AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: ಸಿಎಂ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್, ಸಿದ್ದರಾಮಯ್ಯಗೆ ಢವಢವ

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಸೈಟ್‌ ಹಗರಣ ಆರೋಪದ ಕಾನೂನು ಹೋರಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನ ಪ್ರಶ್ನಿಸಿದ ಅರ್ಜಿಯ ಅಂತಿಮ ಹಂತದ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಮುಡಾ ಹಗರಣ: ಸಿಎಂ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್, ಸಿದ್ದರಾಮಯ್ಯಗೆ ಢವಢವ
ಮುಡಾ ಹಗರಣ: ಸಿಎಂ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್, ಸಿದ್ದರಾಮಯ್ಯಗೆ ಢವಢವ
Ramesha M
| Edited By: |

Updated on:Sep 12, 2024 | 7:09 PM

Share

ಬೆಂಗಳೂರು, ಸೆಪ್ಟೆಂಬರ್​​​ 12: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಅರ್ಜಿ ವಿಚಾರಣೆಯನ್ನು ಇಂದು ಹೈಕೋರ್ಟ್​ನಲ್ಲಿ ನಡೆಸಲಾಗಿದೆ. ವಾದಮಂಡನೆ ಮುಕ್ತಾಯವಾಗಿದ್ದು, ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಏನು ತೀರ್ಪು ಬರುತ್ತೆ ಎಂದು ಟೆನ್ಷನ್ ಶುರುವಾಗಿದೆ. ಹಾಗಾದ್ರೆ, ಇಂದು ನಡೆದ ವಾದ ಪ್ರತಿವಾದವೇನು? ಕೋರ್ಟ್ ಕಲಾಪದ ಇನ್‌ಸೈಡ್ ಮಾಹಿತಿ ಇಲ್ಲಿದೆ.

ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ:

ರಾಜ್ಯಪಾಲರು ಅತಿ ವಿರಳ ಸಂದರ್ಭದಲ್ಲಿ ಮಾತ್ರ ವಿವೇಚನಾಧಿಕಾರ ಬಳಸಬೇಕು. ರಾಜ್ಯಪಾಲರು ಜನರಿಂದ ಆಯ್ಕೆಯಾಗಿಲ್ಲ, ನೇಮಕಗೊಂಡಿದ್ದಾರೆ. ಹೀಗಾಗಿ ರಾಜ್ಯಪಾಲರಿಗೆ ಹೆಚ್ಚಿನ ಉತ್ತರದಾಯಿತ್ವ ಇದೆ ಎಂದು ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ತೀರ್ಪು ಉಲ್ಲೇಖಿಸಿದರು. ಈ ವೇಳೆ ರಾಷ್ಟ್ರಪತಿ ಆಳ್ವಿಕೆ ಹೇರಿದ ಪ್ರಕರಣಗಳು 17 ಎ ಕೇಸ್​ಗಿಂತ ಗಂಭೀರವಲ್ಲವೇ? ಆರ್ಟಿಕಲ್ 356 ತೀರ್ಪುಗಳನ್ನು ಸೆ. 17 ಎ ಕೇಸ್​ಗೆ ಉಲ್ಲೇಖಿಸುವುದು ಸೂಕ್ತವೇ ಎಂದು ಜಡ್ಜ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯಗೆ ನಾಳೆ ನಿರ್ಣಾಯಕ ದಿನ, ಹೈಕೋರ್ಟ್‌ನಲ್ಲಿ ಏನಾಗಲಿದೆ ಪ್ರಾಸಿಕ್ಯೂಷನ್ ಭವಿಷ್ಯ?

ರಾಜ್ಯಪಾಲರು 23 ವರ್ಷದ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ರಾಷ್ಟ್ರಪತಿ ಆಳ್ವಿಕೆಗಿಂತ ಇದು ಹೆಚ್ಚು ರಾಜಕೀಯಪ್ರೇರಿತ. ಸೆ.17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡುವ ಹೊಣೆ ರಾಜ್ಯಪಾಲರ ಮೇಲಿದೆ. ಎಲ್ಲಾ ಪ್ರಕರಣಗಳಲ್ಲೂ ಸಚಿವ ಸಂಪುಟ ಸಿಎಂ ಪರ ತಾರತಮ್ಯ ಮಾಡಿದೆ ಎನ್ನಲಾಗದು. ಸಚಿವ ಸಂಪುಟದ ಸಭೆಯಲ್ಲಿ ಮಂತ್ರಿಗಳು ಬೇರೆ ಬೇರೆ ಅಭಿಪ್ರಾಯ ಮಂಡಿಸಬಹುದು ಎಂದಿದ್ದಾರೆ.

ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ಪಾಲಿಸಲೇಬೇಕೆಂದಿಲ್ಲ. ಆದರೆ ಭಿನ್ನ ನಿಲುವಿಗೆ ಕಾರಣ ನೀಡಬೇಕೆಂಬುದು ನಿಮ್ಮ ವಾದವೇ? ಎಂದು ಜಡ್ಜ್ ಕೇಳಿದ್ದಾರೆ. ಸಚಿವ ಸಂಪುಟದ ಶಿಫಾರಸನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸ್ಸು ತಪ್ಪೇಕೆಂದು ಹೇಳಿಲ್ಲ. ಹೀಗಾಗಿ ಕಾರಣವೇ ಹೇಳದೆ ಸಚಿವ ಸಂಪುಟದ ಕ್ರಮ ತಾರತಮ್ಯಪೂರಿತವೆನ್ನಲಾಗದು ಎಂದು ಮನು ಸಿಂಘ್ವಿ ವಾದ ಮಂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರ ಪ್ರೊ.ರವಿವರ್ಮ ಕುಮಾರ್ ವಾದ ಮಂಡನೆ

ಸಿದ್ದರಾಮಯ್ಯ ಮಾತ್ರ ಕಳೆದ ಐವತ್ತು ವರ್ಷಗಳಲ್ಲಿ ಅವಧಿ ಪೂರೈಸಿದ್ದಾರೆ. ಐದು ವರ್ಷಗಳ ನಂತರವೂ ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಜುಜುಬಿ ಸೈಟ್‌ಗೆ ಸಿಎಂ ಹೀಗೆಲ್ಲಾ ಮಾಡುವ ಅಗತ್ಯವಿರಲಿಲ್ಲ. ಅದರ ಬೆಲೆ 55 ರೂ. ಕೋಟಿಯಾಗಿದೆ ಎಂಬುದೇ ಅವರ ತಕರಾರು. 60:40 ಅನುಪಾತಕ್ಕೆ ಅವರ ತಕರಾರಿಲ್ಲ, 50:50 ಅನುಪಾತಕ್ಕೆ ತಕರಾರಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಇಂದು ನಿರ್ಣಾಯಕ ದಿನ: ಹೈಕೋರ್ಟ್‌ನಲ್ಲಿ ಮುಡಾ ಕೇಸ್‌ ವಿಚಾರಣೆ, ಅಂತಿಮ ವಾದ

ಪರಿಹಾರದ ನಿವೇಶನ ಕೊಟ್ಟಿರುವುದು ಸಿದ್ದರಾಮಯ್ಯ ಅಲ್ಲ, ಮುಡಾ ಜನಪ್ರಿಯ ನಾಯಕನ ವಿರುದ್ಧ ರಾಜ್ಯಪಾಲರು ಈ ರೀತಿ ಅನುಮತಿ ನೀಡಬಾರದಿತ್ತು. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಅಸೂಯೆಯಿಂದ ಏನಾದರೂ ಮಾಡಿರಬಹುದು. ಸಂಬಂಧಿಕರು, ಅಧಿಕಾರಿಗಳು ಏನಾದರೂ ಮಾಡಿರಬಹುದು. ಅದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದಾರೆ.

ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಮಂಡನೆ

ಯಾವುದೇ ತನಿಖೆಯ ಆಧಾರವಿಲ್ಲದೇ 17ಎ ಅನುಮತಿಯೇ ತರಾತುರಿಯ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ರಾಜ್ಯಪಾಲರು ಪಾಲಿಸಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿ ಕಾನೂನುಬಾಹಿರವೆಂದು ವಾದಮಂಡಿಸಿದ್ದಾರೆ.

ದೂರುದಾರ ಟಿ.ಜೆ.ಅಬ್ರಹಾಂ ಪರ ರಂಗನಾಥ್ ರೆಡ್ಡಿ ವಾದ ಮಂಡನೆ

ಒಂದೆಡೆ ಕೃಷಿ ಜಮೀನೆಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಮುಡಾ ಜಮೀನು ಒತ್ತುವರಿ ಮಾಡಿದೆ ಎನ್ನುತ್ತಿದ್ದಾರೆ. ಎರಡೆರಡು ರೀತಿಯಲ್ಲಿ ಸಿಎಂ ಪರ ವಕೀಲರು ವಾದಿಸಿದ್ದಾರೆ. ಪ್ರಕ್ರಿಯೆ ಪಾಲಿಸದೇ ಹಣವನ್ನು ಠೇವಣಿ ಇಡುವುದು ಸಾಧ್ಯವಿಲ್ಲ. ದೇವನೂರು ಬಡಾವಣೆಯ ಜಮೀನಿಗೆ ವಿಜಯನಗರದಲ್ಲಿ ಬದಲಿ ನಿವೇಶನ, ಚಿಂತಾಮಣಿಯ ಜಮೀನಿಗೆ ಸದಾಶಿವನಗರದಲ್ಲಿ ನಿವೇಶನ ಕೊಟ್ಟಂತಾಗಿದೆ ಎಂದಿದ್ದಾರೆ.

ಸ್ನೇಹಪ್ರಿಯ ಕೃಷ್ಣ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಂಡನೆ

ದೇವರಾಜು ಎಂಬುವರು ಡಿನೋಟಿಫೈ ಮಾಡುವಂತೆ ಮನವಿ ಮಾಡುತ್ತಾರೆ. ಸರ್ಕಾರಿ ನೌಕರನಾಗಿದ್ದರೂ ಸತ್ಯ ಮರೆಮಾಚಿ ಅರ್ಜಿ ಸಲ್ಲಿಸಿದ್ದಾರೆ. ಡಿನೋಟಿಫೈ ಖರೀದಿ ಮಾಡಿ ಭೂಪರಿವರ್ತನೆ ಮಾಡಲಾಗಿದೆ. 3 ಎಕರೆಗೆ 28 ಸಾವಿರ ಚದರಡಿ ಸಿಗಬೇಕಿತ್ತು, 38 ಸಾವಿರ ಚದರಡಿ ನೀಡಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:33 pm, Thu, 12 September 24