ಪಹಲ್ಗಾಮ್ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಕ್ಕೆ ಭಾರತ ಚಿಂತನೆ
ಜಮ್ಮು ಮತ್ತು ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ. ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಹಲವು ಸಚಿವರು, ಜಮ್ಮು ಕಾಶ್ಮೀರದ ಸಿಎಂ, ಲೆಫ್ಟಿನೆಂಟ್ ಗವರ್ನರ್, ಸಂಸದರು, ಸೇನಾಪಡೆಗಳ ಮುಖ್ಯಸ್ಥರು ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತದಲ್ಲಿ ನಡೆದ ಅತಿ ದೊಡ್ಡ ಗುಂಡಿನ ದಾಳಿ ಇದಾಗಿದೆ. ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯನ್ನು ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಪ್ರತೀಕಾರದ ಬಗ್ಗೆಯೂ ಚಿಂತನೆ ನಡೆಸಿದೆ.

ನವದೆಹಲಿ, ಏಪ್ರಿಲ್ 23: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Terror Attack) ನಡೆದ ಭಯೋತ್ಪಾದಕ ದಾಳಿ ಭಾರತವನ್ನು ಮಾತ್ರವಲ್ಲದೆ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ. ಹಾಡಹಗಲೇ ಉಗ್ರರು ಪ್ರವಾಸಿ ತಾಣಕ್ಕೆ ನುಗ್ಗಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು ತೀವ್ರ ಆಘಾತ ಸೃಷ್ಟಿಸಿದೆ. ಈಗಾಗಲೇ ಈ ಬಗ್ಗೆ ಭಾರತ ಕಠಿಣ ಸಂದೇಶ ರವಾನಿಸಿದ್ದು, ಈ ಕೃತ್ಯ ಎಸಗಿದವರನ್ನು ಬಿಡುವ ಮಾತೇ ಇಲ್ಲ ಎಂದು ಹೇಳಿದೆ. ಇಂದು ಕೂಡ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಈ ಬಗ್ಗೆ ಪ್ರತಿಕ್ರಿಯಿಸಿದ್ದು, 26 ಜನರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಗೆ ಕಾರಣರಾದ ಉಗ್ರ ಸಂಘಟನೆಯನ್ನು ಮಾತ್ರವಲ್ಲ ತೆರೆಮರೆಯಲ್ಲಿ ನಿಂತು ಕುಮ್ಮಕ್ಕು ಇದಕ್ಕೆ ನೀಡಿದವರನ್ನು, ಸಂಚು ರೂಪಿಸಿದವರನ್ನು ಕೂಡ ನಾವು ಸುಮ್ಮನೆ ಬಿಡುವುದಿಲ್ಲ. ಈ ಕೃತ್ಯಕ್ಕೆ ಮುಂದಿನ ದಿನಗಳಲ್ಲಿ ನಾವು ಸರಿಯಾದ ಉತ್ತರ ನೀಡಿಯೇ ನೀಡುತ್ತೇವೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರದ ಬಗ್ಗೆಯೂ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಪಾಕಿಸ್ತಾನ ಇಂದು ಈ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೂ ಭಾರತ ಸರ್ಕಾರ ಪಾಕಿಸ್ತಾನವನ್ನು ಈ ವಿಷಯದಲ್ಲಿ ನಂಬಿಲ್ಲ. ಈ ಕೃತ್ಯದ ಹೊಣೆ ಹೊತ್ತಿಕೊಂಡಿರುವ ಟಿಆರ್ಎಫ್ಗೂ ಪಾಕಿಸ್ತಾನದ ಎಲ್ಇಟಿ ಸಂಘಟನೆಗೂ ಸಂಬಂಧ ಇರುವುದರಿಂದ ಈ ದಾಳಿಗೆ ಪಾಕಿಸ್ತಾನದ ಕುಮ್ಮಕ್ಕು ಕೂಡ ಇದೆ ಎಂಬುದು ಭಾರತದ ಅಭಿಪ್ರಾಯ. ಹೀಗಾಗಿ, ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಭಾಗವಾಗಿ ಪಾಕಿಸ್ತಾನದ ಜೊತೆ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸುವುದು, ದೆಹಲಿಯಿಂದ ಪಾಕಿಸ್ತಾನ ಹೈಕಮಿಷನರ್ ಗಡಿಪಾರು ಮಾಡುವುದು, ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳನ್ನು ಗಡಿಪಾರು ಮಾಡುವುದು, ಪಾಕ್ ಹೈಕಮಿಷನರ್ಗೆ ನೀಡಲಾದ ಭೂಮಿಯನ್ನು ಹಿಂಪಡೆಯುವುದು, ಇಸ್ಲಾಮಾಬಾದ್ನಿಂದ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದು ಹೀಗೆ ಕೆಲವು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಭಾರತ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತ ಭಯೋತ್ಪಾದನೆ ಮುಂದೆ ಮಣಿಯುವುದಿಲ್ಲ; ಪಹಲ್ಗಾಮ್ ದಾಳಿಯ ಸಂತ್ರಸ್ತರ ಭೇಟಿ ಬಳಿಕ ಅಮಿತ್ ಶಾ
ಇದರ ಜೊತೆಗೆ, ಪಾಕಿಸ್ತಾನದ ಜೊತೆಗಿನ ದ್ವಿಪಕ್ಷೀಯ ಸಂವಹನವನ್ನು ಕೇವಲ ಇ-ಮೇಲ್ಗೆ ಸೀಮಿತಗೊಳಿಸುವುದು, ಸಿಂಧೂ ನದಿ ಒಪ್ಪಂದವನ್ನು(IWT) ಸ್ಥಗಿತಗೊಳಿಸುವುದು, ಪಾಕ್ ಕೃತ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮಾಹಿತಿ ನೀಡುವುದು, ವಿದೇಶಿ ರಾಯಭಾರಿಗಳಿಗೆ ಪಾಕ್ ವಿರುದ್ಧ ಸಾಕ್ಷ್ಯ ಪ್ರದರ್ಶನ ಮಾಡುವುದು, ಪಾಕ್ ಪ್ರಜೆಗಳಿಗೆ ವೀಸಾ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು, ಪಾಕಿಸ್ತಾನಕ್ಕೆ ಭಾರತೀಯರ ಪ್ರಯಾಣವನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು, ಕರ್ತಾರ್ಪುರ ಕಾರಿಡಾರ್ ಕಾರ್ಯಾಚರಣೆ ತಕ್ಷಣ ಸ್ಥಗಿತಗೊಳಿಸುವುದು ಮತ್ತು ಪಾಕಿಸ್ತಾನದೊಂದಿಗೆ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದರ ಕುರಿತು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Wed, 23 April 25