
ನವದೆಹಲಿ,(ಮೇ 26): ದೆಹಲಿಯಲ್ಲಿಂದು (New Delhi) ನಡೆದ ಸರಣಿ ಸಭೆಯಲ್ಲಿ ರಾಜ್ಯಸಭಾ ಚುನಾವಣೆ ಮಾತ್ರವಲ್ಲದೇ ಪ್ರಮುಖವಾಗಿ ಕರ್ನಾಟಕ (Karnataka) ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಜತೆ ಪ್ರತ್ಯೇಕ ಸಭೆ ನಡೆಸಿದ್ದು, ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸರಿಸುಮಾರು 45 ನಿಮಿಷಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಸಿದ್ದರಾಮಯ್ಯಗೆ ರಾಜ್ಯಸಭೆ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಇದಕ್ಕೆ ಸಿಎಂ ಸಿದ್ದರಾಮಯ್ಯ ಯಾವುದೇ ಆಫರ್ಗೆ ಸಮ್ಮಿಸಿಲ್ಲ ಎನ್ನಲಾಗಿದೆ.
ಒನ್ ಟು ಒನ್ ಮಾತುಕತೆ ವೇಳೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಂದೆ ಅಧಿಕಾರ ಹಂಚಿಕೆ ಪ್ರಸ್ತಾಪ ಇಟ್ಟಿದ್ದು, ಇದರ ಜೊತೆ ಸಿದ್ದರಾಮಯ್ಯಗೆ ರಾಜ್ಯಸಭೆಯ ಆಫರ್ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯಸಭೆ ಮಾತ್ರವಲ್ಲದೇ ಪುತ್ರ ಯತೀಂದ್ರ ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿಯೂ ಸಹ ರಾಹುಲ್ ಗಾಂಧಿ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಸಿಎಂ ಸಿದ್ದರಾಮಯ್ಯ ಮಾತ್ರ ರಾಹುಲ್ ಗಾಂಧಿ ಆಫರ್ಗಳಿಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸದೆ ಸೈಲೆಂಟ್ ಆಗಿ ಬೇಸರದಲ್ಲೇ ಆಚೆ ಬಂದು ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ನಿಂತುಕೊಂಡರು.
ಆಫರ್ ಮುಂದಿಟ್ಟಾಗ ಸಿಎಂ ಸಿದ್ದರಾಮಯ್ಯ ಸಹ ರಾಹುಲ್ ಮುಂದೆ ನೇರ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ ಎನ್ನಲಾಗಿದೆ. ನಾನು ರಾಜ್ಯಸಭೆಗೆ ಹೋದರೆ, ಮುಂದಿನ ಕರ್ನಾಟಕದ ಸಿಎಂ ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದಕ್ಕೆ ರಾಹುಲ್ ಪ್ರತಿಕ್ರಿಯಿಸಿ, ಹೈಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತೆ. ನಿಮ್ಮನ್ನು ಸಹ ವಿಶ್ವಾಸಕ್ಕೆ ಪಡೆದು ನಿರ್ಧಾರಕೈಗೊಳ್ಳುತ್ತೆ ಎಂದಿದ್ದಾರಂತೆ.
ಸಭೆಯಲ್ಲಿ ಕೇವಲ ರಾಜ್ಯಸಭೆ ಬಗ್ಗೆ ಚರ್ಚೆಯಾಗಿದೆ ಎಂದು ಕೆಸಿ ವೇಣುಗೋಪಾಲ್ ರಾಜಕೀಯ ಹೇಳಿಕೆಯಾಗಿ ನೀಡಿದ್ದಾರೆ. ಆದ್ರೆ, ಅಸಲಿಗೆ ರಾಹುಲ್ ಗಾಂಧಿ ಸಿದ್ದರಾಮಯ್ಯನವರ ಜೊತೆ ನಾಯತ್ವ ಬದಲಾವಣೆಯನ್ನೂ ಸಹ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಆಲಿಸಿದ ಸಿದ್ದರಾಮಯ್ಯ, ಸಭೆ ಮುಗಿಯುತ್ತಿದ್ದಂತೆಯೇ ಯಾವುದೇ ಪ್ರತಿಕ್ರಿಯೆ ನೀಡಿದೇ ಬೇಸರ ಮುಖದಲ್ಲೇ ನೇರವಾಗಿ ತಮ್ಮ ಬೆಂಬಲಿಗರು ತಂಗಿರುವ ಜಾರ್ಜ್ ನಿವಾಸಕ್ಕೆ ತೆರಳಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದ್ದು, ಮುಂದೆ ಈ ಬೆಳವಣಿಗೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 7:51 pm, Tue, 26 May 26