ಸ್ಮಶಾನದ ಜಾಗದಲ್ಲಿ ನಿರ್ಮಾಣವಾಗುತ್ತಿರೊ ತಾಯಿ ಮಕ್ಕಳ ದೊಡ್ಡ ಆಸ್ಪತ್ರೆ: ಶಾಸಕ- ಸಂಸದ ವಿರುದ್ಧ ಸ್ಥಳೀಯರ ಆಕ್ರೋಶ
ರುದ್ರಭೂಮಿಯನ್ನು ಲೇವಲಿಂಗ್ ಮಾಡಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿದೆ. ಸ್ಮಶಾನದ ಜಾಗದಲ್ಲಿ 10.4 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ.
ರಾಯಚೂರು: ಸಮಾಧಿಗಳ ಮೇಲೆ ಆಸ್ಪತ್ರೆ ನಿರ್ಮಾಣ ಮಾಡ್ತಿರುವ ಆರೋಪ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಕೇಳಿ ಬಂದಿದೆ. ಸದ್ಯ ಸಿಂಧನೂರಿನಲ್ಲಿ ಕಾಮಗಾರಿ ನಡೆಯುತ್ತಿದ್ದು ಸ್ಮಶಾನದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ. ಸಿಂಧನೂರಿನಲ್ಲಿ ವಿವಿಧೆಡೆ 30 ಎಕರೆಯಷ್ಟು ಬೇರೆ ಜಾಗವಿದೆ ಆ ಜಾಗದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಆದ್ರೆ ಸ್ಮಶಾನ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಬಸನಗೌಡ ಬಾದರ್ಲಿ ಆಸ್ಪತ್ರೆ ಆಡಳಿತ ಮಂಡಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ರುದ್ರಭೂಮಿಯನ್ನು ಲೇವಲಿಂಗ್ ಮಾಡಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿದೆ. ಸ್ಮಶಾನದ ಜಾಗದಲ್ಲಿ 10.4 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಇದೇ ಜನವರಿ 5 ರಂದು ಗುದ್ದಲಿ ಪೂಜೆ ನಡೆದಿತ್ತು. ಸಮಾಧಿಯೊಂದರ ಮೇಲೆಯೇ ಗುದ್ದಲಿ ಪೂಜೆ ನಡೆಸಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಆದ್ರೆ ಶಾಸಕ ಹಾಗೂ ಸಂಸದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂಧನೂರು ಪಟ್ಟಣದಿಂದ ಸುಮಾರು 8 ಕಿಮಿ ದೂರದಲ್ಲಿ ಈ ಸ್ಮಶಾನವಿದೆ. ಕಲ್ಲೂರು, ಕಲ್ಲೂರು ಕ್ರಾಸ್ ಸೇರಿ ಮೂರ್ನಾಲ್ಕು ಹಳ್ಳಿಯವರು ಈ ರುದ್ರಭೂಮಿಯನ್ನು ಬಳಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ಯಾರೇ ಮೃತಪಟ್ಟರೂ ಇದೇ ರುದ್ರಭೂಮಿಯಲ್ಲಿ ಮಣ್ಣು ಮಾಡಲಾಗುತ್ತೆ. ಆದ್ರೆ ಇದೇ ರುದ್ರಭೂಮಿಯಲ್ಲಿ ಹೆಣಗಳ ಮೇಲೆ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರುದ್ರಭೂಮಿ ಹೆಸರಿನ ಬರಹಕ್ಕೆ ಪೇಂಟ್ ಮಾಡಿಸಿ ಕಾಮಗಾರಿ ನಡೆಸಲಾಗುತ್ತಿದೆ. ಸಿಂಧನೂರು ಪಟ್ಟಣದಲ್ಲೇ ವಿವಿಧ ಕಡೆ ಸುಮಾರು 30 ಎಕರೆಗಳಷ್ಟು ಸರ್ಕಾರಿ ಜಾಗವಿದೆ. ಹೀಗಿದ್ದರೂ ರುದ್ರಭೂಮಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಚಾಲನೆ ನೀಡಲಾಗಿದ್ದು ಸ್ಮಶಾನದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಕೆಲಸಗಾರರು ಹೂತಿದ್ದ ಮೃತದೇಹ ಹೊರತೆಗೆದು, ಗುಂಡಿ ಹಾಗೆ ಬಿಟ್ಟಿದ್ದಾರೆ. ಇದೇ ಜಾಗದಲ್ಲಿ ಅಂತ್ಯಕ್ರಿಯೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಎಚ್ಚೆತ್ತುಕೊಳ್ಳುಬೇಕು ಎಂದು ಕಾಂಗ್ರೆಸ್ ಮುಖಂಡ ಬಸನಗೌಡ ಬಾದರ್ಲಿ ಆಗ್ರಹಿಸಿದ್ದಾರೆ. ಕೂಡಲೇ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕು. ಪಟ್ಟಣದಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಕಟ್ಟಡ ಕಾಮಗಾರಿ ಶುರುಮಾಡಿದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.