
ಬೆಂಗಳೂರು, (ಏಪ್ರಿಲ್ 23): ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪಹಲ್ಗಾಮ್ನಲ್ಲಿ ಉಗ್ರರ ಗುಂಡಿನ ದಾಳಿ (Pahalgam Terror Attack) ಇಬ್ಬರು ಕನ್ನಡಿಗರು (Kannadigas) ಬಲಿಯಾಗಿದ್ದಾರೆ. ಪ್ರವಾಸಕ್ಕೆಂದು (Trip) ಹೋಗಿದ್ದಾಗ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಶಿವಮೊಗ್ಗದ (Shivamogga) ಮಂಜುನಾಥ್ ರಾವ್ ಮತ್ತು ಬೆಂಗಳೂರು(Bengaluru) ಮೂಲದ ಭರತ್ ಭೂಷಣ್ ಎನ್ನುವರು ಉಗ್ರರ ಗುಂಡಿಗೆ ಬಲಿಯಾಗಿದ್ದು, ಇವರ ಮೃತದೇಹವನ್ನು ಕಾಶ್ಮೀರದಿಂದ ಅವರ ಊರುಗಳಿಗೆ ತರಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಇನ್ನು ಕರ್ನಾಟಕ ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಪ್ರವಾಸಕ್ಕೆಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ತೆರಳಿದ್ದಾಗ ಟಿಆರ್ಎಫ್ ಉಗ್ರರು ನಿನ್ನೆ(ಏಪ್ರಿಲ್ 22) ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 27 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಇಬ್ಬರು ಕರ್ನಾಟಕದವರು ಮೃತಪಟ್ಟಿದ್ದಾರೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದು, ಇವರ ಮೃತದೇಹಗಳನ್ನು ಹುಟ್ಟೂರಿಗೆ ತರಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಅದರಲ್ಲೂ ಸಚಿವ ಸಂತೋಷ್ ಲಾಡ್ ಅವರು ನಿನ್ನೆಯೇ ಸ್ಥಳಕ್ಕೆ ತೆರಳಿ ಕನ್ನಡಿಗರ ನೆರವಿಗೆ ನಿಂತಿದ್ದಾರೆ.
ಮಂಜುನಾಥ್ ರಾವ್ ಮತ್ತು ಭರತ್ ಭೂಷಣ್ ಮೃತದೇಹಗಳನ್ನು ಹೊತ್ತ ಇಂಡಿಯೋ ವಿಮಾನ ಕೆಲವೇ ಕ್ಷಣಗಳಲ್ಲಿ ಶ್ರೀನಗರದಿಂದ ದೆಹಲಿಯತ್ತ ಹೊರಡಲಿದೆ. ಬಳಿಕ ದೆಹಲಿಯಿಂದ ಮತ್ತೊಂದು ವಿಮಾನ ಮೂಲಕ ಮೃತದೇಹಗಳು ಬೆಂಗಳೂರಿಗೆ ಬರಲಿವೆ. ಗುರುವಾರ ಬೆಳಗಿನ ಜಾವ ಮೂರು ಗಂಟೆಗೆ ಮೃತದೇಹಗಳು ಬೆಂಗಳೂರು ತಲುಪುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇನ್ನು ಮಂಜುನಾಥ್ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರು ಶಿವಮೊಗ್ಗದಿಂದ ಬೆಂಗಳೂರಿನತ್ತ ಹೊರಟ್ಟಿದ್ದಾರೆ. ಮೃತ ಮಂಜುನಾಥ್ ಪತ್ನಿ ಪಲ್ಲವಿ ಸಹೋದರ ಪ್ರದೀಪ್ ಹಾಗೂ ಸಹೋದರಿ ವಿನುತಾ ಅವರು ಕಾರಿನ ಮೂಲಕ ಶಿವಮೊಗ್ಗದಿಂದ ಬೆಂಗಳೂರಿನತ್ತ ತೆರಳುತ್ತಿದ್ದಾರೆ.
ಪ್ರವಾಸಕ್ಕೆಂದು ಹೋಗಿ ಕಾಶ್ಮೀರದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ತವರಿಗೆ ವಾಪಸ್ ಆಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಸ್ಥಳೀಯ ಸಚಿವರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ.
ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಸ್ಥಳೀಯ ಸಚಿವರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿದ್ದು.ಪ್ರಧಾನಿಗಳ ಕಚೇರಿ, ಗೃಹ ಸಚಿವರ ಕಚೇರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕರ್ನಾಟಕದವರನ್ನು ಸುರಕ್ಷಿತರಾಗಿ ಹಿಂದಿರುಗಿಸಲು ವ್ಯವಸ್ಥೆ ನಡೆಯುತ್ತಿದೆ. ಗ್ರಾಹಕ ವ್ಯವಹಾರಗಳ ಸಚಿವರಾಗಿ ವೈಮಾನಿಕ ಟಿಕೆಟ್ ದರಕ್ಕೆ ಬ್ರೇಕ್ ಹಾಕಲಾಗಿದೆ. ಈ ಪರಿಸ್ಥಿತಿಯಲ್ಲಿ ಟಿಕೆಟ್ ದರ ಹೆಚ್ಚಳ ಮಾಡದಂತೆ ಡಿಜಿಸಿಎ ಹಾಗೂ ವಿಮಾನಯಾನ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ ಎಂದರು.
Published On - 7:34 pm, Wed, 23 April 25