ಅಂಬಾರಿ ಹಾಗೂ ಸಿಂಹಾಸನ ನಮ್ಮ ಖಾಸಗಿ ಸ್ವತ್ತು: ವಿವಾದದ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ!

ಮೈಸೂರು ಅರಮನೆ ಹಾಗೂ ಅಂಬಾರಿ ನಮ್ಮದೇ ಖಾಸಗಿ ಸ್ವತ್ತು ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ದಸರಾ ವೇಳೆ ಧಾರ್ಮಿಕ ಆಚರಣೆಗೆ ಪೊಲೀಸ್ ನಿರ್ಬಂಧ ಹಾಗೂ ಅಡಚಣೆ ಉಂಟಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅರಮನೆ ಮರಳಿಸಲು ಕೋರ್ಟ್ ಆದೇಶವಿದ್ದರೂ ಸರ್ಕಾರ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು. ಜೊತೆಗೆ, ವಿವಾದ ಬಗೆಹರಿಸಿಕೊಳ್ಳಲು ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಾವು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಅಂಬಾರಿ ಹಾಗೂ ಸಿಂಹಾಸನ ನಮ್ಮ ಖಾಸಗಿ ಸ್ವತ್ತು: ವಿವಾದದ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ!
ರಾಜಮಾತೆ ಪ್ರಮೋದಾದೇವಿ ಒಡೆಯರ್
Edited By:

Updated on: Nov 04, 2026 | 1:04 PM

ಮುಖ್ಯಾಂಶಗಳು

  • ಅಂಬಾರಿ ಹಾಗೂ ಸಿಂಹಾಸನ ನಮ್ಮದೇ ಖಾಸಗಿ ಸ್ವತ್ತು ಎಂದು ಸ್ಪಷ್ಟನೆ.
  • ಅರಮನೆ ಮರಳಿಸಲು ಕೋರ್ಟ್ ಆದೇಶಿಸಿದ್ದರೂ ಸರ್ಕಾರ ಜಾರಿಗೆ ತಂದಿಲ್ಲ
  • ಪೊಲೀಸ್ ನಿರ್ಬಂಧದ ವಿರುದ್ಧ ಅಸಮಾಧಾನ, ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧತೆ.

ಮೈಸೂರು, ನವೆಂಬರ್ 04: ಮೈಸೂರು ದಸರಾ ಆಚರಣೆ ಹಾಗೂ ಅರಮನೆ ಸಂಪ್ರದಾಯಗಳಿಗೆ ಅಡಚಣೆ ಉಂಟಾಗಿದೆ ಎಂಬ ವಿವಾದದ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಅರಮನೆ ಮತ್ತು ಖಾಸಗಿ ಆಸ್ತಿಗಳ ಬಗ್ಗೆ ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ. ಅಂಬಾರಿ ಹಾಗೂ ಸಿಂಹಾಸನವು ಅರಮನೆ ಸ್ವಾಧೀನ ಕಾಯ್ದೆಗೆ ಒಳಪಡದ ಸಂಪೂರ್ಣ ಖಾಸಗಿ ಸ್ವತ್ತಾಗಿದ್ದು, ಹಿಂದೆಯೂ ನಮ್ಮ ಸುಪರ್ದಿಯಲ್ಲೇ ಇತ್ತು, ಮುಂದೆಯೂ ನಮ್ಮದಾಗಿಯೇ ಇರಲಿದೆ ಎಂದು ಸ್ಪಪಡಿಸಿದ್ದಾರೆ. 1947ರಲ್ಲಿಯೇ ಖಾಸಗಿ ಸ್ವತ್ತುಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದು, 1951ರಲ್ಲಿ ವಿ.ಪಿ. ಮೆನನ್ ಅವರು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ ಎಂದರು.

30 ದಿನಗಳಲ್ಲಿ ಅರಮನೆ ಮರಳಿಸಲು ಕೋರ್ಟ್ ಆದೇಶಿಸಿದ್ದರೂ ಜಾರಿಯಾಗಿಲ್ಲ!

ಜಯಚಾಮರಾಜ ಒಡೆಯರ್ ನಿಧನದ ಬಳಿಕ 8 ಕೋಟಿ ರೂ.ಗೂ ಅಧಿಕ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬಂದಾಗ, ಅರಮನೆ ನೋಡಿಕೊಳ್ಳುವುದಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದದಂತೆ ನಡೆದುಕೊಳ್ಳದ ಕಾರಣ ನಾವು ಕೋರ್ಟ್ ಮೊರೆ ಹೋಗಿದ್ದು, 30 ದಿನಗಳಲ್ಲಿ ಅರಮನೆ ಮರಳಿಸುವಂತೆ ಕೋರ್ಟ್ ಆದೇಶಿಸಿದ್ದರೂ ಸರ್ಕಾರ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳಿಗೆ ನಮ್ಮ ಖಾಸಗಿ ಆಸ್ತಿಗಳ ಬಗ್ಗೆ ಸರಿಯಾದ ಓದು ಹಾಗೂ ಮಾಹಿತಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಮಾತೆ ಏನಂದ್ರು? ವೀಡಿಯೋ ನೋಡಿ

YouTube video player

ಪೊಲೀಸ್ ನಿರ್ಬಂಧ ಹಾಗೂ ಕರ್ತವ್ಯಲೋಪದ ವಿರುದ್ಧ ಅಸಮಾಧಾನ

ದಸರಾ ಸಂದರ್ಭದಲ್ಲಿ ಪೊಲೀಸರ ಅತಿಯಾದ ನಿರ್ಬಂಧದಿಂದ ಧಾರ್ಮಿಕ ವಿಧಿವಿಧಾನಗಳಿಗೆ ತೊಂದರೆಯಾಗಿದೆ ಎಂದ ಅವರು, ಬ್ರಹ್ಮಪುರಿ ಗೇಟ್ ಬಳಿ ಕರ್ತವ್ಯ ಲೋಪ ಎಸಗಿರುವ ಎಸಿಪಿ ಚಂದ್ರಶೇಖರ್ ವಿರುದ್ಧ ಕ್ರಮವಾಗಬೇಕು ಎಂದರು. ಜಟ್ಟಿ ಕಾಳಗ ಹಾಗೂ ಪಟ್ಟದ ಕತ್ತಿಯಿಂದ ಕುಂಬಳಕಾಯಿ ಕತ್ತರಿಸುವುದು ನಮ್ಮ ಪರಂಪರೆಯ ಧಾರ್ಮಿಕ ಆಚರಣೆಯಾಗಿದ್ದು, ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು. ಅಂಬಾರಿ ಮೆರವಣಿಗೆಗೆ ಸರ್ಕಾರ ಯಾವುದೇ ‘ಬಾಡಿಗೆ’ ನೀಡುವುದಿಲ್ಲ, ಬದಲಿಗೆ ಗೌರವಧನ (ರಾಯಲ್ಟಿ) ನೀಡುತ್ತದೆ ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ, ಮುಖ್ಯಮಂತ್ರಿಗಳು ಹಾಗೂ ಸಚಿವರು ಈ ಕುರಿತು ಮಾತನಾಡಲು ಬಯಸಿದರೆ, ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಾವು ಸಂಪೂರ್ಣ ಸಿದ್ಧವಿರುವುದಾಗಿ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us