Mysore: ಮೈಸೂರಿನ ಅರಮನೆಯಲ್ಲಿ ಶತಮಾನಗಳಿಂದಲೂ ವಿರಾಜಮಾನವಾಗಿರುವ ಆತ್ಮವಿಲಾಸ ಸಾಲಿಗ್ರಾಮ ಗಣಪನ ಬಗ್ಗೆ ಒಂದಷ್ಟು ತಿಳಿಯೋಣ ಬನ್ನೀ
ಗಣಪನಿಗೆ ಯಾವುದೇ ರೂಪ ನೀಡಿದರು ಆಕರ್ಷಕವಾಗಿ ಕಾಣುತ್ತಾನೆ ಇದರಲ್ಲಿ ಎರಡು ಮಾತಿಲ್ಲ. ಇನ್ನು ಗಣಪನಿಗಿರುವಷ್ಟು ಹೆಸರು ಯಾವ ದೇವರಿಗೂ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನಾನು ಇವತ್ತು ಹೇಳಲು ಹೊರಟಿರುವುದು ಅಪರೂಪದಲ್ಲಿ ಅಪರೂಪದ ಗಣಪನ ಬಗ್ಗೆ. ನನ್ನನ್ನು ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರತ್ಯಕ್ಷವಾಗಿ ನೋಡಿರುವ ನನ್ನೂರ ಹೆಮ್ಮೆಯ ಮೈಸೂರು ಅರಮನೆಯಲ್ಲಿ ವಿರಾಜಮಾನವಾಗಿರುವ ಆತ್ಮವಿಲಾಸ ಗಣಪನ ಬಗ್ಗೆ.
Ganesha Chaturthi 2023: ಈ ಬಾರಿ ಗಣೇಶ ಚತುರ್ಥಿಗೆ ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ವಿಘ್ನ ನಿವಾರಕ ವಿನಾಯಕನನ್ನು ಪೂಜಿಸಿ ಸ್ತುತಿಸಲಾಗಿದೆ. ಮನೆಗಳಲ್ಲಿ, ಮನಗಳಲ್ಲಿ, ಗಲ್ಲಿ, ಗಲ್ಲಿಗಳಲ್ಲಿ ಮೊಹಲ್ಲಾಗಳಲ್ಲಿ, ಮಾಲ್ಗಳಲ್ಲಿ, ಎಲ್ಲಿ ನೋಡಿದರಲ್ಲಿ ಗಣಪನ ವಿವಿಧ ಬಗೆಯ ಮೂರ್ತಿಗಳು ರಾರಾಜಿಸುತ್ತಿವೆ. ಗುಬ್ಬಚ್ಚಿಯಾಕರಾದಿಂದ, ಬೃಹದಾಕಾರದ ಗಣಪ ಮೂರ್ತಿಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ. ಗಣಪ ಒಬ್ಬನೇ ಇಷ್ಟೊಂದು ರೂಪದಲ್ಲಿ ಕಾಣಸಿಗುವ ದೈವ ಎಂದರು ತಪ್ಪಾಗಲಾರದು. ಗಣಪನಿಗೆ ಯಾವುದೇ ರೂಪ ನೀಡಿದರು ಆಕರ್ಷಕವಾಗಿ ಕಾಣುತ್ತಾನೆ ಇದರಲ್ಲಿ ಎರಡು ಮಾತಿಲ್ಲ. ಇನ್ನು ಗಣಪನಿಗಿರುವಷ್ಟು ಹೆಸರು ಯಾವ ದೇವರಿಗೂ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನಾನು ಇವತ್ತು ಹೇಳಲು ಹೊರಟಿರುವುದು ಅಪರೂಪದಲ್ಲಿ ಅಪರೂಪದ ಗಣಪನ ಬಗ್ಗೆ. ನನ್ನನ್ನು ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರತ್ಯಕ್ಷವಾಗಿ ನೋಡಿರುವ ನನ್ನೂರ ಹೆಮ್ಮೆಯ ಮೈಸೂರು ಅರಮನೆಯಲ್ಲಿ ವಿರಾಜಮಾನವಾಗಿರುವ ಆತ್ಮವಿಲಾಸ ಗಣಪನ ಬಗ್ಗೆ.
ಆತ್ಮವಿಲಾಸ ಸಾಲಿಗ್ರಾಮ ಗಣಪ
ಆತ್ಮವಿಲಾಸ ಗಣಪ. ಮೈಸೂರು ಅರಮನೆಯಲ್ಲಿರುವ ವಿಶೇಷವಾದ ಗಣಪ. ಕೆಂಪು ಬಣ್ಣದಲ್ಲಿರುವ ಈ ಗಣಪನನ್ನು ನೋಡುವುದೇ ಒಂದು ಅದೃಷ್ಟ. ಈ ಅಪರೂಪದ ಗಣಪತಿ ಪೋಟೋ ತೆಗೆಯಲು ಸಹಾ ಅವಕಾಶವಿಲ್ಲ. ಬಹಳ ಹಿಂದೆ ಆತ್ಮವಿಲಾಸ ಗಣಪನ ಚಿತ್ರವನ್ನು ನನ್ನ ಆತ್ಮೀಯ ಸ್ನೇಹಿತರೊಬ್ಬರು ಕ್ಲಿಕ್ಕಿಸಿದ್ದರು. ಆತ್ಮವಿಲಾಸ ಗಣಪನ ವಿಗ್ರಹ ಬೃಹದಾಕಾರವಾಗಿದೆ. ಗಣಪನ ಬಣ್ಣ ಕೆಂಪು. ಗಣಪನ ಮೇಲೆ ಆಕರ್ಷಕವಾದ ಅರ್ಧ ಚಂದ್ರಾಕಾರದ ಹಸಿರು ಬಣ್ಣದ ಕಮಾನಿದೆ, ಗಣಪನ ಹಿಂಭಾಗದಲ್ಲಿ ಚಿನ್ನದ ಬಣ್ಣದ ಲೇಪನದಲ್ಲಿ ಸರ್ಪದಂತಹ ಆಕಾರದ ಚಿತ್ತಾರವಿದೆ.
ಅಕ್ಕ ಪಕ್ಕದಲ್ಲಿ ಆಕರ್ಷಕ ಮಂಟಪವಿದೆ. ಆತ್ಮ ವಿಲಾಸ ಗಣಪ ಚತುರ್ಭುಜನಾಗಿದ್ದಾನೆ. ಎಡಗೈನಲ್ಲಿ ಪಾಶ ಹಿಡಿದಿದ್ದಾನೆ. ಬಲಗೈನಲ್ಲಿ ಅಂಕುಶ ಹಿಡಿದಿದ್ದಾನೆ. ಮೂರನೇ ಕೈನಲ್ಲಿ ಮೋದಕ, ನಾಲ್ಕನೇ ಕೈನಲ್ಲಿ ಮುರಿದ ದಂತವನ್ನು ಹಿಡಿದಿದ್ದಾನೆ. ತಲೆಯ ಮೇಲೆ ಚಿನ್ನದ ಬಣ್ಣದ ಕಿರೀಟವಿದೆ. ಹಣೆಯ ತುಂಬಾ ಗಂಧದ ತಿಲಕವಿದೆ. ಅಗಲವಾದ ಕಿವಿಗಳು, ಎರಡು ದಂತದಲ್ಲಿ ಒಂದು ದಂತ ಭಗ್ನವಾಗಿರುವುದು. ಡೊಳ್ಳು ಹೊಟ್ಟೆ. ಹಳದಿ ಬಣ್ಣದ ಹೆಡೆ ಬಿಚ್ಚಿದ ಸರ್ಪ. ಕಾಲುಗಳಲ್ಲಿ ಆಕರ್ಷಕ ಗೆಜ್ಜೆಯಿದೆ. ಸಾಕಷ್ಟು ವರ್ಣಮಯವಾಗಿರುವ ಈ ಆತ್ಮವಿಲಾಸ ಗಣಪನನ್ನು ನೋಡಲು ಎರಡು ಕಣ್ಣು ಸಾಲದು.
ಆತ್ಮವಿಲಾಸ ಗಣಪನಿಗಿದೆ ಶತ ಶತಮಾನದ ಇತಿಹಾಸ – ಬೆಂಕಿಯ ಕೆನ್ನಾಲಿಗೆಗೆ ಸಿಗದೆ ಉಳಿದಿದ್ದೇ ಪವಾಡ
ಆತ್ಮವಿಲಾಸ ಗಣಪನಿಗೆ ಇನ್ನೂರು ವರ್ಷದ ಇತಿಹಾಸವಿದೆ. ಈ ಹಿಂದೆ ಇದೇ ಮೈಸೂರು ಅರಮನೆಯ ಜಾಗದಲ್ಲಿದ್ದ ಗಂಧದ ಅರಮನೆ ನಿರ್ಮಾಣ ಮಾಡಿದಾಗಲೇ ಈ ಆತ್ಮವಿಲಾಸ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತಂತೆ. 18ನೇ ಶತಮಾನದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೈಸೂರಿನ ಗಂಧದ ಅರಮನೆ ಸಂಪೂರ್ಣ ಸುಟ್ಟು ಕರಕಲಾಯಿತಂತೆ. ಅರಮನೆ ಸಂಪೂರ್ಣವಾಗಿ ಸುಟ್ಟು ಕರಕಲಾದರೂ ಈ ಆತ್ಮವಿಲಾಸ ಗಣಪತಿಗೆ ಮಾತ್ರ ಏನು ಆಗಿರಲಿಲ್ಲವಂತೆ. ನಂತರ ಸದ್ಯ ಇರುವ ಅರಮನೆಯನ್ನು ಕಟ್ಟುವಾಗ ಇದೇ ಆತ್ಮವಿಲಾಸ ಗಣಪತಿಯಿಂದಲೇ ಅರಮನೆ ಕಟ್ಟುವ ಕೆಲಸ ಆರಂಭವಾಯಿತಂತೆ. ಇದೇ ವಿಘ್ನ ನಿವಾರಕನಿಗೆ ಪೂಜಿಸಿ, ಪ್ರಾರ್ಥನೆ ಸಲ್ಲಿಸಿ ಆರಂಭಿಸಿದ ಅರಮನೆ ಕಟ್ಟುವ ಕೆಲಸ ಯಾವುದೇ ಅಡೆ, ತಡೆಗಳಿಲ್ಲದೆ ಸಂಪೂರ್ಣವಾಗಿದ್ದು ಈಗ ಇತಿಹಾಸ.
ಇದನ್ನೂ ಓದಿ: Vishwakarma: ಮಹಾನ್ ವಾಸ್ತುಶಿಲ್ಪಿ ವಿಶ್ವಕರ್ಮ ಬಗ್ಗೆ ನಿಮಗೆಷ್ಟು ಗೊತ್ತು!?
ಪವಾಡ ಸದೃಶವಾಗಿ ಉಳಿದ ಆತ್ಮವಿಲಾಸ ಗಣಪತಿ ಎಂದರೆ ಯದುವಂಶದ ಅರಸರಿಗೆ ಅಪಾರ ಭಕ್ತಿ. ತಾವು ಯಾವುದೇ ಕೆಲಸ ಆರಂಭಿಸುವ ಮುನ್ನ ವಿಶೇಷ ದಿನಗಳಲ್ಲಿ, ಹಬ್ಬದ ದಿನಗಳಲ್ಲಿ ಆತ್ಮವಿಲಾಸ ಗಣಪತಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಸುಣ್ಣದ ಗಾರೆ ( ಸುಧೆ ) ಯಿಂದ ಮಾಡಿರುವಂತಹ ಗಣಪತಿ ವಿಗ್ರಹದ ಹೊಟ್ಟೆಯಲ್ಲಿ 12 ಸಾಲಿಗ್ರಾಮಗಳಿವೇ ಅಂತ ಹೇಳಲಾಗುತ್ತದೆ. ಜಗತ್ತಿನ ಬಹಳ ಶ್ರೇಷ್ಠವಾದಂತ, ಪವಿತ್ರವಾದಂತಹ ಗಣಪತಿ ಇದಾಗಿದೆ. ಇಂಹತ ಗಣಪನಿಗೆ ರಾಜ ವಂಶಸ್ಥರು ಪ್ರತಿದಿನ ಶಾಸ್ತ್ರೋಕ್ತವಾಗಿ ಪೂಜೆ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿನ ಅರ್ಚಕರು ಕಳೆದ 5 ತಲೆ ಮಾರುಗಳಿಂದ ಆತ್ಮವಿಲಾಸ ಗಣಪತಿಯ ಪೂಜಾ ಕೈಂಕರ್ಯಗಳ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದಾರೆ. ಪ್ರತಿದಿನ ಬೆಳಗ್ಗೆ ಸಂಜೆ ಆತ್ಮವಿಲಾಸ ಗಣಪತಿಗೆ ಪೂಜೆ ನೆರವೇರಿಸಿ ನೈವೇದ್ಯ ಅರ್ಪಿಸಲಾಗುತ್ತಿದೆ. ಈ ಮೂಲಕ ನಾಡು, ನಾಡಿನ ಜನರು ಹಾಗೂ ಯದುವಂಶಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ