ವಿಜಯಪುರ, ಬೆಳಗಾವಿ, ದಾವಣಗೆರೆ ಜಿಲ್ಲೆಗಳಲ್ಲಿ ಭೀಕರ ಬರ ಬವಣೆ: ಇನ್ನೂ ಸಾಕಷ್ಟು ಬರ ಪೀಡಿತ ತಾಲೂಕುಗಳು ಇವೆ, ಸರ್ಕಾರ ಅದರತ್ತ ಗಮನ ಹರಿಸಲಿ
ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಬರ ಪೀಡಿತ ತಾಲೂಕುಗಳ ಪಟ್ಟಿ ತಯಾರಿಸಿರುವ ರಾಜ್ಯ ಸರ್ಕಾರ 62 ತಾಲೂಕುಗಳು ಬರ ಪೀಡಿತವಾಗಿವೆ ಎಂಬ ವರದಿ ನೀಡಿದೆ. ಆದರೆ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ವಿಜಯಪುರ, ಬೆಳಗಾವಿ, ದಾವಣಗೆರೆ ಜಿಲ್ಲೆಗಳ ಜನ ಭೀಕರ ಬರದಿಂದಾಗಿ ಬವಣೆ ಪಡುತ್ತಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 5: ವಿಜಯಪುರ, ಬೆಳಗಾವಿ, ದಾವಣಗೆರೆ ಜಿಲ್ಲೆಗಳ ( Vijayapur, Belgaum, Davangere) ಜನ ಭೀಕರ ಬರದಿಂದಾಗಿ (drought) ಬವಣೆ ಪಡುತ್ತಿದ್ದಾರೆ. ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಬರ ಪೀಡಿತ ತಾಲೂಕುಗಳ ಪಟ್ಟಿ ತಯಾರಿಸಿರುವ ರಾಜ್ಯ ಸರ್ಕಾರ 62 ತಾಲೂಕುಗಳು ಬರ ಪೀಡಿತವಾಗಿವೆ (drought-affected taluks) ಎಂಬ ವರದಿ ನೀಡಿದೆ. ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ 13 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಜುಲೈ ತಿಂಗಳಲ್ಲಿ ಒಂದಷ್ಟು ಮಳೆಯಾಗಿತ್ತು. ಹಾಗಾಗಿ ರೈತರು ಸಾಕಷ್ಟು ಬಿತ್ತನೆ ಮಾಡಿದ್ದರು. ಮುಂಗಾರು ಹಂಗಾಮಿನಲ್ಲಿ 7.90 ಲಕ್ಷ ಹೆಕ್ಟೇರ್ ಗುರಿಯ ಪೈಕಿ 5.78 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಹೆಚ್ಚಾಗಿ ತೊಗರಿಯನ್ನೇ ರೈತರು ಬಿತ್ತನೆ ಮಾಡಿದ್ದರು. ಎಕರೆಗೆ 10 ರಿಂದ 12 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಆದರೆ ಆಗಸ್ಟ್ನಲ್ಲಿ ಕಡಿಮೆ ಪ್ರಮಾಣದ ಮಳೆಯಾದ ಕಾರಣ ಮುಂಗಾರು ಬೆಳೆ ಹಾಳಾಗಿದೆ.
ವಾರ್ಷಿಕ ವಾಡಿಕೆ ಮಳೆ 594.4 ಮಿಲಿ ಮೀಟರ್ ಪೈಕಿ ಜನವರಿಯಿಂದ ಸೆಪ್ಟೆಂಬರ್ 5 ರವರೆಗೆ 255.8 ಮಿಲಿ ಮೀಟರ್ ಮಳೆಯಾಗಿದೆ. ಬಿತ್ತನೆಗೆ ಪೂರಕವಾಗಬೇಕಿದ್ದ ಜೂನ್ ನಲ್ಲಿ 18.8 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ವಾಡಿಕೆಯಂತೆ 85.4 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಇನ್ನು ಜುಲೈನಲ್ಲಿ 92.0 ಮಿಲಿ ಮೀಟರ್ ಮಳೆ ಸುರಿದಿದ್ದು ವಾಡಿಕೆಗಿಂತ 20 ಮಿಲಿ ಮೀಟರ್ ಹೆಚ್ಚಾಗಿದೆ. ವಾಡಿಕೆಯಂತೆ 72.5 ಮಿಲಿ ಮೀಟರ್ ಆಗಬೇಕಿತ್ತು. ಆಗಸ್ಟ್ನಲ್ಲಿ 41.6 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ವಾಡಿಕೆಯಂತೆ 78.0 ಮಿಲಿ ಮೀಟರ್ ಆಗಬೇಕಿತ್ತು. ಆಗಸ್ಟ್ನಲ್ಲಿ 32.4 ಮಿಲಿ ಮೀಟರ್ ಮಳೆಯ ಕೊರತೆ ಕಾರಣ ಬೆಳೆಗಳು ಹಾಳಾಗಿವೆ. ಸರ್ಕಾರ ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಮುಂಗಾರು ಬಿತ್ತನೆ ಮಾಡಿದ ರೈತರಿಗೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯ ಮಾಡುತ್ತಿದ್ದಾರೆ.
ಬೆಳಗಾವಿ ವರದಿ: ಬಿರುಕು ಬಿಟ್ಟ ಭತ್ತದ ಗದ್ದೆಗಳು ಭೀಕರ ಬರದ ಛಾಯೆ ತೋರಿಸುತ್ತಿವೆ
ಇನ್ನು ಬೆಳಗಾವಿ ತಾಲೂಕಿನಲ್ಲಿ ಐದು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಹಾನಿಗೀಡಾಗಿದ್ದು, ಭತ್ತ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಳ್ಳೂರ, ಧಾಮಣೆ, ವಡಗಾಂವ, ಶಾಹಪುರ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಭತ್ತದ ಬೆಳೆ ಸಂಪೂರ್ಣವಾಗಿ ಒಣಗಿದ್ದು, ಬಾಯ್ತೆರೆದ ಭೂಮಿಯನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಈ ಅವಧಿಯಲ್ಲಿ ರೈತರು ಎರಡನೇ ಬಾರಿಗೆ ಭತ್ತ ನಾಟಿ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಬಿರುಕು ಬಿಟ್ಟ ಭತ್ತದ ಗದ್ದೆಗಳು ಭೀಕರ ಬರದ ಛಾಯೆ ತೋರಿಸುತ್ತಿವೆ. ಬೆಳಗಾವಿ ತಾಲೂಕು, ಖಾನಾಪುರ ತಾಲೂಕು ಬರ ಪೀಡಿತ ತಾಲೂಕು ಘೋಷಣೆ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ. ಬೆಳಗಾವಿ ತಾಲೂಕು, ಖಾನಾಪುರ ತಾಲೂಕು ಕೈ ಬಿಟ್ಟಿದ್ದಕ್ಕೆ ರೈತರ ಆಕ್ರೋಶಗೊಂಡಿದ್ದಾರೆ.
Also Read: ಬರ ಘೋಷಣೆಗೆ ಅರ್ಹತೆ ಪಡೆದ ಕರ್ನಾಟಕದ 62 ತಾಲೂಕುಗಳು: ಕೃಷ್ಣ ಬೈರೇಗೌಡ
ಬರ ಪೀಡಿತ ತಾಲೂಕು ಘೋಷಣೆ ಮಾಡದಿದ್ರೇ ಉಪವಾಸ ಸತ್ಯಾಗ್ರಹದ ಎಚ್ಚರಿಕೆಯನ್ನು ನೀಡಿದ್ದಾರೆ. ಡಿಸಿ ಕಚೇರಿ ಮುಂದೆ ಹೋರಾಟ ಮಾಡುವುದಾಗಿಯೂ ರೈತರು ಎಚ್ಚರಿಕೆ ನೀಡಿದ್ದಾರೆ. ಈ ವರೆಗೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕೂಡಲೇ ಬರಗಾಲ ಘೋಷಣೆ ಮಾಡಿ ಎಕರೆಗೆ ಐವತ್ತು ಸಾವಿರ ನೀಡುವಂತೆ ಪಟ್ಟುಹಿಡಿದಿದ್ದಾರೆ.
ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯ ಜನಕ್ಕೆ ಭೀಕರ ಬರದ ಭೀತಿ:
ದಾವಣಗೆರೆ ಜಿಲ್ಲೆಯಲ್ಲೂ ಭೀಕರ ಬರದ ಭೀತಿ ಎದುರಾಗಿದೆ. ಕಳೆದ ಮೂರು ತಿಂಗಳಲ್ಲಿ ಮಳೆಯೇ ಸುರಿದಿಲ್ಲ. ಬಿತ್ತನೇ ಮಾಡಿ ಮಳೆಯಾಗದೇ ಬೆಳೆ ಹಾಳಾಗಿದೆ. ಮರು ಬಿತ್ತನೇ ಮಾಡಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ಮಳೆ ಬಂದಿಲ್ಲ. ಒಂದು ಲಕ್ಷ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಜೂನ್-ಜುಲೈ-ಅಗಸ್ಟ್ ತಿಂಗಳಲ್ಲಿ ಮಳೆ ಸುರಿದಿಲ್ಲ. ಆಗಸ್ಟ್ ತಿಂಗಳಲ್ಲಿ ಶೇ. 75 ರಷ್ಟು ಮಳೆ ಕೊರತೆಯಾಗಿದೆ. ಶೇ 50ರಿಂದ 70 ರಷ್ಟು ಮೆಕ್ಕೆಜೋಳ ಹಾಳಾಗಿರುವ ಸಾಧ್ಯತೆಯಿದೆ. ಉಳಿದ ಬೆಳೆ ಬರಬೇಕಾದ್ರೆ ತುರ್ತು ಮಳೆಯ ಅಗತ್ಯವಿದೆ.
ಹಾಗಾಗಿ ದಾವಣಗೆರೆ ಜಿಲ್ಲೆಯಲ್ಲಿ ಭೀಕರ ಬರದ ಛಾಯೆ ಮೂಡಿದ್ದು, ನೆಲ ಬಿಟ್ಟು ಮೇಲೆದ್ದ ಮೆಕ್ಕೆಜೋಳ ತೆನೆ ಕಟ್ಟದೆ ಸಂಪೂರ್ಣ ಹಾಳಾಗುತ್ತಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.