ಕೈದಿಗಳ ಕಳ್ಳಾಟಕ್ಕಿಲ್ಲ ಬ್ರೇಕ್: ಪರಪ್ಪನ ಅಗ್ರಹಾರದ ಬಳಿಕ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿಯೂ ಮೊಬೈಲ್‌ಗಳು ಪತ್ತೆ
ಕರ್ನಾಟಕ ಜೈಲುಗಳಲ್ಲಿ ಕೈದಿಗಳ ಕಳ್ಳಾಟ ಮುಂದುವರಿದಿದೆ. ಪರಪ್ಪನ ಅಗ್ರಹಾರದ ನಂತರ ಈಗ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಬ್ಯಾರಕ್ ತಪಾಸಣೆ ವೇಳೆ ಮೊಬೈಲ್‌ಗಳು, ಚಾರ್ಜರ್‌ಗಳು ಪತ್ತೆಯಾಗಿವೆ. ಯಾರೂ ಮಾಲೀಕತ್ವ ಒಪ್ಪಿಕೊಳ್ಳದ ಕಾರಣ 13 ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದು ರಾಜ್ಯದ ಜೈಲು ಭದ್ರತೆಯ ವೈಫಲ್ಯಗಳಿಗೆ ಹಿಡಿದ ಕೈಗನ್ನಡಿಯಂತಿದೆ.

ಹುಬ್ಬಳ್ಳಿ, ಏಪ್ರಿಲ್ 05: ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಭಾರಿ ಸದ್ದು ಮಾಡಿದ್ದ ಹಿನ್ನೆಲೆ ಕಟಿಣ ಕ್ರಮಗಳನ್ನ ಕೈಗೊಳ್ಳಲಾಗಿತ್ತು. ಹೀಗಿದ್ದರೂ ಕಳ್ಳಾಟಕ್ಕೆ ಮಾತ್ರ ಸಂಪೂರ್ಣವಾಗಿ ಬ್ರೇಕ್ ಬಿದ್ದಿಲ್ಲ. ಇದಕ್ಕೆ ಪೂರಕವೆಂಬಂತೆ ಧಾರವಾಡ ಜಿಲ್ಲೆಯ ಜೈಲುಗಳಲ್ಲಿ ಒಂದೊಂದೇ ಕರ್ಮಕಾಂಡ ಬಯಲಾಗುತ್ತಿದೆ. ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಜೈಲಿನ ಬ್ಯಾರಕ್ ತಪಾಸಣೆ ವೇಳೆ ಸ್ಮಾರ್ಟ್ ಫೋನ್ಗಳು ಪತ್ತೆಯಾಗಿವೆ. ಬ್ಯಾರಕ್ ಸಂಖ್ಯೆ 8ರಲ್ಲಿ ಸಿಬ್ಬಂದಿ ಪರೀಕ್ಷೆ ವೇಳೆ ಮೊಬೈಲ್‌ಗಳು, ಚಾರ್ಜರ್, ಕನೆಕ್ಟರ್ಗಳು ಸಿಕ್ಕಿವೆ.
ಇನ್ನು ಪತ್ತೆಯಾಗಿರುವ ಈ ಮೊಬೈಲ್‌ಗಳನ್ನು ಯಾರು ಬಳಸುತ್ತಿದ್ದರು ಎಂಬುದು ಈವರೆಗೆ ಖಾತ್ರಿಯಾಗಿಲ್ಲ. ಇವು ಯಾರಿಗೆ ಸೇರಿದ್ದೆಂದು ಯಾವೊಬ್ಬ ಕೈದಿಯೂ ಒಪ್ಪಿಕೊಳ್ಳದ ಕಾರಣ, ಬ್ಯಾರಕ್‌ನಲ್ಲಿದ್ದ ವಿನೋದ್, ದೀಪಕ್, ನಟರಾಜ, ಅಖೀಬ್, ಕಿರಣ್, ಸಾದಿಕ್, ಮೇಘರ್, ಭಗವಾನ್ ದಾಸ್, ಚರಣಪ್ರಸಾದ್, ವಂಶ, ಮಲ್ಲಿಕ್‌ಜಾನ್, ಅಶೋಕ ಹಾಗೂ ಮಹಾಂತೇಶ ಎಂಬ 13 ವಿಚಾರಣಾಧೀನ ಕೈದಿಗಳ ವಿರುದ್ಧ FIR ದಾಖಲಾಗಿದೆ. ಜೈಲು ಅಧೀಕ್ಷಕ ಶಹಾಬುದ್ದೀನ್ ಕಾಲೇಖಾನ್ ದೂರು ಆಧಿರಿಸಿ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ.
ಇದನ್ನೂ ಓದಿ: ‘ಸ್ಮಶಾನಕ್ಕೆ ಕಳುಹಿಸುತ್ತೇವೆ’; ಮೊಬೈಲ್ ವಶಕ್ಕೆ ಪಡೆಯಲು ಬಂದ ಜೈಲು ಸಿಬ್ಬಂದಿಗೆ ಕೈದಿಗಳ ಜೀವ ಬೆದರಿಕೆ!
ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಹುತೇಕ ಫೋನ್‌ಗಳನ್ನು ಹಾಲಿನ ಕವರ್‌ಗಳಲ್ಲಿ ಮೊಬೈಲ್‌ಗಳನ್ನು ಪ್ಯಾಕ್ ಮಾಡಿ ಕೊಳಚೆ ನೀರು ಹರಿಯುವ ಪೈಪ್‌ಗಳಲ್ಲಿ ಖದೀಮರು ಮರೆಮಾಚಿ ಇಟ್ಟಿದ್ದರು. ಇವನ್ನು ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಆ ಬೆನ್ನಲ್ಲೇ ಜೈಲಿನೊಳಗೆ ಜಾಮರ್ ವ್ಯವಸ್ಥೆ ಇದ್ದರೂ ನೆಟ್‌ವರ್ಕ್ ಸಿಗುತ್ತಿರುವುದರ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಲ್ಲಿ ಜೈಲರ್‌ಗಳು ಹಾಗೂ ವಾರ್ಡರ್‌ಗಳ ಶಾಮೀಲು ಇರುವ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸೂಚಿಸಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ರಾಜ್ಯದ ಮತ್ತೊಂದು ಜೈಲಿನಲ್ಲಿ ಈಗ ಮೊಬೈಲ್‌ಗಳು ಸಿಕ್ಕಿರೋದು, ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಮುಂದುವರಿದಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:31 am, Sun, 5 April 26



