ಇಂದು ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ ಸಿಂಚನ: ಇನ್ನೆಷ್ಟು ದಿನ ಇರಲಿದೆ ಮಳೆ?
ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲ ಧಗೆಯಿಂದ ಬೇಸತ್ತ ಜನರಿಗೆ ನೆಮ್ಮದಿ ತಂದಿದೆ. ರಾಜ್ಯ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಸಾಧಾರಣ ಮಳೆಯ ಮುನ್ಸೂಚನೆ ನೀಡಿದೆ. ಮಂಗಳೂರು ಮತ್ತು ಹಾಸನದಲ್ಲಿಯೂ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಯ ಸಾಧ್ಯತೆಯಿದ್ದು, ಮಾರ್ಚ್ 15ರ ನಂತರ ಒಣ ಹವಾಮಾನ ಇರಲಿದೆ.

ಬೆಂಗಳೂರು, ಮಾರ್ಚ್ 12: ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಿನ್ನೆ ಬೆಂಗಳೂರಿನಲ್ಲಿ ವರ್ಷದ ಮೊದಲ ಮಳೆಯ (Rain) ಸಿಂಚನವಾಗಿದೆ. ಬಿಸಿಲ ಧಗೆಗೆ ಬೇಸತ್ತು ಹೋಗಿದ್ದ ಸಿಟಿಮಂದಿಗೆ ಮಳೆರಾಯ ತಂಪೆರೆದಿದ್ದ. ಇಂದು ಮತ್ತು ನಾಳೆ ಬೆಂಗಳೂರು (bangaluru) ಸೇರಿದ್ದಂತೆ ರಾಜ್ಯದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಮಾನ ಇಲಾಖೆ ಮೂನ್ಸಚನೆ ನೀಡಿದೆ. ಹೀಗಿರುವಾಗ ಇತ್ತ ಮಂಗಳೂರು, ಹಾಸನದಲ್ಲಿ ಮಳೆಯ ಸಿಂಚನವಾಗಿದೆ. ಹೀಗಾಗಿ ಜನರಿಗೆ ಸಂತಸ ಉಂಟಾಗಿದೆ.
ರಾಜ್ಯದಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳ ಸಾಧ್ಯತೆ: ಸಿಎಸ್ ಪಾಟೀಲ್
ನಗರದಲ್ಲಿ ರಾಜ್ಯ ಹವಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ಮಾತನಾಡಿ, ತಿಂಗಳ ಆರಂಭದಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಿತ್ತು. ತಾಪಮಾನ ಏರಿಕೆ ಬೆನ್ನಲೆ ನಿನ್ನೆಯಿಂದ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru rains: ಬಿರು ಬಿಸಿಲಿನ ನಡುವೆಯೂ ಬೆಂಗಳೂರಿನಲ್ಲಿ ಮಳೆ, ವರುಣ ಸಿಂಚನದಿಂದ ಜನರು ಕೂಲ್ ಕೂಲ್
ಬೆಂಗಳೂರು, ಚಿಕ್ಕಮಗಳೂರು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ. ಮಂಗಳೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಸಹಜ ತಾಪಮಾನಕ್ಕಿಂತ 4 ರಿಂದ 5 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗಿದೆ. ಹಾಗಾಗಿ ಮಂಗಳೂರು ಹಾಗೂ ಕಲಬುರಗಿಯಲ್ಲಿ ಹೀಟ್ ವೇವ್ ಎಚ್ಚರಿಕೆ ಇದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಭಾಗದಲ್ಲಿ ಮಳೆ ಸಿಂಚನ
ಈ ನಡುವೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್ 15ರ ಬಳಿಕ ಒಣ ಹವೆ ಮುಂದುವರೆಯಲ್ಲಿದೆ. ಈ ತಿಂಗಳ ಕೊನೆಯಲ್ಲಿ ಬೆಂಗಳೂರಿಗೆ ಗರಿಷ್ಠ ತಾಪಮಾನ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೇಸಿಗೆಯ ಮೊದಲ ಮಳೆ ಸಿಂಚನ: ಕೆಂಡದಂಥಾ ಬಿಸಿಲಿಗೆ ಬಸವಳಿದ ಬೆಂಗಳೂರಿಗೆ ತಂಪೆರೆದ ಮಳೆರಾಯ
ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಕರಾವಳಿಯ ಕೆಲವೆಡೆ ಇಂದು ಮಳೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು, ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಮಳೆ ಆಗಿದ್ದು, ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ತಂಪೆರೆಯಲಾಗಿದೆ. ಸದ್ಯ ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಹಾಸನದಲ್ಲೂ ಮಳೆ: ಜನರು ಸಂತಸ
ಅದೇ ರೀತಿಯಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವಿವಿಧೆಡೆ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಹೆತ್ತೂರು, ಶುಕ್ರವಾರ ಸಂತೆ ಸುತ್ತಮುತ್ತ ಜೋರು ಮಳೆ ಸುರಿದಿದ್ದು, ಮೊದಲ ಮಳೆಯಿಂದ ಕಂಡು ಜನರು ಸಂತಸಗೊಂಡಿದ್ದಾರೆ.
ಗುಡುಗು ಸಹಿತ ಮಳೆ
ಚಾಮರಾಜನಗರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆ ಆಗಿದೆ. ಅರ್ಧಗಂಟೆ ಮಳೆ ಸುರಿದಿದೆ. ಕಳೆದ ಎರಡು ತಿಂಗಳಿಂದ ಬಿರುಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ವರುಣನ ಸಿಂಚನವಾಗಿದೆ. ಬೆಳಿಗ್ಗೆಯಿಂದ ಬಿರುಬಿಸಿಲು ಸಂಜೆಯಾಗುತ್ತಿದ್ದಂತೆ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿ ಆಗಿತ್ತು. ಜಿಲ್ಲೆಯ ಪೂರ್ವ ಭಾಗದಿಂದ ಗುಡುಗು ಮಿಂಚು ಸಮೇತ ಮಳೆ ಸುರಿದಿದೆ. ಹೀಗಾಗಿ ಪೂರ್ವ ಮುಂಗಾರು ಮಳೆಗೆ ರೈತಾಪಿ ವರ್ಗದಲ್ಲಿ ಮಂದಹಾಸ ಉಂಟಾಗಿದೆ. ತುಮಕೂರಿನಲ್ಲಿ ಕೂಡ ಗುಡುಗು ಗಾಳಿ ಸಹಿತ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ವರುಣರಾಯ ತಂಪೆರೆದಿದ್ದಾನೆ. ಮಳೆ ಬಂದಿದ್ದರಿಂದ ಜನರು ಖುಷ್ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Wed, 12 March 25