ಸುದ್ದಿ ಅಥವಾ ಸಂದೇಶ ನಿಜವೋ ಸುಳ್ಳೋ? ರಾಜ್ಯ ಸರ್ಕಾರದ ವೆಬ್ಸೈಟ್ನಲ್ಲಿ ಚೆಕ್ ಮಾಡಿ ನೋಡಿ
ನೀವು ಓದಿದ ಸುದ್ದಿ, ವಾಟ್ಸ್ಆ್ಯಪ್ ಸಂದೇಶದಲ್ಲಿ ಬಂದ ಸುದ್ದಿ ನಿಜವೋ , ಸುಳ್ಳೋ ಎಂದು ಅರಿಯಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆರಂಭಿಸಿರುವ ಕರ್ನಾಟಕ ಪೊಲೀಸ್ ಫ್ಯಾಕ್ಟ್ಚೆಕ್ ವೆಬ್ಸೈಟ್ಗೆ ಭೇಟಿ ನೀಡಿ
ನೀವು ಓದಿದ ಸುದ್ದಿ, ವಾಟ್ಸ್ಆ್ಯಪ್ ಸಂದೇಶದಲ್ಲಿ ಬಂದ ಸುದ್ದಿ ನಿಜವೋ , ಸುಳ್ಳೋ ಎಂದು ತಿಳಿಯುವುದು ಹೇಗೆ? ಎಂಬ ಪ್ರಶ್ನೆ ಬಹುತೇಕ ಜನರ ಮನಸ್ಸಿನಲ್ಲಿ ಮೂಡಿರುತ್ತದೆ. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಾಕಷ್ಟು ಫ್ಯಾಕ್ಟ್ಚೆಕ್ ವೆಬ್ಸೈಟ್ಗಳು ಇವೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಪೊಲೀಸ್ ಫ್ಯಾಕ್ಟ್ಚೆಕ್ ವೆಬ್ ಸೈಟ್ ಆರಂಭಿಸಿತ್ತು. ಕೊರೊನಾವೈರಸ್ಗೆ ಸಂಬಂಧಿಸಿದ ಹಲವಾರು ಸುಳ್ಳುಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ಈ ವೆಬ್ಸೈಟ್ ಆರಂಭಿಸಲಾಗಿತ್ತು.
ಡಿಜಿಪಿ ಪ್ರವೀಣ್ ಸೂದ್ ಅವರ ಕನಸಿನ ಕೂಸು ಆಗಿರುವ ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ಚೆಕ್ ವೆಬ್ಸೈಟ್ನ್ನು ಸಿಐಡಿ ಸೈಬರ್ ಕ್ರೈಮ್ ವಿಭಾಗ ಮತ್ತು Check4Spam ನಿರ್ವಹಣೆ ಮಾಡುತ್ತದೆ. ಇಂಟರ್ನೆಟ್ ಸೌಲಭ್ಯ ಇಲ್ಲದೇ ಇದ್ದರೆ 9449878805 ಕರೆ ಮಾಡಿಯೂ ಸುದ್ದಿಗಳ ಸತ್ಯಾಸತ್ಯತೆಯನ್ನು ಅರಿಯಬಹುದು. ಒಂದು ವೇಳೆ ನಿಮಗೆ ಲಭಿಸಿದ ಸಂದೇಶ ಸತ್ಯವೋ ಸುಳ್ಳೊ ಎಂದು ಅರಿಯಲು ಸಮಯ ಇಲ್ಲದೇ ಇದ್ದರೆ ಆ ಸಂದೇಶಗಳನ್ನು ಹಂಚಲೇಬೇಡಿ. ಯಾಕೆಂದರೆ ಇದು ಸುಳ್ಳು ಸುದ್ದಿಗಳು ಹರಡುವಿಕೆಯನ್ನು ತಡೆಯುತ್ತದೆ.
ಕರ್ನಾಟಕ ರಾಜ್ಯ ಪೊಲೀಸರ ವೆಬ್ಸೈಟ್ ತೆರೆದರೆ ಅದರ ಮುಖಪುಟದಲ್ಲಿ ಮಂಗಳೂರಿನಲ್ಲಿ ಹಕ್ಕಿ ಜ್ವರ ಭೀತಿ, ಮಸೀದಿಯಲ್ಲಿ ಧ್ವನಿ ವರ್ಧಕ ತೆಗೆದುಹಾಕಲು ನೋಟಿಸ್ , ಕೋವಿಡ್ ರೋಗಿಯಾಗಿರುವ ಮಹಿಳೆ ಬೆಂಗಳೂರಿನಲ್ಲಿ ನಾಪತ್ತೆ ಮೊದಲಾದ ಸುಳ್ಳುಸುದ್ದಿಗಳ ಫ್ಯಾಕ್ಟ್ ಚೆಕ್ ಮಾಡಿರುವುದನ್ನು ಕಾಣಬಹುದು.
ಇನ್ನು ಮುಂದೆ ನಿಮಗೆ ಬಂದ ಸಂದೇಶ ಅಥವಾ ನೀವು ಓದಿದ, ನೋಡಿದ ಸುದ್ದಿ ಸುಳ್ಳು ಎಂಬ ಸಂದೇಹ ಬಂದರೆ ಈ ವೆಬ್ ಸೈಟ್ನಲ್ಲಿ Submit Suspicious Content ಎಂಬ ವಿಭಾಗದಲ್ಲಿ ನಿಮ್ಮ ಸಂದೇಶವನ್ನು ದಾಖಲಿಸಬಹುದು.
Fact Check | ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ಗೆ ಥಳಿತ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?