AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ: ಬೆಳಿಗ್ಗೆಯಿಂದ ಬಲಿ ಸಂಖ್ಯೆ ಭಾರಿ ಏರಿಕೆ, ಕನ್ನಡಿಗರ ರಕ್ಷಣೆಗೆ ಬಿರುಸಿನ ಕ್ರಮ

ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಿಂದ 547 ಮಂದಿ ಮೃತಪಟ್ಟು, 1000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ದುರಂತದಲ್ಲಿ ಕನಿಷ್ಠ 17 ಕನ್ನಡಿಗರು ಕಣ್ಮರೆಯಾಗಿದ್ದು, ಅವರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ನಾಪತ್ತೆಯಾದವರ ಕುಟುಂಬಗಳಿಗೆ ಸಹಾಯವಾಣಿ ಸೌಲಭ್ಯವನ್ನೂ ಒದಗಿಸಲಾಗಿದೆ.

ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ: ಬೆಳಿಗ್ಗೆಯಿಂದ ಬಲಿ ಸಂಖ್ಯೆ ಭಾರಿ ಏರಿಕೆ, ಕನ್ನಡಿಗರ ರಕ್ಷಣೆಗೆ ಬಿರುಸಿನ ಕ್ರಮ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 28, 2026 | 8:25 PM

Share

ಕಠ್ಮಂಡು, ಆ.28: ನೇಪಾಳದಲ್ಲಿ ಉಂಟಾಗಿರುವ ಏಕಾಏಕಿ ಭೀಕರ ಪ್ರವಾಹ ಹಾಗೂ ಜಲಪ್ರಳಯದಿಂದಾಗಿ (Nepal Flash Floods) ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿದೆ. ಪರ್ವತ ಪ್ರದೇಶಗಳಿಂದ ಹರಿದುಬಂದ ಕೆಸರು ಮಿಶ್ರಿತ ಪ್ರವಾಹದ ನೀರಿಗೆ ನೂರಾರು ಕಟ್ಟಡಗಳು, ರಸ್ತೆಗಳು ಜಲಾವೃತಗೊಂಡಿದ್ದು, ಮೃತರ ಸಂಖ್ಯೆ ಬರೋಬ್ಬರಿ 547ಕ್ಕೆ ಏರಿಕೆಯಾಗಿದೆ. ವಿದೇಶಿಯರು ಸೇರಿದಂತೆ ಇನ್ನೂ 1,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಭೋಟೆಕೋಶಿ ನದಿಯ ನೀರಿನ ಮಟ್ಟ ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇಪಾಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮತ್ತೆ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ. ಪ್ರವಾಹದಲ್ಲಿ ಸಿಲುಕಿರುವವರ ಪೈಕಿ ಕನಿಷ್ಠ 17 ಕನ್ನಡಿಗರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಐವರು ಪ್ರವಾಸಿಗರು:

ಬೆಂಗಳೂರಿನಿಂದ ತೆರಳಿದ್ದ ಐವರು ಪ್ರವಾಹದಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಅಭಯ ನೀಡಿದ್ದಾರೆ.

ಇಶಾ ಫೌಂಡೇಶನ್ ತಂಡದ 80 ಮಂದಿ ನಾಪತ್ತೆ:

ಇಶಾ ಫೌಂಡೇಶನ್ ಮೂಲಕ ತೆರಳಿದ್ದ 80 ಮಂದಿಯ ಪ್ರವಾಸಿಗರ ತಂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ತಂಡದಲ್ಲಿದ್ದ ಧಾರವಾಡ ಮೂಲದ ಆಸ್ಟ್ರೇಲಿಯಾ ನಿವಾಸಿ ರಾಕೇಶ್ ನಾಯಕ್ ಎಂಬುವವರು ಬೆಳಗಿನ ಜಾವ 3.30ಕ್ಕೆ ಕರೆ ಮಾಡಿದ್ದು, ಬಳಿಕ ಸಂಪರ್ಕ ಕಡಿತಗೊಂಡಿದೆ.

ಕಲಬುರಗಿ ಮೂಲದವರ ರಕ್ಷಣೆ, ಬೆಳಗಾವಿಯ ಇಬ್ಬರು ನಾಪತ್ತೆ:

ಕಲಬುರಗಿಯ ಚಿಂಚೋಳಿ ಮೂಲದ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಹಾವೇರಿ ರಟ್ಟಿಹಳ್ಳಿ ತಾಲೂಕಿನ 15 ಮಂದಿ ಸುರಕ್ಷಿತವಾಗಿದ್ದಾರೆ. ಬೆಳಗಾವಿ ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ.

ಕೇಂದ್ರ-ರಾಜ್ಯ ಸರ್ಕಾರಗಳ ಜಂಟಿ ಕಾರ್ಯಾಚರಣೆ:

ಕೇಂದ್ರ ವಿದೇಶಾಂಗ ಇಲಾಖೆ (MEA) ಹಾಗೂ ನೇಪಾಳ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಗೃಹ ಸಚಿವರು ತಿಳಿಸಿದ್ದು, ಅಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ತುರ್ತು ಕ್ರಮ ವಹಿಸಲಾಗಿದೆ.

ಇದನ್ನೂ ಓದಿ: ನೇಪಾಳ ಪ್ರವಾಹದಲ್ಲಿ ಕನ್ನಡಿಗರಿಗೆ ಆಘಾತ: 17 ಮಂದಿ ಸಂಪರ್ಕಕ್ಕೆ ಸಿಗದೆ ಆತಂಕ

ದಾವಣಗೆರೆ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ:

ನೇಪಾಳದಲ್ಲಿ ಸಿಲುಕಿರುವ ದಾವಣಗೆರೆ ಹಾಗೂ ಇತರ ಜಿಲ್ಲೆಗಳ ನಾಗರಿಕರ ನೆರವಿಗಾಗಿ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಹಾಯವಾಣಿ ತೆರೆದಿದ್ದಾರೆ. ಸಂಕಷ್ಟದಲ್ಲಿರುವ ಅಥವಾ ನಾಪತ್ತೆಯಾಗಿರುವ ವ್ಯಕ್ತಿಯ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಕೊನೆಯ ಬಾರಿ ಸಂಪರ್ಕಿಸಿದ ವಿವರಗಳನ್ನು ಈ ಸಂಖ್ಯೆಗಳಿಗೆ ನೀಡಿ ನೆರವು ಪಡೆಯಬಹುದು.

ಜಿಲ್ಲಾಧಿಕಾರಿ (DC) ಮೊಬೈಲ್: 7259700555

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮೊಬೈಲ್: 9480803201

ಕಚೇರಿ ಸಹಾಯವಾಣಿ: 9060798768

ತುಮಕೂರು ಭೇಟಿ ವೇಳೆ ನೇಪಾಳ ದುರಂತದ ಬಗ್ಗೆ ಕಂಬನಿ ಮಿಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, “ನೂರಾರು ವರ್ಷಗಳಲ್ಲಿ ಇಂತಹ ದುರಂತ ನಡೆದಿಲ್ಲ, ಭಾರತೀಯರನ್ನು ಕರೆತರಲು ಕೇಂದ್ರ-ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ” ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us