ಹಂಪಿ ವಿಶ್ವವಿದ್ಯಾಲಯ ಉಳಿಸಿ: ‘ಕರವೇ’ ಅಭಿಯಾನಕ್ಕೆ ನಿರ್ದೇಶಕ ಮಂಸೋರೆ, ನಟ ಸಂಚಾರಿ ವಿಜಯ್ ಸಾಥ್
‘ಕಲೆ, ಸಂಸ್ಕೃತಿ, ಭಾಷೆಗಳ ಅಧ್ಯಯನಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಶ್ರಮಿಸಿದ ಹಂಪಿ ವಿವಿ ಇಂದು ಆರ್ಥಿಕ ಸಂಕಷ್ಟದಲ್ಲಿದೆ. ತಕ್ಷಣವೇ ಸರ್ಕಾರ ಸೂಕ್ತ ರೀತಿಯ ಅನುದಾನ ಕೊಡಬೇಕು’ ಎಂದು ನಿರ್ದೇಶಕ ಮಂಸೋರೆ ಸರ್ಕಾರಕ್ಕೆ ಕೋರಿದ್ದಾರೆ.
‘ಕಲೆ, ಸಂಸ್ಕೃತಿ, ಭಾಷೆಗಳ ಅಧ್ಯಯನಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಶ್ರಮಿಸಿದ ಹಂಪಿ ವಿವಿ ಇಂದು ಆರ್ಥಿಕ ಸಂಕಷ್ಟದಲ್ಲಿದೆ. ತಕ್ಷಣವೇ ಸರ್ಕಾರ ಸೂಕ್ತ ರೀತಿಯ ಅನುದಾನ ಕೊಡಬೇಕು’ ಎಂದು ನಿರ್ದೇಶಕ ಮಂಸೋರೆ ಸರ್ಕಾರಕ್ಕೆ ಕೋರಿದ್ದಾರೆ.
ಹಂಪಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ನೀಡುವುದರ ಜೊತೆಗೆ ಕುಸಿದು ಬಿದ್ದಿರುವ ಆಡಳಿತ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವಂತೆ ‘ಕರವೇ’ ಸಾಮಾಜಿಕ ಜಾಲತಾಣದಲ್ಲಿ ಹಮ್ಮಿಕೊಂಡ ಅಭಿಯಾನಕ್ಕೆ ಧ್ವನಿಗೂಡಿಸಿರುವ ಮಂಸೋರೆ, ‘ನಾನು ಚಿತ್ರಕಲಾ ಕ್ಷೇತ್ರದಿಂದ ಗುರುತಿಸಿಕೊಂಡವನು. ನಾನು ಪದವಿಗೆ ಸೇರಿದಾಗ ಸುಮಾರು 75 ಚಿತ್ರಕಲಾ ಶಾಲೆಗಳಿದ್ದವು. ಅಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳಿಗೂ ಎಸ್ಎಸ್ಎಲ್ಸಿ ಬೋರ್ಡಿನಿಂದ ಪ್ರಮಾಣಪತ್ರಗಳನ್ನು ಕೊಡಲಾಗುತ್ತಿದ್ದುದರಿಂದ ಪದವಿ ಮಾನ್ಯತೆ ಒದಗಿರಲಿಲ್ಲ. ಈ ವಿಷಯವಾಗಿ ವಿವಿಧ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ, ಹೋರಾಟ ಮಾಡಿದರೂ ನ್ಯಾಯ ದೊರೆತಿರಲಿಲ್ಲ. ಇಂಥ ಸಮಯದಲ್ಲಿ ಚಿತ್ರಕಲಾಶಾಲೆಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು ಹಂಪಿ ವಿಶ್ವವಿದ್ಯಾಲಯ. ದೇಸಿ ಸೊಗಡಿಗೆ ಶ್ರಮಿಸಿದ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಲ್ಲಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕು’ ಎಂದಿದ್ದಾರೆ.
ಅಲ್ಲದೆ, ನಟ ಸಂಚಾರಿ ವಿಜಯ್ ಕೂಡ ಈ ವಿಷಯವಾಗಿ, ‘ಹಲವಾರು ವರ್ಷಗಳಿಂದ ಅನುದಾನ ಸಿಗದೇ ಸಿಬ್ಬಂದಿ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೆ, ವಿದ್ಯಾರ್ಥಿಗಳು ಫೆಲೋಶಿಪ್ ದೊರೆಯಬೇಕು. ಸ್ಥಗಿತವಾಗಿರುವಂಥ ಎಲ್ಲಾ ಕೋರ್ಸ್ಗಳೂ ಪುನಾರಂಭವಾಗಬೇಕು. ಒಟ್ಟಾರೆಯಾಗಿ ವಿಶ್ವವಿದ್ಯಾಲಯ ಸಹಜ ಸ್ಥಿತಿಗೆ ಮರಳುವಂತಾಗಬೇಕು. ’ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರಕ್ಕೆ ‘ಕರವೇ’ ಸಲ್ಲಿಸಿರುವ ಮನವಿಗಳು: ಹಂಪಿ ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಕಾಯಂ ಸಿಬ್ಬಂದಿ ಸಂಬಳವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕೂಡಲೇ ಇವರುಗಳ ವೇತನ ನೀಡಲು ಆದೇಶಿಸಬೇಕು. ವಿದ್ಯಾರ್ಥಿಗಳಿಗೆ ಕೂಡಲೇ ಫೆಲೋಶಿಪ್ ನೀಡಬೇಕು. ಸ್ಥಗಿತಗೊಂಡಿರುವ ಎಲ್ಲಾ ಕೋರ್ಸ್ಗಳನ್ನೂ ಪುನಾರಂಭಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಪ್ರವೇಶಾತಿ ಆರಂಭಗೊಳ್ಳಬೇಕು ಮತ್ತು ವಸತಿ ನಿಲಯಗಳನ್ನು ತೆರೆಯಬೇಕು. ಅಲ್ಲದೆ, ಪಿ.ಎಚ್ಡಿ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಬೇಕು. ದೂರಶಿಕ್ಷಣ ಕೋರ್ಸ್ಗಳನ್ನು ಮುಂದುವರಿಸಬೇಕು. ಡಾ. ಚಂದ್ರಶೇಖರ್ ಕಂಬಾರರು ಕುಲಪಲತಿಗಳಾಗಿದ್ದಾಗ ಸರ್ಕಾರಕ್ಕೆ ನೀಡಿದ್ದ ಶಿಫಾರಸಿನಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿಯಾಗಿ 500 ಎಕರೆ ಜಮೀನು ಮಂಜೂರು ಮಾಡಬೇಕು.
ಇದರೊಂದಿಗೆ ವಾರ್ಷಿಕ ಅನುದಾನದ ಜೊತೆಯಲ್ಲಿ ವಿಶ್ವವಿದ್ಯಾಲಯಕ್ಕೆ ಬೇರೆ ಬೇರೆ ಯೋಜನೆಗಳ ಮೂಲಕ ಇನ್ನಷ್ಟು ಅನುದಾನಗಳನ್ನು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಿಸಬೇಕು. 2017-18ರ ಸಾಲಿನಲ್ಲಿ ಡಾ. ಮಲ್ಲಿಕಾ ಘಂಟಿಯವರ ಅವಧಿಯಲ್ಲಿ ಸರ್ಕಾರದಿಂದ ಸುಮಾರು 25.16 ಕೋಟಿ ರೂಪಾಯಿಗಳ ಅನುದಾನ ದೊರೆತಿದ್ದು, ಆ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಅಲ್ಲದೆ ವಿಶ್ವವಿದ್ಯಾಲಯದ ಇಂದಿನ ಸ್ಥಿತಿಗೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸಾಮರ್ಥ್ಯವಿರುವವರನ್ನು ನೇಮಿಸಬೇಕು.