ಮೇಕೆದಾಟುವಿಗೆ ಕಾಂಗ್ರೆಸ್ ತಮಿಳುನಾಡಿನ ಮಿತ್ರರನ್ನು ಒಪ್ಪಿಸಲಿ, ಐದೇ ನಿಮಿಷದಲ್ಲಿ ಮೋದಿ ಒಪ್ಪಿಗೆ ಕೊಡಿಸುವೆ: ಕುಮಾರಸ್ವಾಮಿ ಸವಾಲು
ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯುವಲ್ಲಿ ವಿಫಲವಾಗಿದೆ ಎಂದರು. ಅಲ್ಲದೆ, ಕಾಂಗ್ರೆಸ್ನವರು ಅವರ ಮಿತ್ರಪಕ್ಷವಾದ ತಮಿಳುನಾಡಿನ ಆಡಳಿತ ಪಕ್ಷವನ್ನು ಒಪ್ಪಿಸಿದರೆ ಕೇವಲ ಐದೇ ನಿಮಿಷಗಳಲ್ಲಿ ಪ್ರಧಾನಿ ಮೋದಿವರಿಂದ ಅನುಮೋದನೆ ಕೊಡಿಸುವುದಾಗಿ ಸವಾಲು ಹಾಕಿದರು.

ಮೈಸೂರು, ಜುಲೈ 5: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ಆಡಳಿತಾರೂಢ ಮಿತ್ರ ಪಕ್ಷವನ್ನು ಮೇಕೆದಾಟು ಯೋಜನೆಗೆ (Mekedatu Project) ಒಪ್ಪಿಸಲಿ. ಹಾಗೆ ಮಾಡಿದರೆ, ನಾನು ಐದೇ ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಪ್ಪಿಗೆ ಕೊಡಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಹಳೆಯ ಮಾತಿಗೆ ನಾನು ಈಗಲೂ ಬದ್ಧ. ಕಾಂಗ್ರೆಸ್ ಪಕ್ಷದವರಿಗೆ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ. ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳುನಾಡು ಸರ್ಕಾರವನ್ನು ಧಿಕ್ಕರಿಸಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಅದು ಸಾಧ್ಯವಾಗುತ್ತದೆ. ಕಾಂಗ್ರೆಸ್ ಕೈಯಲ್ಲಿ ಅದು ಸಾಧ್ಯವಿಲ್ಲ ಎಂದರು.
ತಮಿಳುನಾಡು ಸರ್ಕಾರವನ್ನು ಒಪ್ಪಿಸದೆ ಮೇಕೆದಾಟು ಯೋಜನೆಯ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ನವರೇ ವಿನಹ ನಾನಲ್ಲ. ಯೋಜನೆ ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡಿದವರು ಮಾಡಬೇಕು ತಾನೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮೇಕೆದಾಟು ಯೋಜನೆ ಹೆಸರು ಹೇಳಿಕೊಂಡು ಎರಡೂವರೆ ವರ್ಷದಿಂದ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಅಷ್ಟೇ. ಸುಮ್ಮನೆ ನನ್ನ ಮೇಲೆ ಜವಾಬ್ದಾರಿ ಹೊರಿಸಿದರೆ ನಾನು ಹೇಗೆ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಕುಮಾರಸ್ವಾಮಿ ನೇತೃತ್ವದ ಸಭೆಗೆ ಜಿಟಿ ದೇವೇಗೌಡ ಗೈರು
ಮೈಸೂರಿನಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ದಿಶಾ ಸಭೆ ನಡೆಯಿತು. ಇದಕ್ಕೆ ಕಾಂಗ್ರೆಸ್ ಶಾಸಕರು ಗೈರಾದರು. ಪಕ್ಷದ ವರಿಷ್ಠರ ಬಗ್ಗೆ ಮುನಿಸಿಕೊಂಡಿರುವ ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ಕೂಡ ಗೈರಾದರು. ಮೈಸೂರು ಜಿಲ್ಲಾ ಪಂಚಾಯತ್ ಕಚೇರಿಯ ಮುಖ್ಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಶಾಸಕ ಶ್ರೀವತ್ಸ, ಜೆಡಿಎಸ್ ಶಾಸಕ ಜಿಟಿ ಹರೀಶ್ ಗೌಡ, ಮಾಜಿ ಶಾಸಕ ಹಾಗೂ ದಿಶಾ ಸಮಿತಿ ನಾಮನಿರ್ದೇಶಿತ ಸದಸ್ಯ ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತಿ ಸಿಇಒ ಯುಕೇಶ್ ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಸಿಪಿ ಸುಂದರರಾಜ್ ಸೇರಿದಂತೆ ಅಧಿಕಾರಿಗಳು ಭಾಗಿಯಾದರು.
ಚಲುವರಾಯಸ್ವಾಮಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು
ಕುಮಾರಸ್ವಾಮಿ ಕೇವಲ ಸಂಸದರ ಅನುದಾನ ತಂದಿದ್ದಾರೆ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಹೆಚ್ಡಿಕೆ ತಿರುಗೇಟು ನೀಡಿದರು. ನಾನು ಕೇವಲ ಸಂಸದರ ಅನುದಾನ ಅಷ್ಟೇ ಅಲ್ಲ, ವಿಶೇಷ ಅನುದಾನಗಳನ್ನೇ ತಂದಿದ್ದೇನೆ. ಮಾಹಿತಿ ಇಲ್ಲದಿದ್ದರೆ ಮಾತನಾಡಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಬೇಗ ನಿಲುವು ಪ್ರಕಟಿಸಲಿ ಅಂತ ಮನವಿ ಮಾಡಲಾಗಿದೆ: ಶಿವಕುಮಾರ್
ನಾನು ದೇಶದ ಹಲವಾರು ಭಾಗಗಳಿಂದ ಎಷ್ಟು ಅನುದಾನ ತಂದಿದ್ದೇನೆ ಎಂಬುದನ್ನು ಮೊದಲು ಚಲುವರಾಯಸ್ವಾಮಿ ತಿಳಿದುಕೊಳ್ಳಲಿ. ನಾನು ಸಂಸದರ ಅನುದಾನ ಅಲ್ಲದೆ ಸಿಎಸ್ಆರ್ ಅನುದಾನ ಕೂಡ ತಂದಿದ್ದೇನೆ ಎಂಬುದು ಮಂಡ್ಯ ಜನತೆಗೆ ಗೊತ್ತಿದೆ. ಅವರು ಸಭೆಗಳಿಗೆ ಕರೆದಾಗ ನನಗೆ ಪೂರ್ವ ನಿಯೋಜಿತ ಸಭೆಗಳು ಇರುತ್ತವೆ, ಹಾಗಾಗಿ ನನಗೆ ಹೋಗಲು ಆಗಿಲ್ಲ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.