ಶಿವಮೊಗ್ಗ ಪಾಲಿಕೆ ಜಾಗದಲ್ಲಿ ಪುರಾತನ ಕಾಲದ ಗಣೇಶನ ವಿಗ್ರಹ ಪತ್ತೆ; ಸ್ಥಳದಲ್ಲೇ ದೇವಸ್ಥಾನ ನಿರ್ಮಾಣಕ್ಕೆ ಪಟ್ಟು
ಪಾಲಿಕೆ ಜಾಗವನ್ನು ಕ್ಲೀನ್ ಮಾಡುವ ಸಂದರ್ಭದಲ್ಲಿ ಪುರಾತನ ಗಣೇಶನ ವಿಗ್ರಹ ಪತ್ತೆಯಾಗಿದೆ. ಸದ್ಯ ಈ ಗಣೇಶನ ವಿಗ್ರಹ ಸಿಕ್ಕ ಜಾಗದಲ್ಲೇ ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗ: ನಗರದ 30ನೇ ವಾರ್ಡ್ನ ಸೀಗೆಹಟ್ಟಿ ಬಡಾವಣೆಯ ಖಾಲಿ ಜಾಗದಲ್ಲಿ ಪಾಲಿಕೆ ವತಿಯಿಂದ ಸ್ವಚ್ಛಕಾರ್ಯ ನಡೆಯುತ್ತಿದ್ದ ಸಮಯದಲ್ಲಿ ಪುರಾತನ ಗಣಪತಿ ವಿಗ್ರಹ ಪತ್ತೆಯಾಗಿದ್ದು, ಪುರಾತನ ವಿಗ್ರಹದ ವಿಚಾರ ಗೊಂದಲ ಮತ್ತು ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು. ಗಣೇಶನ ವಿಗ್ರಹ ವಿಚಾರವು ಕೆಲವೇ ಗಂಟೆಗಳಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡು. ಈ ವಿಗ್ರಹವು ಹಳೆಯ ಕಾಲದ ವಿಗ್ರಹ ಆಗಿರುವುದರಿಂದ ಸ್ಥಳೀಯರು ಈ ವಿಗ್ರಹ ದೊರೆತ ಜಾಗದಲ್ಲಿಯೇ ದೇವಸ್ಥಾನವಾಗಬೇಕೆಂದುಪಟ್ಟು ಹಿಡಿದಿದ್ದರು. ಆದರೆ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಪಾಲಿಕೆ ಜಾಗದಲ್ಲಿ ಅವಕಾಶ ನಿರಾಕರಿಸಿದ್ದಾರೆ. ಈ ಜಾಗದಲ್ಲಿ ಪಾಲಿಕೆಯಿಂದ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿದೆ. ಈ ನಡುವೆ ಘಟನಾ ಸ್ಥಳಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮುಖಂಡರು ಜಮಾ ಆಗಿದ್ದರು.
ಇನ್ನು ಈ ಜಾಗದಲ್ಲಿ ಅರಳಿಮರ, ಬೇವಿನ ಮರ ಮತ್ತು ನಾಗರಕಟ್ಟೆ ಇದ್ದು, ಈ ಭಾಗದಲ್ಲಿ ದೇವರ ನಾಗರಹಾವು ಈಗಲೂ ಸಹ ಓಡಾಡಿಕೊಂಡು ಇದೆಯಂತೆ. ಅದು ಇಲ್ಲಿರುವ ಜನರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಆದ್ದರಿಂದ ಗಣಪತಿ ಸಿಕ್ಕ ಜಾಗದಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಾರ್ವಜನಿಕರೇ ದೇಣಿಗೆ ಮೂಲಕ ಹಣ ಸಂಗ್ರಹಿಸಿ ದೇವಸ್ಥಾನ ಕಟ್ಟುವುದಕ್ಕೆ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ನ ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಅವರು ದೇವಸ್ಥಾನಕ್ಕೂ ಒಂದಿಷ್ಟು ಜಾಗ ಬಿಟ್ಟುಕೊಡಬೇಕು. ಪಕ್ಷಾತೀತವಾಗಿ ಈ ಸ್ಥಳದಲ್ಲಿ ಒಂದು ಮಾದರಿ ದೇವಸ್ಥಾನದ ನಿರ್ಮಾಣ ಮಾಡಲು ಪಾಲಿಕೆ ಅನುಮತಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಪುರಾತತ್ವ ಇಲಾಖೆಯ ಪ್ರಕಾರ ಈ ವಿಗ್ರಹವು 14 ಮತ್ತು 15ನೇ ಶತಮಾನಕ್ಕೆ ಸೇರಿದ್ದಾಗಿದೆ. ಭೂ ಉತ್ಖನನಕ್ಕೆ ಅವಕಾಶ ಕೊಟ್ಟರೆ ಮಾಡುವುದಾಗಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಪುರಾತತ್ವ ಇಲಾಖೆಯು ಗಣೇಶನ ವಿಗ್ರಹ ಕುರಿತು ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ನೀಡಲಿದೆ. ಜೆಸಿಬಿ ಮಣ್ಣು ತೆಗೆಯುವ ಸಂದರ್ಭದಲ್ಲಿ ಸಿಕ್ಕಿದ ಪುರಾತನ ಗಣೇಶನ ಕಲ್ಲಿನ ಮೂರ್ತಿಯನ್ನು ಸ್ಥಳಿಯರು ಹೂವಿನ ಹಾರ, ಕರ್ಪೂರ, ಊದುಬತ್ತಿ ಹಚ್ಚಿ ಪೂಜೆ ಮಾಡಿದ್ದಾರೆ. ಗಣಪತಿ ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯರು ಪಟ್ಟು ಹಿಡಿದು ನಿಂತಿದ್ದರು. ಬಿಗುವಿನ ವಾತಾವರಣ ನಿರ್ಮಾಣ ಆಗುತ್ತಿದ್ದಂತೆ ಅಲ್ಲಿಗೆ ದೊಡ್ಡಪೇಟೆ ಪೊಲೀಸರು ಬಂದಿದ್ದಾರೆ. ಈ ನಡುವೆ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮತ್ತು ಪುರಾತತ್ವ ಇಲಾಖೆಯ ಉಪನಿರ್ದೇಶಕ ಶೆಜೇಶ್ವರ್ ಹಾಗೂ ಭಜರಂಗದಳ ಮುಖಂಡ ದೀನದಯಾಳ್ ಅಲ್ಲಿಗೆ ದೌಡಾಯಿಸಿದರು. ಹೀಗೆ ಗಣಪತಿ ವಿಗ್ರಹ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಎಂಟ್ರಿಕೊಟ್ಟಿದ್ದಾರೆ.
ಗಣಪತಿ ದೇವಸ್ಥಾನದ ಕುರಿತು ಎದ್ದ ವಿವಾದದ ಕುರಿತು ಶಾಸಕ ಕೆ.ಎಸ್ ಈಶ್ವರಪ್ಪ ಅವರು ದೂರವಾಣಿ ಕರೆಯ ಮೂಲಕ ನಾಳೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಗಣೇಶ್ನ ವಿಗ್ರಹ ಸಿಕ್ಕ ಜಾಗದಲ್ಲಿ ಭೂ ಉತ್ಖನನದ ಅವಕಾಶ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳವುದಾಗಿ ಈಶ್ವರಪ್ಪ ಭರವಸೆ ಕೊಟ್ಟಿದ್ದಾರೆ. ಇನ್ನು ಪಾಲಿಕೆ ಆಯುಕ್ತರು ಮುಖರಾಯಿ, ಎ.ಎಸ್.ಡಿ.ಐ ಮತ್ತು ಪುರಾತತ್ವ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ವಿಶ್ಲೇಷಣೆ ನಡೆಸಿ ನಂತರ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ತಾತ್ಕಾಲಿಕವಾಗಿ ಕಾಮಗಾರಿಗೆ ಆಯುಕ್ತರು ಬ್ರೇಕ್ ಕೊಟ್ಟಿದ್ದಾರೆ. ಇನ್ನು ಗಣೇಶನ ವಿಗ್ರಹ ಸಿಕ್ಕ ಜಾಗದಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡಬೇಕೆಂದು ಭಜರಂಗದಳದ ಮುಖಂಡ ದೀನದಯಾಳ್ ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಶಂಕಿತ ಉಗ್ರ ಶಾರಿಖ್ ಆಗಸ್ಟ್ 15 ರಂದು ಶಿವಮೊಗ್ಗದಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದ: ಅಲೋಕ್ ಕುಮಾರ್, ಎಡಿಜಿಪಿ
ಪಾಲಿಕೆ ಜಾಗದಲ್ಲಿ ಸಿಕ್ಕಿರುವ ಪುರಾತನ ಗಣೇಶನ ವಿಗ್ರಹ ಕುರಿತು ವಿವಾದ ಶುರುವಾಗಿದೆ. ದೇವಸ್ಥಾನ ನಿರ್ಮಾಣದ ಕುರಿತು ತೀರ್ಮಾನ ಆಗುವ ವರೆಗೆ ವಿಗ್ರಹವು ಪಾಲಿಕೆಯ ಕಚೇರಿಗೆ ಶೀಫ್ಟ್ ಆಗಿದೆ. ಇನ್ನು ಚುನಾವಣೆ ಸಮಯದಲ್ಲಿ ಈ ಗಣೇಶನ ವಿಗ್ರಹದ ವಿವಾದವು ಯಾವೆಲ್ಲ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಸದ್ಯ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ..
ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ