Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್‌: ತನಿಖೆಗೆ ಅರ್ಹವಲ್ಲ ಎಂದ ಲೋಕಾಯುಕ್ತ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ವಿರುದ್ಧ ಮುಡಾ ಹಗರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಈ ಹಗರಣದ ತನಿಖೆ ನಡೆಸಿದ ಮೈಸೂರು ಲೋಕಾಯುಕ್ತ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ವರದಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಕ್ಲೀನ್​ಚಿಟ್ ನೀಡಿದೆ. ಹಾಗಾದ್ರೆ, ವರದಿಯಲ್ಲಿಯಲ್ಲೇನಿದೆ? ದೂರುದಾರ ಸ್ನೇಹಮಯಿಕೃಷ್ಣ ಕೊಟ್ಟ ನೋಟಿಸ್​ನಲ್ಲಿ ಏನಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್‌: ತನಿಖೆಗೆ ಅರ್ಹವಲ್ಲ ಎಂದ ಲೋಕಾಯುಕ್ತ
Muda Scam
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on:Feb 19, 2025 | 4:48 PM

ಮೈಸೂರು, (ಫೆಬ್ರವರಿ 19): ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಮುಡಾ( ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಭೂ ಹಗರಣದ ತನಿಖೆ ಮುಕ್ತಾಯವಾಗಿದ್ದು, ಮೈಸೂರು ಲೋಕಾಯುಕ್ತರು ನ್ಯಾಯಾಲಯಲಕ್ಕೆ ಸಲ್ಲಿಸಲು ಮುಂದಾಗಿದ್ದಾರೆ. ಆದ್ರೆ, ತನಿಖಾ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ಕ್ಲೀನ್​ಚಿಟ್ ನೀಡಲಾಗಿದೆ. ಈ ಬಗ್ಗೆ ಲೋಕಾಯುಕ್ತವು ದೂರುದಾರ ಸ್ನೇಹಮಯಿ‌ಕೃಷ್ಣಗೆ ನೋಟಿಸ್ ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಗೆ ಅರ್ಹವಲ್ಲದ ಪ್ರಕರಣ ಎನ್ನುವುದನ್ನು ತಿಳಿಸಿದೆ. ಅಲ್ಲದೇ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ ರಿಪೋರ್ಟ್‌ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ನೋಟಿಸ್​ನಲ್ಲೇನಿದೆ?

ಇನ್ನು ಪ್ರಕರಣ ತನಿಖೆ ವರದಿ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್​ ಜಾರಿ ಮಾಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ  ಈ  ಪ್ರಕರಣ ತನಿಖೆಗೆ ಅರ್ಹವಲ್ಲ ಎಂದು ತಿಳಿಸಿದೆ.

ತನಿಖಾಧಿಕಾರಿಗಳಿಗೆ ಸಿವಿಲ್ ಸ್ವರೂಪದ್ದೆಂದು ತನಿಖೆ ನಡೆಸಲು ತಕ್ಕುದಲ್ಲವೆಂದು ಸಂಗತಿ ಅಥವಾ ಕಾನೂನಿನ ತಪ್ಪು ತಿಳುವಳಿಕೆಯೆಂದು ಕ್ರಮ ಜರುಗಿಸತಕ್ಕುದಲ್ಲವೆಂದು ಇದರಡಿಯಲ್ಲಿ ತನಿಖೆ ನಡೆಸದೆ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ. ಸಾಕ್ಷ್ಯಾಧಾರಗಳ ಕೊರತೆ ಎಂದು ಕಂಡು ಬಂದಿದೆ. ಹೀಗಾಗಿ ಈ ಪ್ರಕರಣ ತನಿಖೆಗೆ ಅರ್ಹವಲ್ಲ ಎಂದಿದೆ. ಇನ್ನು ಈ ವರದಿಯನ್ನು ವಿರೋಧಿಸುವುದಿದ್ದರೆ ತಾವು ಈ ನೋಟೀಸು ತಲುಪಿದ ಒಂದು ವಾರದೊಳಗಾಗಿ ಮ್ಯಾಜಿಸ್ಟ್ರೇಟರ್ ಎದುರು ಆ ಬಗ್ಗೆ ವಿರೋಧಿಸಬಹುದಾಗಿದೆ ಎಂದು  ತಿಳಿಸಿದೆ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯಗೆ ಬಿಗ್​ ರಿಲೀಫ್​​, ಸ್ನೇಹಮಯಿ ಅರ್ಜಿ ವಜಾ

ಪ್ರಕರಣದ ಆರೋಪಿ 1ರಿಂದ ಆರೋಪಿ 4ರವರೆಗಿನ ವಿರುದ್ಧದ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿರುವುದಿಲ್ಲ. ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 2016ರಿಂದ 2024ರವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನ ನೀಡಿರುವ ಆರೋಪಗಳಿವೆ. ಈ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಅಂತಿಮ ವರದಿ ಕೋರ್ಟ್‌ಗೆ ಸಲ್ಲಿಸುತ್ತೇವೆ ಎಂದು ದೂರುದಾರ ಸ್ನೇಹಮಯಿ‌ ಕೃಷ್ಣಗೆ ನೀಡಿರುವ ನೋಟಿಸ್‌ನಲ್ಲಿ ಲೋಕಾಯುಕ್ತ ಉಲ್ಲೇಖಿಸಿದೆ.

ಲೋಕಾಯುಕ್ತ ವಿರುದ್ಧ ಸ್ನೇಹಮಯಿ ಕೃಷ್ಣ ಆಕ್ರೋಶ

ಮುಡಾ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್‌ ನೀಡಿ ಬಿ ರಿಪೋರ್ಟ್‌ ಸಲ್ಲಿಸಲು ಸಿದ್ಧತೆ ನಡೆಸಿರುವ ಮೈಸೂರು ಲೋಕಾಯುಕ್ತ ಪೊಲೀಸರ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ ರಿಪೋರ್ಟ್‌ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದು, ಇದನ್ನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಹೇಳಿದ್ದಾರೆ. ತನಿಖೆ ಇನ್ನೂ ಬಾಕಿಯಿರುವಾಗಲೇ ಬಿ ರಿಪೋರ್ಟ್‌ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ತನಿಖೆ ಮುಕ್ತಾಯಗೊಳಿಸದೇ ಮಧ್ಯಂತರ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ನಾಚಿಕೆಯಾಗಬೇಕು ಎಂದು ಸ್ನೇಹಮಯಿ ಕೃಷ್ಣ ಕಿಡಿಕಾರಿದ್ದಾರೆ.

ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹೇಳಿದ್ದಿಷ್ಟು

ಈ ಬಗ್ಗೆ ಸಿಎಂ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಪ್ರತಿಕ್ರಿಯಿಸಿದ್ದು, ಯಾವುದೇ ತನಿಖೆಯ ರಿಪೋರ್ಟನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಸಿದಾಗ ದೂರುದಾರರಿಗೆ ನೋಟಿಸ್ ಕೊಡುವುದು ಸಾಮಾನ್ಯ ಪ್ರಕ್ರಿಯೆ. ಈ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ದೂರುದಾರರು ಅವರಿಗೆ ಲೋಕಾಯುಕ್ತ ನೊಟೀಸ್ ನೀಡಿದ್ದಾರೆ. ಅದರ ಅರ್ಥ ತನಿಖೆ ಪೂರ್ಣಗೊಂಡಿದೆ ಎಂದು ನೋಟಿಸ್ ಜಾರಿ ಮಾಡಿದ್ದಾರೆ . ಮುಂದಿನ ಪ್ರಕ್ರಿಯೆಗಳು ಏನಿದ್ದರೂ ಕೂಡ ನ್ಯಾಯಾಲಯದಲ್ಲಿ ನಡೆಯುತ್ತದೆ. ದೂರುದಾರರಿಗೆ ವರದಿ ಪ್ರತಿ ಸಿಕ್ಕಿದ್ಯೋ ಇಲ್ಲವೋ ಗೊತ್ತಿಲ್ಲ ನಾನಂತೂ ನೋಡಿಲ್ಲ. ಮಧ್ಯಂತರ ವರದಿ ಅಂತಿಮ ವರದಿ ಎಂಬ ಪ್ರಶ್ನೆ ಬರುವುದಿಲ್ಲ . ಕ್ರಿಮಿನಲ್ ಇನ್ವೆಸ್ಟಿಗೇಷನ್ ನಲ್ಲಿ ಮಧ್ಯಂತರ ಪೂರ್ಣ ವರದಿ ಎಂಬುದು ಬರುವುದಿಲ್ಲ . ಯಾವುದೇ ತನಿಖೆ ನಡೆದ ನಂತರ ಮುಂದಿನ ತನಿಖೆಗೆ ಅವಕಾಶ ಇರುತ್ತದೆ . ವರದಿ ಸಲ್ಲಿಸಿದಾಗ ಅಂತಿಮ ವರದಿಯೇ ಅಂತಿಮ ವರದಿಯನ್ನೇ ಸಲ್ಲಿಸಿರುತ್ತಾರೆ ಎಂದರು.

ಸಿದ್ದರಾಮಯ್ಯಗೆ ಬಿಗ್​ ರಿಲೀಫ್​

ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ದೂರುದಾರ ಸ್ನೇಹಮಯಿಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇದೀಗ ಲೋಕಾಯುಕ್ತ ಸಹ ಈ ಪ್ರಕರಣ ತನಿಖೆಗೆ ಅರ್ಹವಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಸೇರಿದಂತೆ ಉಳಿದ ಇಬ್ಬರಿಗೂ ರಿಲೀಫ್ ಸಿಕ್ಕಂತಾಗಿದೆ. ಅದರಲ್ಲೂ ಮುಖ್ಯವಾಗಿ ಚುನಾವಣೆ ರಾಜಕೀಯ ಕೊನೆ ಹಂತದಲ್ಲಿ ಇರುವಾಗಲೇ ಈ ಮುಡಾ ಹಗರಣ ಮೈಮೇಲೆ ಬಂದಿದ್ದರಿಂದ ಸಿದ್ದರಾಮಯ್ಯ ಆತಂಕಕೊಂಡಿದ್ದರು. ಆದ್ರೆ, ಇದೀಗ ನಿಟ್ಟುಸಿರುಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:14 pm, Wed, 19 February 25