ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರೌಂಡ್ಸ್: ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ, ಮೊಳಗಿತು ಮುಂದಿನ ಸಿಎಂ ಘೋಷಣೆ
ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಗ್ರಾಮಸ್ಥರು ಘೋಷಣೆಗಳನ್ನು ಕೂಗಿದರು.

ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ (ಸೆ 26) ವರುಣಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಗ್ರಾಮಸ್ಥರು ಘೋಷಣೆಗಳನ್ನು ಕೂಗಿದರು. ನಂಜನಗೂಡಿನ ಕಾರ್ಯಗ್ರಾಮದಲ್ಲಿ ಅಂಬೇಡ್ಕರ್ ಭವನ ಹಾಗೂ ಪುತ್ಥಳಿಯನ್ನು ಸಿದ್ದರಾಮಯ್ಯ ಅನಾವರಣಗೊಳಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಡಾ.ತಿಮ್ಮಯ್ಯ ಇತರರು ಪಾಲ್ಗೊಂಡಿದ್ದರು.
ಚಿಕ್ಕಹೊಮ್ಮ ಗ್ರಾಮದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು ಕೈಹಿಡಿಯಲಿಲ್ಲ. ಅದೇ ನಾನು ವರುಣಾ ಕ್ಷೇತ್ರದಲ್ಲಿ ನಿಂತಿದ್ದರೆ ಕೈಹಿಡಿಯುತ್ತಿದ್ದರು. ನನ್ನನ್ನು ಗೆಲ್ಲಿಸಿ ಸಿಎಂ ಮಾಡಿದ್ದು ವರುಣಾ ಕ್ಷೇತ್ರದ ಜನತೆ. ವರುಣಾ ವಿಧಾನಸಭಾ ಕ್ಷೇತ್ರದ ಜನರ ಋಣ ನನ್ನ ಮೇಲಿದೆ ಎಂದು ನೆನಪಿಸಿಕೊಂಡರು.
ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನಪಿಸಿಕೊಂಡ ಅವರು, ನನ್ನನ್ನು 2 ಬಾರಿ ಶಾಸಕನನ್ನಾಗಿ ಮಾಡಿದ್ದಿರಿ. ಆದರೆ ಕೊನೆಯ ಬಾರಿ ನಿಲ್ಲೋಣ ಎಂದು ಕ್ಷೇತ್ರದಿಂದ ಸ್ಪರ್ಧಿಸಿದೆ. ಬಿಜೆಪಿ, ಜೆಡಿಎಸ್ನವರು ಸೇರಿಕೊಂಡು ನನ್ನನ್ನು ಸೋಲಿಸಿದ್ದರು. ಹಾಗಾಗಿ ನಾನು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು. ಬಾದಾಮಿ ಕ್ಷೇತ್ರದ ಜನತೆ ನನ್ನ ಕೈಹಿಡಿದು ಗೆಲ್ಲಿಸಿದರು ಎಂದು ನೆನಪಿಸಿಕೊಂಡರು.
ಮತ್ತೊಮ್ಮೆ ವರುಣಾ ಕ್ಷೇತ್ರದಲ್ಲಿಯೇ ಸ್ಪರ್ಧಿಸುವಂತೆ ಜನರು ಕೇಳುತ್ತಿದ್ದಾರೆ. ಬಾದಾಮಿ ಕ್ಷೇತ್ರದ ಜನರು ಅಲ್ಲಿಂದಲೇ ಸ್ಪರ್ಧಿಸುವಂತೆ ಹೇಳುತ್ತಾರೆ. ಕೋಲಾರ, ಚಾಮರಾಜಪೇಟೆ ಕ್ಷೇತ್ರದವರು ಒತ್ತಾಯ ಮಾಡುತ್ತಿದ್ದಾರೆ ಎಂದರು. ಡಾ.ಯತೀಂದ್ರ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಅಲ್ವಾ ಎಂದು ಕ್ಷೇತ್ರದ ಜನರಿಗೆ ಪುತ್ರ ಹಾಗೂ ಶಾಸಕ ಡಾ.ಯತೀಂದ್ರ ಬಗ್ಗೆ ಪ್ರಶ್ನೆ ಕೇಳಿದರು.
2023ಕ್ಕೆ ನಮ್ಮ ಸರ್ಕಾರ ಬರುವ ಎಲ್ಲಾ ವಾತಾವರಣ ಇದೆ. ಮೋದಿ ಪ್ರಧಾನಿಯಾದಾಗಿನಿಂದ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಇವರ ಮನೆ ಹಾಳಾಗ ಇವರು ಹೊಸ ಮನೆ ಕಟ್ಟಿಸಿಕೊಟ್ಟಿಲ್ಲ. ನಾವು ಕೊಟ್ಟ ಮನೆಗೂ ದುಡ್ಡು ಕೊಟ್ಟಿಲ್ಲ. ಜನರ ಹಣ ಲೂಟಿ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಪರ್ಸೆಂಟ್ ಕಮಿಷನ್ ಬಗ್ಗೆ, ಜಾತಿ ಬಗ್ಗೆ ಹೇಳಿದರೆ ಜಾತಿಯ ಪ್ರಸ್ತಾಪ ಮಾಡುತ್ತಾರೆ. ಎಂಜಲು ತಿಂದ ಮೇಲೆ ಎಂಜಲೆ, ಯಾರು ತಿಂದ್ರು ಎಂಜಲೆ. ನಾನು ತಿಂದರೂ ಅಥವಾ ಇನ್ನೊಬ್ಬ ತಿಂದರೂ ಅದು ಎಂಜಲು ತಾನೇ ಎಂದು ಚಿಕ್ಕಹೊಮ್ಮದಲ್ಲಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಮ್ಮ ಶಾಸಕರನ್ನ ಕೊಂಡುಕೊಂಡು ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಇದೀಗ ಅವರನ್ನು ತೆಗೆದು ಹಾಕಿದ್ದಾರೆ. ಇವರು ಕೆಲಸ ಮಾಡುತ್ತಿಲ್ಲ. ಲೂಟಿ ಮಾಡಿಕೊಂಡು ಜನರಿಗೆ ಟೋಪಿ ಹಾಕಿಕೊಂಡು ಇದ್ದಾರೆ ಎಂದು ದೂರಿದರು. ಚಿಕ್ಕಹೊಮ್ಮ ಗ್ರಾಮದ ಕೆರೆಗೆ ಪುತ್ರ ಡಾ.ಯತೀಂದ್ರ ಜೊತೆ ಬಾಗಿನ ಅರ್ಪಿಸಿದರು.
ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ಗೆ ಸೋಲು ಎಂದು ಸಿಎಂ ಬೊಮ್ಮಾಯಿ ಹೇಳಿರುವುದನ್ನು ಸಿದ್ದರಾಮಯ್ಯ ಖಂಡಿಸಿದರು. ಮೋದಿ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಗೆದ್ದಿದೆಯಾ? ಪಂಜಾಬ್, ತೆಲಂಗಾಣ, ಕೇರಳದಲ್ಲಿ ಬಿಜೆಪಿ ಸೋತಿಲ್ವಾ? ಅವರು ಕೂಡ ಸೋಲ್ತಾರೆ. ಇದು ಕೇವಲ ರಾಜಕಾರಣಕ್ಕಾಗಿ ಹೇಳುತ್ತಿರುವುದು ಎಂದು ಕಿಡಿಕಾರಿದರು.
‘ಪೇ ಸಿಎಂ’ ಕ್ಯಾಂಪೇನ್ ಡರ್ಟಿ ಪಾಲಿಟಿಕ್ಸ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡರ್ಟಿ ಪಾಲಿಟಿಕ್ಸ್ ಮಾಡುವುದು ಸಂಘ ಪರಿವಾರದವರು. ನಾವು ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿಯವರು ರಾಜಕಾರಣದ ಉದ್ದೇಶದಿಂದ ಹೀಗೆ ಹೇಳುತ್ತಾರೆ. ಕಾಂಗ್ರೆಸ್ನವರು ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಮಹಾತ್ಮಗಾಂಧಿ ಕೊಂದವರನ್ನು ಇವರು ಆರಾಧಿಸುತ್ತಾರೆ. ಗಣೇಶ ಮೆರವಣಿಗೆಯಲ್ಲಿ ಗೋಡ್ಸೆ ಫೋಟೋ ಇಡುತ್ತಾರೆ. ಇವರಿಗೆ ಏನು ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಪಾಪ ಇವರಿಗೆ ಡರ್ಟಿ ಪಾಲಿಟಿಕ್ಸ್ ಅಂದರೆ ಗೊತ್ತಿಲ್ಲ. ಭ್ರಷ್ಟಾಚಾರ ಮಾಡ್ತಿದ್ದೀರ ಅನ್ನೋದು ಡರ್ಟಿ ಪಾಲಿಟಿಕ್ಸ್ ಆಗುತ್ತದೆಯೇ ಎಂದು ಕೇಳಿದರು.




