
ಬೆಂಗಳೂರು, (ಆಗಸ್ಟ್ 29): ಆರ್‌ಎಸ್‌ಎಸ್ (RSS) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಪ್ರಕರಣಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್‌ಗೆ ಜಾಮೀನು ಸಿಕ್ಕಿದೆ. RSS ಕಾರ್ಯಕರ್ತ ಎ.ತೇಜಸ್ ಅವರು ನೀಡಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಜನಪತ್ರಿನಿಧಿಗಳ ವಿಶೇಷ ನ್ಯಾಯಾಲವು ಇಬ್ಬರಿಗೂ ಜಾಮೀನು ನೀಡಿ ಆದೇಶಿಸಿದೆ. ತಲಾ 10 ಸಾವಿರ ರೂಪಾಯಿ ವೈಯಕ್ತಿಕ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿದೆ. ಇದರೊಂದಿಗೆ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್‌ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಕಾರ್ಯಕರ್ತರ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಈ ಹಿಂದೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಜುಲೈ 21ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು.
RSS ಕಾರ್ಯಕರ್ತ ಎ. ತೇಜಸ್ ಖಾಸಗಿ ದೂರು ದಾಖಲಿಸಿದ್ದರು. 2025 ಅಕ್ಟೋಬರ್ 14 ರಂದು ಆರ್‌ಎಸ್‌ಎಸ್ ಸದಸ್ಯರ ವಿರುದ್ದ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು. ಮತ್ತೊಂದೆಡೆ ಯೂಟ್ಯೂಬ್ ಚಾನಲ್ನಲ್ಲಿ RSS ಬಗ್ಗೆ ನಲಪಾಡ್ ಅವಹೇಳನಕಾರಿ ಹೇಳಿಕೆ ನೀಡಿದ್ರು. ಈ ಅವಹೇಳನಕಾರಿ ಹೇಳಿಕೆಯಿಂದ ಸಂಘದ ಘನತೆಗೆ ಧಕ್ಕೆಯಾಗಿದೆ ಎಂದು ಬೆಂಗಳೂರಿನ ಸಿದ್ದಾಪುರದ ಎ.ತೇಜಸ್ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು.
ಇತ್ತೀಚಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕಿ ವಿಪಕ್ಷ ಬಿಜೆಪಿಗೆ ಟಾಂಗ್ ನೀಡಿದ್ರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿ ನಡುವಿನ ಸಂಬಂಧವನ್ನು ಬಗ್ಗೆಯೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ರು. ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ ಎಂದು ಲೇವಡಿ ಮಾಡಿರುವ ಗೃಹ ಸಚಿವ, ಬಿಜೆಪಿಯು ಕೇವಲ ಆರ್‌ಎಸ್‌ಎಸ್‌ನ ರಾಜಕೀಯ ಸಾಧನವಾಗಿ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.