ಅಜ್ಜ-ಮೊಮ್ಮಗನ ನಡುವೆ ಜಿದ್ದು: ಒಂದೇ ಕಚೇರಿಗೆ 2 ಬೀಗ ಜಡಿದ ಕಾಂಗ್ರೆಸ್ MLA, MLC ಬೆಂಬಲಿಗರು
ಹಂಪನಗೌದ ಬಾದರ್ಲಿ ಸಿಂಧನೂರು ಶಾಸಕ. ಇನ್ನು ಬಸನಗೌದ ಬಾದರ್ಲಿ ವಿಧಾನಪರಿಷತ್ ಸದಸ್ಯ. ಇವರಿಬ್ಬರು ಸಂಬಂಧದಲ್ಲಿ ಅಜ್ಜ-ಮೊಮ್ಮಗ. ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಆದ್ರೆ ಇಬ್ಬರ ಮಧ್ಯೆ ದಾಯಾದಿಗಳ ರೀತಿ ಕಾದಾಟಕ್ಕೆ ಕಾಡಾ ಕಚೇರಿಯ ಫೈಟ್ ಇನ್ನೂ ಬಗೆಹರಿದಿಲ್ಲ. ಉಸ್ತುವಾರಿ ಸಚಿವರು ಈ ಬಗ್ಗೆ ಸೈಲೆಂಟಾಗೆ ಜಾರಿಕೊಂಡಿದ್ದಾರೆ.

ರಾಯಚೂರು, (ಆಗಸ್ಟ್ 18): ರಾಯಚೂರು ಜಿಲ್ಲೆ ಸಿಂಧನೂರಿನ ಇಬ್ಬರು ಘಟಾನುಘಟಿ ಕಾಂಗ್ರೆಸ್ ನಾಯಕರ ನಡುವೆ ಈ ಜಿದ್ದು ಮುಂದುವರಿದಿದೆ. ಸಿಂಧನೂರಿನಲ್ಲಿರುವ ಕಾಡಾ ಕಚೇರಿಯನ್ನ ತಮ್ಮ ಸರ್ಕಾರಿ ಕಚೇರಿಯನ್ನಾಗಿಸಿಕೊಳ್ಳುವುದಕ್ಕೆ ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿ ಕೊನೆಗೆ ಅದು ಬೀಗ ಜಡಿದಿರೋದಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ನಡುವಿನ ಫೈಟ್ ಮತ್ತೊಂದು ಹಂತ ತಲುಪಿದೆ.
ಇಲ್ಲಿ ಇಂಟರಸ್ಟಿಂಗ್ ಸಂಗತಿ ಅಂದ್ರೆ ಸರ್ಕಾರಿ ಕಚೇರಿಗೆ ಪೈಪೋಟಿ ನಡೆಸುತ್ತಿರುವವರು ಕಾಂಗ್ರೆಸ್ ಶಾಸಕ ಹಾಗೂ ಎಂಎಲ್ಸಿ .ಇಬ್ಬರು ಸಂಬಂಧದಲ್ಲಿ ಅಜ್ಜ-ಮೊಮ್ಮಗ ಆಗಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದ ಟಿಕೆಟ್ಗಾಗಿ ಮೊಮ್ಮಗ ಬಸನಗೌಡ ಬಾದರ್ಲಿ ತೀವ್ರ ಲಾಭಿ ನಡೆಸಿದದ್ದರು. ಹೈಕಮಾಂಡ್ ಮನವಿ, ಭರವಸೆ ಮೇರೆಗೆ ಟಿಕೆಟ್ ತಾತ ಹಂಪನಗೌಡ ಬಾದರ್ಲಿಗೆ ಸಿಕ್ಕಿತ್ತು. ಆದ್ರೆ, ಇದೀಗ ಹೈಕಮಾಂಡ್ ಬಸನಗೌದ ಬಾದರ್ಲಿ ಅವರನ್ನು ಎಂಎಲ್ಸಿ ಮಾಡಿದೆ. ಈ ಮೂಲಕ ನುಡಿದಂತೆ ನಡೆದುಕೊಂಡಿದೆ. ಆದ್ರೆ, ಇದು ತಾತ ಹಂಪನಗೌಡ ಬಾದರ್ಲಿ ಕಣ್ಣು ಕೆಂಪಾಗಿಸಿದೆ.
ಇದನ್ನೂ ಓದಿ: ನೂತನ ಕಾಂಗ್ರೆಸ್ MLC ಬಾದರ್ಲಿ ಸ್ವಾಗತಕ್ಕೆ ಹಾಕಿದ್ದ ಬೃಹತ್ ಫ್ಲೆಕ್ಸ್ ಬಿದ್ದು ಮೂವರಿಗೆ ಗಾಯ
ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿರುವ ಬಸನಗೌದ ಬಾದರ್ಲಿ ಮತ್ತು ಹಂಪನಗೌಡ ಬಾದರ್ಲಿ ನಡುವೆ ಇದೀಗ ಕಚೇರಿ ಗುದ್ದಾಟ ಶುರುವಾಗಿದೆ. ನಗರದಲ್ಲಿರುವ ಕಾಡಾ ಕಚೇರಿಯನ್ನ ತಮ್ಮ ಸರ್ಕಾರಿ ಕಚೇರಿಯನ್ನಾಗಿಸಿಕೊಳ್ಳೋದಕ್ಕೆ ಇಬ್ಬರ ನಡುವೆ ಬಿಗ್ ಫೈಟ್ ಏರ್ಪಿಟ್ಟಿದ್ದು, ಎರಡು ಕಡೆ ಬೆಂಬಲಿಗರು ಒಂದೇ ಕಚೇರಿಗೆ ಎರಡು ಪ್ರತ್ಯೇಕ ಬೀಗ ಹಾಕಿ ಲಾಕ್ ಮಾಡಿದ್ದಾರೆ. ಇದರಿಂದ ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಮತದಾರ ಎಲ್ಲಿ ಹೋಗಬೇಕೆಂದು ಗೊತ್ತಾಗದೇ ತೊಂದರೆ ಅನುಭವಿಸುವಂತಾಗಿದೆ. ಇನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ತಾತ-ಮೊಮ್ಮಗಳ ಜಗಳದಿಂದ ಸೈಲೆಂಟಾಗಿಯೇ ಜಾರಿಕೊಂಡಿದ್ದಾರೆ.
ಮೊಮ್ಮಗ ಬಸನಗೌಡ ಬಾದರ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಇತ್ತ ಅಜ್ಜ ಹಂಪನಗೌಡ ಹಿರಿಯ ನಾಯಕರಾಗಿದ್ದರಿಂದ ಸಿದ್ದರಾಮಯ್ಯ ಮತ್ತು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಆದ್ರೆ, ಈ ಬಾರಿ ಹಾಗೂ ಕಳೆದ ಲೋಕಸಭಾ ಚುನಾವಣೆಗಳಲ್ಲಿ ಹಂಪನಗೌಡ ಬಾದರ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯನವರ ಬಲಗೈ ಬಂಟ ಎಂದೇ ಕರೆಯಿಸಿಕೊಳ್ಳುವ ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ಪರ ಅಷ್ಟಾಗಿ ಕೆಲಸ ಮಾಡಿಲ್ಲ ಎನ್ನುವ ಆರೋಪ ಇದೆ. ಈ ವಿಚಾರವನ್ನು ಸಿದ್ದರಾಮಯ್ಯನವರ ಗಮನಕ್ಕೂ ತರಲಾಗಿತ್ತು. ಇದರಿಂದ ಇದು ಸಹಜವಾಗಿಯೇ ಸಿದ್ದರಾಮಯ್ಯನವರ ಕಣ್ಣು ಕೆಂಪಾಗಿಸಿದ್ದು, ಬಸನಗೌಡ ಬಾದರ್ಲಿ ಅವರನ್ನು ಎಂಎಲ್ಸಿ ಮಾಡಲು ಸಂದರ್ಭದಲ್ಲಿ ಯಾವುದೇ ಚಕಾರ ಎತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಅಜ್ಜ ಎಂಎಲ್ಎ ಟಿಕೆಟ್ ಗಿಟ್ಟಿಸಿಕೊಂಡು ಗೆದ್ದು ಬೀಗಿದ್ರೆ, ನಾನೇನು ಕಮ್ಮಿಯಿಲ್ಲ ಎಂದು ಬಸನಗೌಡ ಬಾದರ್ಲಿ ಎಂಎಲ್ಸಿ ಸ್ಥಾನ ಗಿಟ್ಟಿಸಿಕೊಂಡು ಅಜ್ಜನಿಗೆ ಠಕ್ಕರ್ ಕೊಟ್ಟಿದ್ದಾರೆ.
ಇದೀಗ ಇಬ್ಬರ ನಡುವೆ ಕಾಡಾ ಕಚೇರಿ ಗುದ್ದಾಟ ಶುರುವಾಗಿದೆ. ನೂತನ ವಿಧಾನಪರಷತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆಯೇ ಬಸನಗೌಡ ಬಾದರ್ಲಿ, ಕಾಡಾ ಕಚೇರಿಯನ್ನು ತಮ್ಮ ಕಚೇರಿಯನ್ನಾಗಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದುಕೊಂಡಿದ್ದರು. ಆದ್ರೆ, ಇದಕ್ಕೆ ಹಂಪನಗೌಡ ಬಾದರ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಆ ಕಚೇರಿಯನ್ನು ತಮಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಎರಡೂ ಬಣದ ಬೆಂಬಲಿಗರು ತಮಗೆ ಬೇಕೆಂದು ಕಾಡಾ ಕಚೇರಿಗೆ ಬೀಗ ಜಡಿದಿದ್ದಾರೆ.
ಕ್ಷೇತ್ರದಲ್ಲಿ ಅಜ್ಜ ಹಂಪನಗೌಡಗೆ ಕೌಂಟರ್ ಕೊಡಲು ಮೊನ್ನೆಯಷ್ಟೆ ಬಸನಗೌಡ ಬಾದರ್ಲಿ ಸಿಂಧನೂರು ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದರು. ಇದರಿಂದ ಸಾರ್ವಜನಿಕರಿಗೆ ಭಾರಿ ತೊಂದರೆಯಾಗಿದೆ ಅಂತೆಲ್ಲಾ ಹಂಪನಗೌಡ ಬಾದರ್ಲಿ ಬೆಂಬಲಿಗರು ಆರೋಪಿಸಿದ್ದರು. ಇನ್ನು ಯಾರದ್ದೋ ಮೇಲಿನ ಸೇಡಿಗೆ ಹೀಗೆ ಸಾರ್ವಜನಿಕರಿಗೆ ತೊಂದ್ರೆ ಕೊಟ್ಟರೆ ಹೇಗೆ? ಒಲಂಪಿಕ್ ಪದಕಿ ಗೆದ್ದೋರ ರೀತಿ ರೋಡ್ ಶೋ ಮಾಡೋ ಅವಶ್ಯಕತೆ ಇತ್ತಾ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಂಸದ ವಿರುಪಾಕ್ಷಪ್ಪ ಕಿಡಿಕಾರಿದ್ದಾರೆ.
ಅದೇನೇ ಇರಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಅಜ್ಜ-ಮೊಮ್ಮಗನ ನಡುವಿನ ಪ್ರತಿಷ್ಠೆಯಿಂದ ಕ್ಷೇತ್ರದಲ್ಲಿ ಶಾಸಕರ ಕಚೇರಿ ಇಲ್ಲದಂತಾಗಿದ್ದು, ತಮ್ಮ ಸಮಸ್ಯೆ ಯಾರ ಬಳಿಗೆ ಎಲ್ಲಿ ಹೋಗಿ ಹೇಳಬೇಕೆಂದು ಜನರಿಗೆ ದಿಕ್ಕುತೋಚದಂತಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ