ಡಿಕೆ ಶಿವಕುಮಾರ್​ಗೆ ಪಟ್ಟಾಭಿಷೇಕದ ತಯಾರಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಡಿಸಿಎಂ

ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ, ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರ ಪಟ್ಟಾಭಿಷೇಕ ಪ್ರಕ್ರಿಯೆ ಆರಂಭವಾಗಿದ್ದು, ಪ್ರಮಾಣವಚನದ ಮುಹೂರ್ತ ಹಾಗೂ ಸಂಪುಟ ರಚನೆ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲು ಉಭಯ ನಾಯಕರು ದೆಹಲಿಗೆ ಧಾವಿಸಿದ್ದಾರೆ. ದೆಹಲಿಯಲ್ಲಿ ಇಂದು ಸುದೀರ್ಘ ಸಭೆಗಳು ನಡೆಯುವ ಸಾಧ್ಯತೆ ಇದೆ.

ಡಿಕೆ ಶಿವಕುಮಾರ್​ಗೆ ಪಟ್ಟಾಭಿಷೇಕದ ತಯಾರಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಡಿಸಿಎಂ
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್
Image Credit source: tv9
Edited By:

Updated on: May 29, 2026 | 6:54 AM

ಬೆಂಗಳೂರು, ಮೇ 29: ಕರ್ನಾಟಕ ಕಾಂಗ್ರೆಸ್ (Congress) ಕೋಟೆಯಲ್ಲಿ ಕೊನೆಗೂ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆಬಿದ್ದಿದ್ದು, ರಾಜ್ಯ ರಾಜಕೀಯ ಚಟುವಟಿಕೆಗಳು ಈಗ ದೆಹಲಿ ಮಟ್ಟಕ್ಕೆ ಶಿಫ್ಟ್ ಆಗಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ರಾಜೀನಾಮೆ ನೀಡುತ್ತಿದ್ದಂತೆಯೇ, ನೂತನ ಮುಖ್ಯಮಂತ್ರಿಯಾಗಿ ಉಪಮುಖ್ಯಮಂತ್ರಿ, ಕನಕಪುರ ಬಂಡೆ ಡಿಕೆ ಶಿವಕುಮಾರ್ (DK Shivakumar) ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಬುಧವಾರ ನಡೆದ ಸಚಿವರ ಉಪಾಹಾರ ಕೂಟದಲ್ಲೇ ಸಿದ್ದರಾಮಯ್ಯ ಅವರು, ‘ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಆಗಲಿದ್ದಾರೆ’ ಎಂದು ತಮ್ಮ ಸಹೋದ್ಯೋಗಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ, ನೂತನ ಸಚಿವ ಸಂಪುಟ ರಚನೆ ಹಾಗೂ ಪ್ರಮಾಣವಚನದ ಮುಹೂರ್ತ ನಿಗದಿಪಡಿಸುವ ಸಲುವಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಹೈಕಮಾಂಡ್ ಮಟ್ಟದಲ್ಲಿ ಗ್ರೀನ್ ಸಿಗ್ನಲ್.
  • ನೂತನ ಮುಖ್ಯಮಂತ್ರಿಯೊಂದಿಗೆ 8 ರಿಂದ 10 ಸಚಿವರ ಪ್ರಮಾಣವಚನಕ್ಕೆ ಪ್ಲಾನ್.
  • ಜ್ಯೋತಿಷಿ ದ್ವಾರಕನಾಥ್ ಅವರಿಂದ 3 ಮುಹೂರ್ತ ಪಡೆದ ಡಿಕೆಶಿ.

ದೆಹಲಿಯಲ್ಲಿ ಡಿಕೆ ಶಿವಕುಮಾರ್ ತಂತ್ರ

ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದು, ಅಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಹೊಸ ಸಚಿವ ಸಂಪುಟದ ಮಾದರಿ ಹಾಗೂ ತಮ್ಮೊಂದಿಗೆ ಪ್ರಮಾಣವಚನ ಸ್ವೀಕರಿಸಲಿರುವ 8 ರಿಂದ 10 ಪ್ರಮುಖ ಸಚಿವರ ಪಟ್ಟಿಯ ಕುರಿತು ಹೈಕಮಾಂಡ್ ನಿರ್ದೇಶನ ಪಡೆಯಲಿದ್ದಾರೆ. ಇದೇ ವೇಳೆ, ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ತಮ್ಮ ಆಪ್ತ ಜ್ಯೋತಿಷಿ ದ್ವಾರಕನಾಥ್ ಗುರೂಜಿ ಅವರಿಂದ ಮೂರು ವಿಭಿನ್ನ ಶುಭ ಮುಹೂರ್ತಗಳನ್ನು ಪಡೆದಿರುವ ಡಿಕೆಶಿ, ಹೈಕಮಾಂಡ್ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಲಭ್ಯತೆಯನ್ನು ನೋಡಿಕೊಂಡು ದಿನಾಂಕ ಫಿಕ್ಸ್ ಮಾಡಲು ಮುಂದಾಗಿದ್ದಾರೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಅಧಿಕೃತ ಸಭೆ ನಡೆಸಿ, ಶಾಸಕಾಂಗ ನಾಯಕನ ಆಯ್ಕೆಯಾದ ಬಳಿಕ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಡಿಕೆ ಸಹೋದರರ ಮೌನ ಮತ್ತು ಅಭಿಮಾನಿಗಳ ಜೈಕಾರ

ಇಷ್ಟೆಲ್ಲಾ ಸಂಚಲನ ನಡೆಯುತ್ತಿದ್ದರೂ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಸದ್ಯಕ್ಕೆ ಮೌನ ಮಂತ್ರ ಅನುಸರಿಸುತ್ತಿದ್ದಾರೆ. ಮಾಧ್ಯಮಗಳಿಗೆ ಯಾವುದೇ ಅಧಿಕೃತ ಹೇಳಿಕೆ ನೀಡದೆ ಕೇವಲ ಕೈಮುಗಿಯುತ್ತಾ ವಿಕ್ಟರಿ ಸಿಂಬಲ್ ತೋರಿಸುತ್ತಿರುವ ಡಿಕೆಶಿ ನಡೆ ಕುತೂಹಲ ಮೂಡಿಸಿದೆ. ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿ, ‘ಪಕ್ಷದ ಮುಂದಿನ ಅಧಿಕೃತ ನಿರ್ಧಾರಕ್ಕೆ ನಾವೆಲ್ಲರೂ ಕಾಯೋಣ’ ಎಂದಿದ್ದಾರೆ. ಇತ್ತ ಬೆಂಗಳೂರಿನ ಸದಾಶಿವನಗರದ ನಿವಾಸದಿಂದ ಡಿಕೆಶಿ ಹೊರಡುವಾಗ ಅಭಿಮಾನಿಗಳು ‘ಡಿಕೆ ಡಿಕೆ’ ಎಂದು ಘೋಷಣೆ ಕೂಗಿದರೆ, ವಿಜಯಪುರದ ಗಾಂಧಿ ವೃತ್ತದಲ್ಲಿ ಅಭಿಮಾನಿಗಳು ಬೃಹತ್ ಬ್ಯಾನರ್ ಹಿಡಿದು, ಪಟಾಕಿ ಸಿಡಿಸಿ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ.

ಹೈಕಮಾಂಡ್ ನಾಯಕರಿಗೆ ಕೃತಜ್ಞತೆ ಸಲ್ಲಿಸಲಿರುವ ಸಿದ್ದರಾಮಯ್ಯ

ಮತ್ತೊಂದೆಡೆ, ಮಧ್ಯರಾತ್ರಿಯೇ ದೆಹಲಿ ತಲುಪಿರುವ ಸಿದ್ದರಾಮಯ್ಯ ಅವರು ಕರ್ನಾಟಕ ಭವನಕ್ಕೆ ತೆರಳದೆ ನೇರವಾಗಿ ಐಟಿಸಿ ಮೌರ್ಯ (ITC Maurya) ಹೋಟೆಲ್‌ನಲ್ಲಿ ತಂಗಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಲಿರುವ ಸಿದ್ದರಾಮಯ್ಯ, ತಮ್ಮ ಅಧಿಕಾರಾವಧಿಗೆ ನೀಡಿದ ಸಹಕಾರಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆತ್ಮೀಯ ಕ್ಷಣ! ಇಲ್ಲಿವೆ ಅಪರೂಪದ ಚಿತ್ರಗಳು

ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿ ರಾಜ್ಯ ರಾಜಕೀಯದ ಮುಂದಿನ ಸೌಹಾರ್ದಯುತ ನಡೆಗಳ ಬಗ್ಗೆ ಚರ್ಚಿಸಲಿದ್ದಾರೆ. ಒಟ್ಟಿನಲ್ಲಿ ಕರುನಾಡಿನ ಜನರ ಚಿತ್ತವೀಗ ಸಂಪೂರ್ಣವಾಗಿ ದೆಹಲಿಯತ್ತ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 am, Fri, 29 May 26

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us