ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದು ಈಗ ರಾಷ್ಟ್ರೀಯ ದಾಖಲೆಯ ಹೊಸ್ತಿಲಲ್ಲಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೇ 20ಕ್ಕೆ 3 ವರ್ಷ ಪೂರ್ಣಗೊಳ್ಳಲಿದೆ. ಅದಕ್ಕೂ 4 ದಿನ ಮೊದಲೇ ಸಿಎಂ ಸಿದ್ದರಾಮಯ್ಯ ತಮ್ಮ ಹಲವು ದಾಖಲೆಗಳ ಸಾಲಿನಲ್ಲಿ ಮತ್ತೊಂದು ಸಾಧನೆ ಬರೆದಿದ್ದಾರೆ. ಅದೇನೆಂದರೆ ಕರ್ನಾಟಕದ ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಿದ ಏಕೈಕ ವ್ಯಕ್ತಿ ಎಂಬುದು ಅವರ ಮತ್ತೊಂದು ಗರಿಮೆ. ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದು ಈಗ ರಾಷ್ಟ್ರೀಯ ದಾಖಲೆಯ ಹೊಸ್ತಿಲಲ್ಲಿ ಇದ್ದಾರೆ. ಇಲ್ಲಿದೆ ಸಿದ್ದು ಸಾಧನೆಯ ಹಾದಿ.

ಬೆಂಗಳೂರು, (ಮೇ 18): ನಾಯಕತ್ವ ಗೊಂದಲಗಳ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ಕರ್ನಾಟಕದ (Karnataka) ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಿದ ಏಕೈಕ ವ್ಯಕ್ತಿ ಎನ್ನುವ ದಾಖಲೆ ಬರೆದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೇ 20ಕ್ಕೆ 3 ವರ್ಷ ಪೂರ್ಣಗೊಳ್ಳಲಿದೆ. ಅದಕ್ಕೂ ಮೊದಲೇ ಸಿಎಂ ಸಿದ್ದರಾಮಯ್ಯ ತಮ್ಮ ಹಲವು ದಾಖಲೆಗಳ ಸಾಲಿನಲ್ಲಿ ಮತ್ತೊಂದು ಸಾಧನೆ ಬರೆದಿದ್ದು ಕರ್ನಾಟಕದ ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಿದ ಏಕೈಕ ವ್ಯಕ್ತಿ ಎಂಬುದು ಅವರ ಮತ್ತೊಂದು ಗರಿಮೆ. ಇದರ ಜೊತೆಗೆ ಅತಿ ಹೆಚ್ಚು ಬಜೆಟ್ ಮಂಡಿಸಿದ ರಾಷ್ಟ್ರೀಯ ದಾಖಲೆ ಹೊಸ್ತಿಲಲ್ಲಿ ಸಹ ಇದ್ದಾರೆ.
- ಅರಸು ದಾಖಲೆ ಹಿಂದಿಕ್ಕಿ ಸಿಎಂ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ
- ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ
- ಬಜೆಟ್ ಮಂಡಿಸಿದ ರಾಷ್ಟ್ರೀಯ ದಾಖಲೆ ಹೊಸ್ತಿಲಲ್ಲಿ ನಿಂತಿರುವ ಸಿದ್ದರಾಮಯ್ಯ
ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ
ಮೈಸೂರು ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸುವ ಮೂಲಕ 1977ರಲ್ಲಿ ಸಾರ್ವಜನಿಕ ಸೇವೆಗೆ ಪಾದಾರ್ಪಣೆ ಮಾಡಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯ ಬದುಕಿನ 50ನೇ ವರ್ಷಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಕಾಲಿರಿಸಲಿದ್ದಾರೆ. ಇದೇ ವೇಳೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ 8 ವರ್ಷಗಳನ್ನು ಪೂರೈಸಿದ್ದಾರೆ. ಈ ಮೂಲಕ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿರುವ ಮೊದಲ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನೂ ನೋಡಿ: ರಾಜ್ಯ ರಾಜಕಾರಣದಲ್ಲಿ ಹೊಸ ದಾಖಲೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅಚ್ಚರಿ ಮಾತು
ದೇವರಾಜ ಅರಸು ದಾಖಲೆ ಹಿಂದಿಕ್ಕಿದ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆ ಹೊಂದಿದ್ದರು. ಆ ದಾಖಲೆಯನ್ನು ಈಗಾಗಲೇ ಸಿದ್ದರಾಮಯ್ಯ ಹಿಂದಿಕ್ಕಿ ಮುಂದುವರಿದಿದ್ದಾರೆ. ವಿಶೇಷವೆಂದರೆ, ಅರಸು ಮತ್ತು ಸಿದ್ದರಾಮಯ್ಯ ಅವರ ಸಿದ್ಧಾಂತಗಳನ್ನು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೋಲಿಕೆ ಮಾಡುತ್ತಾರೆ. ಸ್ವತಃ ಸಿದ್ದರಾಮಯ್ಯ ಅವರು ಈ ಹೋಲಿಕೆಯನ್ನು ನಿರಾಕರಿಸಿದ್ದರು. ಆದರೂ ಅಧಿಕಾರದಲ್ಲಿದ್ದಾಗ ರೂಪಿಸಿದ ಯೋಜನೆಗಳು, ನೀತಿ-ನಿರೂಪಣೆಗಳು ಪರಸ್ಪರ ತಾಳೆ ಆಗುತ್ತವೆ. ದೇವರಾಜ ಅರಸು ಅವರ ಸಿದ್ಧಾಂತ ಮತ್ತು ಯೋಜನೆಗಳು ಹಿಂದುಳಿದ ವರ್ಗಗಳ ಪಾಲಿಗೆ ಭಾಗ್ಯದ ಬೆಳಕು ಎಂದು ಬಣ್ಣಿಸಿದರೆ ಸಿದ್ದರಾಮಯ್ಯ ಅವರ ಮಾರ್ಗ ದಲಿತ ಮತ್ತು ಅಲ್ಪಸಂಖ್ಯಾತರನ್ನೂ ಒಳಗೊಂಡು ಅಹಿಂದ ವರ್ಗದ ಪಕ್ಷಪಾತಿ ಎಂದು ಗುರುತಿಸಲಾಗುತ್ತಿದೆ.
ರಾಷ್ಟ್ರೀಯ ದಾಖಲೆಯ ಹೊಸ್ತಿಲಲ್ಲಿ!
ಕೇವಲ ದಾಖಲೆ ಅವಧಿಗೆ ಆಡಳಿತ ಮಾಡಿದ ಹಿರಿಮೆ ಮಾತ್ರವಲ್ಲದೇ ಕರ್ನಾಟಕದಲ್ಲಿ 12 ಬಾರಿ ಮುಂಗಡ ಪತ್ರ ಮಂಡಿಸಿದ ಸಾಧನೆ ಮಾಡಿದ್ದಾರೆ. ಗುಜರಾತ್‌ನ ಹಣಕಾಸು ಸಚಿವರಾಗಿದ್ದ ವಜುಭಾಯಿ ವಾಲಾ ಅವರು ದೇಶದಲ್ಲೇ ಅತಿ ಹೆಚ್ಚು ಅಂದರೆ 18 ಬಾರಿ ಬಜೆಟ್ ಮಂಡಿಸಿದ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಆ ದಾಖಲೆ ಸರಿಗಟ್ಟಲು ಸಿದ್ದರಾಮಯ್ಯ ಅವರಿಗೆ ಇನ್ನೊಂದೇ ಬಜೆಟ್ ಬಾಕಿ ಇದೆ. ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆಯ ನಡುವೆಯೇ ಸಿದ್ದರಾಮಯ್ಯ ಈ ರಾಷ್ಟ್ರೀಯ ದಾಖಲೆಯನ್ನು ಬರೆಯಲಿದ್ದಾರೆ ಎಂದೇ ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ನಿಜಲಿಂಗಪ್ಪ ದಾಖಲೆಯೂ ಇತಿಹಾಸದ ಪುಟಕ್ಕೆ
ಕರ್ನಾಟಕ ರಾಜ್ಯ ಘೋಷಣೆಗೂ ಮೊದಲು ಎಸ್.ನಿಜಲಿಂಗಪ್ಪ ಅವರೂ ಎರಡು ಬಾರಿ ಸುದೀರ್ಘ ಅವಧಿಗೆ ಸಿಎಂ ಆಗಿದ್ದರು. ಮೊದಲನೇ ಬಾರಿಗೆ 1956ರಲ್ಲಿ 1 ವರ್ಷ 197 ದಿನ ಹಾಗೂ ಎರಡನೇ ಬಾರಿಗೆ ೧೯೬೨ರಲ್ಲಿ ೫ ವರ್ಷ ೩೪೩ ದಿನಗಳ ಅವಧಿಗೆ ರಾಜ್ಯವನ್ನಾಳಿದ್ದರು. ತದನಂತರ ದೇವರಾಜ ಅರಸುರವರು ಮೈಸೂರು ರಾಜ್ಯದಲ್ಲಿ 1972ರಲ್ಲಿ 1 ವರ್ಷ 225 ದಿನಗಳಿಗೆ, ನಂತರ ಕರ್ನಾಟಕ ರಾಜ್ಯ ಘೋಷಣೆ ನಂತರ 1973 ರಿಂದ 4 ವರ್ಷ 60 ದಿನಗಳಿಗೆ ಹಾಗೂ ಮೂರನೇ ಬಾರಿಗೆ 1978ರಲ್ಲಿ 1 ವರ್ಷ 318 ದಿನಗಳಿಗೆ ಸಿಎಂ ಆಗಿ ಒಟ್ಟಾರೆ 7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದರು. ಸಿದ್ದರಾಮಯ್ಯ ಅವರು 2013ರಿಂದ 5 ವರ್ಷ 4 ದಿನಗಳ ಕಾಲ ಮತ್ತು 2023ರಿಂದ ಇಂದಿನ ತನಕ 2 ವರ್ಷ 361 ದಿನಗಳವರೆಗೆ 8 ವರ್ಷ ಪೂರೈಸಿದ್ದಾರೆ. ಇದೇ ಮೇ 20ಕ್ಕೆ ಎರಡನೇ ಬಾರಿಗೆ ಸಿಎಂ ಆಗಿ 3 ವರ್ಷ ಪೂರೈಸಲಿದ್ದಾರೆ.

