ ಸ್ವಾಮಿ ಸೇರಿದಂತೆ 15 ಪ್ರಮುಖ ದೇವಸ್ಥಾನಗಳಲ್ಲಿ ಗಿಣಿ ರಾಣಿಯು ದೇವರ ದರ್ಶನ ಮಾಡಿದೆ.

Published On - 1:34 pm, Thu, 27 October 22