ಸರ್ಕಾರಿ ವೆಬ್‍ಸೈಟ್‍ಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು : ಟಿ.ಎಸ್.ನಾಗಾಭರಣ
ಸರ್ಕಾರಿ ಇಲಾಖೆಗಳ ಎಲ್ಲಾ ವೆಬ್‍ಸೈಟ್‍ಗಳಲ್ಲಿ ಮತ್ತು ತಂತ್ರಾಂಶಗಳಲ್ಲಿ ಕನ್ನಡ ಭಾಷೆಗೆ ಕಡ್ಡಾಯವಾಗಿ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಒತ್ತಾಯಿಸಿದ್ದಾರೆ.
ಶಿವಮೊಗ್ಗ: ಸರ್ಕಾರಿ ಇಲಾಖೆಗಳ ಎಲ್ಲಾ ವೆಬ್‍ಸೈಟ್‍ಗಳಲ್ಲಿ ಮತ್ತು ತಂತ್ರಾಂಶಗಳಲ್ಲಿ ಕನ್ನಡ ಭಾಷೆಗೆ ಕಡ್ಡಾಯವಾಗಿ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಒತ್ತಾಯಿಸಿದ್ದಾರೆ. ಬುಧವಾರ (ಸೆ. 8) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಕನ್ನಡ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕೆಲವು ಇಲಾಖೆಗಳ ವೆಬ್‍ಸೈಟ್‍ನಲ್ಲಿ ಮುಖಪುಟದಲ್ಲಿ ಕನ್ನಡ ಭಾಷೆ ಬಳಕೆ ಇದ್ದರೂ, ಮಾಹಿತಿಗಳು ಇಂಗ್ಲಿಷ್ ಭಾಷೆಯಲ್ಲಿವೆ ಎಂದು ತಿಳಿಸಿದರು.
ವೆಬ್‍ಸೈಟ್‍ಗಳಲ್ಲಿ ಪ್ರತಿ ಮಾಹಿತಿ ಕೂಡಾ ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇದೇ ರೀತಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ತಂತ್ರಾಂಶಗಳಲ್ಲಿ ಸಹ ಕಡ್ಡಾಯವಾಗಿ ಕನ್ನಡವನ್ನು ಅಳವಡಿಸಬೇಕು. ಜನಸಾಮಾನ್ಯರಿಗೆ ನೇರವಾಗಿ ಸೇವೆಯನ್ನು ಒದಗಿಸುವ ಇಲಾಖೆಗಳಲ್ಲಿ ಕನ್ನಡದ ಅನುಷ್ಟಾನ ಕಡ್ಡಾಯವಾಗಿ ಶೇ.100ರಷ್ಟು ಜಾರಿಯಾಗಬೇಕು ಎಂದು ಹೇಳಿದರು.
ಇದೇ ರೀತಿ ಬ್ಯಾಂಕ್, ಆರ್‍ಟಿಒ, ಮೆಸ್ಕಾಂ, ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು. ಇಲ್ಲಿ ಅರ್ಜಿ ನಮೂನೆಗಳು, ಚಲನ್ ಇತ್ಯಾದಿಗಳು ಕನ್ನಡದಲ್ಲಿಯೂ ಇರುವಂತೆ ಖಾತ್ರಿಪಡಿಸಬೇಕು. ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಇದನ್ನು ಅನುಷ್ಟಾನಗೊಳಿಸಬೇಕು ಎಂದರು.
ಬಹುತೇಕ ಇಲಾಖೆಗಳು ಕನ್ನಡದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದರೂ, ಸಂಪೂರ್ಣ ಅನುಷ್ಟಾನ ಇನ್ನೂ ಆಗುತ್ತಿಲ್ಲ. ವೈದ್ಯರು ನೀಡುವ ಪೋಸ್ಟ್‍ಮಾರ್ಟಂ ವರದಿ, ಬ್ಯಾಂಕ್‍ಗಳ ಪತ್ರ ವ್ಯವಹಾರ, ಸಾರ್ವಜನಿಕ ಸೇವೆಗಳು, ಔಷಧಿಗಳ ಹೆಸರು ಇತ್ಯಾದಿಗಳು ಕನ್ನಡದಲ್ಲಿ ಸಹ ಇರುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳು ಪ್ರಕಟಿಸುವ ಟೆಂಡರ್ ಅಧಿಸೂಚನೆಗಳು ಇನ್ನೂ ಇಂಗ್ಲಿಷ್‍ನಲ್ಲಿರುವುದನ್ನು ಗಮನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಟೆಂಡರ್ ಅಧಿಸೂಚನೆ ಪ್ರಕಟಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಅನುಷ್ಟಾನದಲ್ಲಿನ ಲೋಪಗಳ ಕುರಿತು ಪ್ರಾಧಿಕಾರಕ್ಕೆ ಬಂದಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಗೋಪಾಲಗೌಡ ಬಡಾವಣೆಯಲ್ಲಿರುವ ರಾಷ್ಟ್ರೀಯ ಬ್ಯಾಂಕ್‍ನಲ್ಲಿ ಅರ್ಜಿ ನಮೂನೆಗಳು ಕನ್ನಡದಲ್ಲಿ ಇಲ್ಲದ ಬಗ್ಗೆ ದೂರುಗಳು ಬಂದಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು. ಶಿಕ್ಷಕರ ಕೊರತೆಯಿಂದ ಮುಚ್ಚಲಾಗಿರುವ ಸರ್ಕಾರಿ ಶಾಲೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳ ವಿವರಗಳನ್ನು ಒದಗಿಸಬೇಕು. ಕನ್ನಡ ಕಲಿಕಾ ಅಧಿನಿಯಮ 2017 ಅನ್ವಯ ಪ್ರತಿ ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡವನ್ನು ಕಲಿಸಬೇಕಾಗಿದ್ದು, ಅದರ ಅನುಷ್ಟಾನ ಪರಿಶೀಲಿಸಬೇಕು. ಕನ್ನಡ ಅಂಕಿಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನವೆಂಬರ್ 1ರಿಂದ ಕನ್ನಡ ಅಂಕಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Wed, 7 September 22