ರಾಜ್ಯ ಸರ್ಕಾರಿ ನೌಕರರಿಗಾಗಿ ಶೀಘ್ರ ಮಿಲಿಟರಿ ಕ್ಯಾಂಟೀನ್ ಮಾದರಿಯ ಮಳಿಗೆ: ನೌಕರರ ಸಂಘ ಚಿಂತನೆ
ರಾಜ್ಯ ಸರ್ಕಾರಿ ನೌಕರರ ಸಂಘ ಆರಂಭಿಸಲಿರುವ ಮಳಿಗೆಗಳಲ್ಲಿ ನಿವೃತ್ತ ನೌಕರರು ಮತ್ತು ಅವರ ಸಂಗಾತಿಗೆ ಅಗತ್ಯ ವಸ್ತುಗಳು ಮತ್ತು ದಿನಸಿ ಕಡಿಮೆ ದರದಲ್ಲಿ ಸಿಗುತ್ತದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಜೇಬಿಗೆ ಸಮಾಧಾನ ಕೊಡುವ ಸುದ್ದಿಯೊಂದು ಇಲ್ಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೀಘ್ರದಲ್ಲಿಯೇ ಸ್ಥಾಪಿಸಲಿರುವ ಮಳಿಗೆಗಳಲ್ಲಿ ಅತ್ಯಗತ್ಯ ವಸ್ತುಗಳು ಮತ್ತು ದಿನಸಿಯನ್ನು ಶೇ 10ರಿಂದ 60ರ ರಿಯಾಯ್ತಿ ದರದಲ್ಲಿ ಖರೀದಿಸಬಹುದಾಗಿದೆ. ಕರ್ತವ್ಯನಿರತ ಹಾಗೂ ನಿವೃತ್ತ ಸೈನಿಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ರಿಯಾಯ್ತಿ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುತ್ತಿರುವ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ (Canteen Stores Department – CSD) ಮಾದರಿಯಲ್ಲಿಯೇ ಇದೂ ಕಾರ್ಯನಿರ್ವಹಿಸಲಿದೆ. ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್‌ಗಳನ್ನು ಮಿಲಿಟರಿ ಕ್ಯಾಂಟೀನ್ ಎಂದೂ ಕರೆಯಲಾಗುತ್ತದೆ. ಈ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳು, ದಿನಸಿ, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತಿತರ ವಸ್ತುಗಳು ಭಾರೀ ರಿಯಾಯ್ತಿಯಲ್ಲಿ ದೊರೆಯುತ್ತವೆ.
ಪ್ರಸ್ತುತ ಕರ್ನಾಟಕ ಸರ್ಕಾರದಲ್ಲಿ 72 ಇಲಾಖೆಗಳಿದ್ದು, 5.2 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಇಲಾಖೆಗಳು ಸೇರಿದಂತೆ ಹಲವು ಇಲಾಖೆಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗಿಗಳಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘ ಆರಂಭಿಸಲಿರುವ ಮಳಿಗೆಗಳಲ್ಲಿ ನಿವೃತ್ತ ನೌಕರರು ಮತ್ತು ಅವರ ಸಂಗಾತಿಗೆ ಖರೀದಿ ನಡೆಸಲು ಅವಕಾಶ ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ‘ಮೊದಲ ಮಳಿಗೆಯನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗುವುದು. ಫೆ 4ರಂದು ರಾಜ್ಯಮಟ್ಟದ ಸರ್ಕಾರಿ ನೌಕರರ ಸಮ್ಮೇಳನ ಕರೆದಿದ್ದೇವೆ. ಇದೇ ಕಾರ್ಯಕ್ರಮದಲ್ಲಿ ಮಳಿಗೆಯನ್ನೂ ಉದ್ಘಾಟಿಸಲಾಗುವುದು’ ಎಂದು ಅವರು ಹೇಳಿದರು. ಇದೇ ಮಾದರಿಯ ಮಳಿಗೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಆರಂಭಿಸಲಾಗುವುದು ಎಂದು ಅವರು ನುಡಿದರು.
ರಾಜ್ಯ ಸರ್ಕಾರಿ ನೌಕರರಿಗೆ ರಿಯಾಯ್ತಿ ದರದಲ್ಲಿ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಸರ್ಕಾರಿ ಭೂಮಿಯಲ್ಲಿಯೇ ತೆರೆಯಲಾಗುವುದು. ಖಾಸಗಿ ಸಂಸ್ಥೆಗಳು ಅವನ್ನು ನಿರ್ವಹಿಸುತ್ತವೆ ಎಂದು ಷಡಕ್ಷರಿ ಹೇಳಿದರು. ದೊಡ್ಡ ಸಂಖ್ಯೆಯಲ್ಲಿರುವ ನೌಕರರು ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಏಕಕಾಲಕ್ಕೆ ಖರೀದಿಸುವುದರಿಂದ ಅಂಗಡಿಯನ್ನು ನಿರ್ವಹಿಸುವ ಕಂಪನಿಗೂ ಇದರಿಂದ ಹೆಚ್ಚು ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.
ಇಂಥ ಮಳಿಗೆಗಳ ಸ್ಥಾಪನೆಗಾಗಿ ಎಲ್ಲ ಜಿಲ್ಲೆಗಳಲ್ಲಿಯೂ ನಮಗೆ ಭೂಮಿ ಸಿಗುತ್ತಿದೆ. ಬೆಂಗಳೂರಿನಲ್ಲಿ ಇಂಥ 4 ಮಳಿಗೆಗಳನ್ನು ಸ್ಥಾಪಿಸಬೇಕಿದೆ. ಆದರೆ ಭೂಮಿಯ ಲಭ್ಯತೆಯೇ ದೊಡ್ಡಸವಾಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಮನವಿ ಮಾಡುತ್ತೇವೆ. ಜನರು ಓಡಾಡಲು ಸಂಪರ್ಕ ವ್ಯವಸ್ಥೆ ಸುಲಭವಾಗಿರುವ ಸ್ಥಳಗಳಲ್ಲಿ ಮಳಿಗೆ ಸ್ಥಾಪಿಸಲಾಗುವುದು ಎಂದು ಷಡಕ್ಷರಿ ಭರವಸೆ ನೀಡಿದರು.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ