ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ: ಡಿಸಿಎಂ ಡಿಕೆ ಶಿವಕುಮಾರ್ಗೆ ಸಚಿವ ಕೆಎನ್ ರಾಜಣ್ಣ ಖಡಕ್ ತಿರುಗೇಟು
ಸಿದ್ದರಾಮಯ್ಯ ಆಪ್ತ ಸಚಿವರನ್ನು ಉದ್ದೇಶಿಸಿ ಡಿಸಿಎಂ ಡಿಕೆ ಶಿವಕುಮಾರ್ ಭಾನುವಾರ ನೀಡಿದ್ದ ಹೇಳಿಕೆಗೆ ಸಚಿವ ಕೆಎನ್ ರಾಜಣ್ಣ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ. ನಾವು ಸಿಎಂ ಸಿದ್ದರಾಮಯ್ಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಆದರೆ, ಅವರೇ (ಡಿಕೆಶಿ) ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜಣ್ಣ ಹೇಳಿದ್ದಾರೆ.

ಬೆಂಗಳೂರು, ಫೆಬ್ರವರಿ 17: ಸಿಎಂ ಸಿದ್ದರಾಮಯ್ಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದ ಡಿಸಿಎಂ ಡಿಕೆ ಶಿವಕುಮಾರ್ಗೆ ಸಹಕಾರ ಸಚಿವ ಕೆಎನ್ ರಾಜಣ್ಣ ಖಡಕ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಅವರು (ಡಿಕೆ ಶಿವಕುಮಾರ್) ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್ ಆಂತರಿಕ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸುಳಿವು ದೊರೆತಿದೆ.
ನಾನು ಯಾರಿಂದಲೂ ಶಿಸ್ತಿನ ಪಾಠ ಹೇಳಿಸಿಕೊಳ್ಳಬೇಕಿಲ್ಲ: ರಾಜಣ್ಣ
ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನ ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಅದು ಆರೋಪ ಅಲ್ಲ, ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ ಎಂದು ರಾಜಣ್ಣ ಖಡಕ್ ಆಗಿ ಹೇಳಿದರು.
ಡಿಕೆ ಶಿವಕುಮಾರ್ ಜತೆ ವಿಚಾರ ಬೇಧ ಅಷ್ಟೆ: ರಾಜಣ್ಣ
50 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಸತ್ಪರಿಣಾಮ ಬೀರುವಂಥ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವಂತಹ ಮಾತುಗಳನ್ನು ಆಡುವುದಿಲ್ಲ. ನನಗೂ ಡಿಕೆ ಶಿವಕುಮಾರ್ಗೂ ವೈಯುಕ್ತಿಕವಾಗಿ ಏನೂ ಇಲ್ಲ. ವಿಚಾರ ಬೇಧ ಇರಬಹುದು ಅಷ್ಟೆ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ, ಅವರು ಮತ್ತೊಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಎಲ್ಲ ಮಾಡಿದ್ದೇವೆ. ವಿಚಾರ ಭೇದ ಅಷ್ಟೆ, ವೈಯುಕ್ತಿಕವಾಗಿ ಏನೂ ಇಲ್ಲ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದು ರಾಜಣ್ಣ ಹೇಳಿದರು.
ಹೈಕಮಾಂಡ್ ಎಲ್ಲರ ಅಭಿಪ್ರಾಯ ಸಂಗ್ರಹಿಸಲಿ: ರಾಜಣ್ಣ ಆಗ್ರಹ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಹೈಕಮಾಂಡ್ ಏಕಪಕ್ಷೀಯವಾಗಿ ನಿರ್ಧಾರವೇನೂ ಮಾಡಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲೇಬೇಕು ಎಂದು ಆಗ್ರಹಿಸಿದರು. ನಾವು ತಪ್ಪು ಮಾಡಿದ್ರೆ ಮಾತ್ರ ಎಚ್ಚರಿಕೆ ಕೊಡಬೇಕು. ನಾವೇನೂ ತಪ್ಪು ಮಾಡಿಲ್ಲ. ಯಾರು ಕೂಡ ಹೈಕಮಾಂಡ್ ವಿರುದ್ಧ ಇಲ್ಲ ಎಂದರು.
ಜಿಸಿ ಚಂದ್ರಶೇಖರ್ ಯಾರು, ಅವರ ಮಾತಿಗೆ ಯಾಕೆ ಇಷ್ಟು ಮನ್ನಣೆ? ಕೆಪಿಸಿಸಿ ಕಾರ್ಯಾಧ್ಯಕ್ಷ ಅಂದರೆ ಎರಡು ಕೊಂಬು ಇದೆಯಾ? ಶಿಶುಪಾಲ ಅವರೇ, ನಾನು ಶ್ರೀಕೃಷ್ಣ ಎಂದು ರಾಜಣ್ಣ ಹೇಳಿದರು.
ಏನು ಹೇಳಿದ್ದರು ಡಿಕೆ ಶಿವಕುಮಾರ್?
ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬಿತ್ಯಾದಿಯಾಗಿ ಅವರ ಬೆಂಬಲಿಗ ಸಚಿವರು ಕಳೆದ ಕೆಲವು ದಿನಗಳಿಂದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈ ಬಗ್ಗೆ ಭಾನುವಾರ ಜಾಣ್ಮೆಯಿಂದ ತಿರುಗೇಟು ನೀಡಿದ್ದ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರು ನಮ್ಮ ನಾಯಕ. ಅವರು ಎಲ್ಲ ಚುನಾವಣೆಗೂ ಬೇಕು. ಜಿಲ್ಲಾ ಪಂಚಾಯಿತಿಗೂ ಬೇಕು, ತಾಲೂಕು ಪಂಚಾಯಿತಿಗೂ ಬೇಕು, ಅಸೆಂಬ್ಲಿಗೂ ಬೇಕು, ಪಾರ್ಲಿಮೆಂಟಿಗೂ ಬೇಕು. ಅವರು ಕಾಂಗ್ರೆಸ್ನ ನಾಯಕ. ಅವರನ್ನು ಕಾಂಗ್ರೆಸ್ ಪಕ್ಷ 2 ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ದಿನಾ ಬೆಳಗ್ಗೆದ್ದು ಅವರ ಹೆಸರು ಹೇಳಿಕೊಂಡು ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಅದರ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ನಾಯಕ, ಎಲ್ಲಾ ಚುನಾವಣೆಗೆ ಬೇಕು: ಸಿದ್ದು ಹೆಸರು ದುರ್ಬಳಕೆ ಬೇಡ ಎಂದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಹೇಳಿಕೆಗೆ ಇದೀಗ ರಾಜಣ್ಣ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ. ಅಲ್ಲದೆ, ನಾವು ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ, ಬದಲಿಗೆ ಡಿಕೆ ಶಿವಕುಮಾರ್ ಅವರೇ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ